ಬಿಲ್ಕೀಸ್ ಬಾನು ಪ್ರಕರಣ: ದೋಷಮುಕ್ತಗೊಳಿಸಲು ಕೋರಿದ್ದ 6 ಮಂದಿಯ ಅರ್ಜಿ ವಜಾಗೊಳಿಸಿದ ಸುಪ್ರೀಂ

Update: 2017-07-10 14:33 GMT

ಹೊಸದಿಲ್ಲಿ, ಜು.10: ಬಿಲ್ಕೀಸ್  ಬಾನು ಪ್ರಕರಣದಲ್ಲಿ ತಮ್ಮನ್ನು ದೋಷಿಗಳೆಂದು ಪರಿಗಣಿಸಿದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಐಪಿಎಸ್ ಅಧಿಕಾರಿ ಆರ್.ಎಸ್.ಭಗೋರ ಸೇರಿದಂತೆ ನಾಲ್ವರು ಪೊಲೀಸರು ಹಾಗೂ ಇಬ್ಬರು ವೈದ್ಯರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ನಿಮ್ಮ ವಿರುದ್ಧ ಸ್ಪಷ್ಟ ಸಾಕ್ಷಾಧಾರಗಳಿದ್ದರೂ ವಿಚಾರಣಾ ನ್ಯಾಯಾಲಯವೊಂದು ಯಾವುದೇ ಕಾರಣವಿಲ್ಲದೆ ಈ ಹಿಂದೆ ನಿಮ್ಮನ್ನು ದೋಷಮುಕ್ತಗೊಳಿಸಿತ್ತು ಎಂದು ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ ಮತ್ತು ಎಲ್.ನಾಗೇಶ್ವರ ರಾವ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್‌ನ ನ್ಯಾಯಪೀಠವೊಂದು ತಿಳಿಸಿದೆ.

ಐಪಿಎಸ್ ಅಧಿಕಾರಿ ಆರ್.ಎಸ್.ಭಗೋರ ಸೇರಿದಂತೆ 11 ಮಂದಿಯನ್ನು ವಿಚಾರಣಾ ನ್ಯಾಯಾಲಯವೊಂದು ದೋಷಮುಕ್ತಿಗೊಳಿಸಿತ್ತು. ಆದರೆ ಈ ತೀರ್ಪನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇವರಲ್ಲಿ ಓರ್ವ ಪೊಲೀಸ್ ಸಿಬ್ಬಂದಿ, ಇದ್ರಿಸ್ ಅಬ್ದುಲ್ ಸಯ್ಯದ್ ಮೇಲ್ಮನವಿ ಸಲ್ಲಿಸಿರಲಿಲ್ಲ.

ಸಾಂದರ್ಭಿಕ ಘಟನೆಗಳು ಭಗೋರರನ್ನು ಅನವಶ್ಯಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಿವೆ ಎಂಬ ವಕೀಲರ ವಾದವನ್ನು ಒಪ್ಪದ ಸುಪ್ರೀಂಕೋರ್ಟ್, ಭಗೋರ ಪ್ರಕರಣದ ಉಸ್ತುವಾರಿ ಅಧಿಕಾರಿಯಾಗಿದ್ದರು ಮತ್ತು ಎಲ್ಲಾ ಘಟನೆಗಳೂ ಅವರಿಗೆ ತಿಳಿದೇ ನಡೆದಿದೆ ಎಂದು ಅಭಿಪ್ರಾಯಪಟ್ಟಿತು. ಪ್ರಕರಣದಲ್ಲಿ ತಮ್ಮ ಕರ್ತವ್ಯವನ್ನು ಸೂಕ್ತವಾಗಿ ನಿರ್ವಹಿಸದ ಕಾರಣ ಐವರು ಪೊಲೀಸರು ಹಾಗೂ ಇಬ್ಬರು ವೈದ್ಯರನ್ನು ದೋಷಿಗಳೆಂದು ಪರಿಗಣಿಸಲಾಗಿದೆ.

ಗೋದ್ರಾ ಗಲಭೆಯ ಹಿನ್ನೆಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಬಿಲ್ಕೀಸ್  ಬಾನು ಎಂಬವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಮತ್ತು ಅವರ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News