ಅಕ್ರಮವಾಗಿ ಶವಗಳನ್ನು ಹೊರತೆಗೆದ ಪ್ರಕರಣ: ಸೆಟಲ್ವಾಡ್ ಗೆ ಪರಿಹಾರ ಒದಗಿಸದ ಸುಪ್ರೀಂ
ಹೊಸದಿಲ್ಲಿ,ಜು.10: 2002ರ ಗುಜರಾತ್ ದಂಗೆಗಳಲ್ಲಿ ಕೊಲ್ಲಲ್ಪಟ್ಟಿದ್ದ ಕೆಲವರ ಶವಗಳನ್ನು ಅಕ್ರಮವಾಗಿ ಹೊರತೆಗೆದ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಸೋಮವಾರ ಸರ್ವೋಚ್ಚ ನ್ಯಾಯಾಲಯ ದಿಂದ ಯಾವುದೇ ಪರಿಹಾರವನ್ನು ಪಡೆಯುವಲ್ಲಿ ವಿಫಲರಾದರು.
ಸೆಟಲ್ವಾಡ್ ಅವರು 2006ರಲ್ಲಿ ಯಾವುದೇ ಅನುಮತಿಯಿಲ್ಲದೆ ಪಾಣಂ ಬಳಿಯ ದಫನಭೂಮಿಯಲ್ಲಿ ಹೂಳಲಾಗಿದ್ದ ಕೆಲವು ಶವಗಳನ್ನು ತನ್ನ ಸಿಬ್ಬಂದಿಗಳಿಂದ ಹೊರಕ್ಕೆ ತೆಗೆಸಿದ್ದರೆಂದು ಆರೋಪಿಸಿ ಅವರ ವಿರುದ್ಧ ಪಂಚಮಹಲ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದನ್ನು ರದ್ದುಗೊಳಿಸಲು ಗುಜರಾತ್ ಉಚ್ಚ ನ್ಯಾಯಾಲಯವು ನಿರಾಕರಿಸಿದ್ದನ್ನು ಪ್ರಶ್ನಿಸಿ ಸೆಟಲ್ವಾಡ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ಅವರ ಮೇಲ್ಮನವಿಯ ಬಗ್ಗೆ ತಾನು ನಿರ್ಧರಿಸುವುದು ಅಗತ್ಯವಿಲ್ಲ ಮತ್ತು ಅವರು ಆರೋಪ ಪಟ್ಟಿಯನ್ನು ದಾಖಲಿಸಲಾಗಿರುವ ವಿಚಾರಣಾ ನ್ಯಾಯಾಲಯದಲ್ಲಿ ಪರಿಹಾರ ಕೋರಬಹುದು ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಅಮಿತಾವ್ ರಾಯ್ ಅವರನ್ನೊಳಗೊಂಡ ಪೀಠವು ಸ್ಪಷ್ಟಪಡಿಸಿತು ಮತ್ತು ಅರ್ಜಿಯನ್ನು ವಿಲೇವಾರಿ ಗೊಳಿಸಿತು.
ಆರೋಪ ಪಟ್ಟಿಯು ವಿಚಾರಣಾ ನ್ಯಾಯಾಲಯದಲ್ಲಿದೆ. ನಿಮಗೆ ಅಲ್ಲಿಗೆ ಹೋಗಿ ಈ ಎಲ್ಲ ಪ್ರಶ್ನೆಗಳನ್ನು ಎತ್ತಲಾಗುವುದಿಲ್ಲವೇ ಎಂದು ಪೀಠವು ಸೆಟಲ್ವಾಡ್ ಪರ ವಕೀಲ ಕಪಿಲ್ ಸಿಬಲ್ ಅವರನ್ನು ಪ್ರಶ್ನಿಸಿತು.
ಆರೋಪಪಟ್ಟಿ ದಾಖಲಾಗಿದ್ದರೂ ಪ್ರಕರಣದಲ್ಲಿ ಸೆಟ್ಲವಾಡ್ ವಿರುದ್ಧ ಯಾವುದೇ ಅಪರಾಧವನ್ನು ರೂಪಿಸಲಾಗಿಲ್ಲ ಎಂಬ ಸಿಬಲ್ ವಾದವನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಳ್ಳಲಿಲ್ಲ.