ಗೋಹತ್ಯೆಗೈದವರ ಕೊಂದವರನ್ನು ಗೌರವಿಸಬೇಕು: ಛತ್ತೀಸ್‌ಗಡದ ಸಂಸ್ಕೃತ್ ಮಂಡಳಿಯ ಅಧ್ಯಕ್ಷನ ಹೇಳಿಕೆ
ಅಂಬಿಕಾಪುರ್, ಜು.10: ರಾಜಸ್ತಾನದಲ್ಲಿ ಗೋ ವಧೆ ಮಾಡಿದವರ ಹತ್ಯೆಗೈದವರನ್ನು ಗೌರವಿಸಬೇಕು ಎಂದು ಛತ್ತೀಸ್‌ಗಡದ ಸಂಸ್ಕೃತ್ ಮಂಡಳಿಯ ಅಧ್ಯಕ್ಷ ಸ್ವಾಮಿ ಪರ್ಮತಮಾನಂದ್ ಹೇಳಿದ್ದಾರೆ.
ರವಿವಾರ ಅಂಬಿಕಾಪುರದಲ್ಲಿ ನಡೆದ ವಿರಾಟ್ ಹಿಂದು ಸಮ್ಮೇಳನದಲ್ಲಿ ಇವರು ಈ ಹೇಳಿಕೆ ನೀಡಿದ್ದಾರೆ. ಗೋವುಗಳನ್ನು ಹತ್ಯೆ ಮಾಡುವವರನ್ನು ಕೊಲ್ಲಬೇಕು ಎಂದು ವೇದದಲ್ಲಿ ಹೇಳಲಾಗಿದೆ. ರಾಜಸ್ತಾನದಲ್ಲಿ ಗೋಹಂತಕರ ಕೊಂದವರನ್ನು ಛತ್ತೀಸ್‌ಗಡಕ್ಕೆ ಆಹ್ವಾನಿಸಿ ಅವರನ್ನು ಗೌರವಿಸಬೇಕು ಎಂದು ಪರ್ಮತಮಾನಂದ್ ಹೇಳಿದ್ದಾರೆ. ಆದರೆ ಅವರು ಗೋರಕ್ಷಕರಿಂದ ಹಲ್ಲೆಗೊಳಗಾಗಿ ಬಳಿಕ ಮೃತಪಟ್ಟ ಪೆಹ್ಲೂಖಾನ್ ಹೆಸರನ್ನು ಉಲ್ಲೇಖಿಸಲಿಲ್ಲ.
ಸಂಸ್ಕೃತ್ ಮಂಡಳಿಯ ಅಧ್ಯಕ್ಷರಿಗೆ ಸಚಿವ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಗೋಭಕ್ತಿಯ ನೆಪದಲ್ಲಿ ಜನರನ್ನು ಕೊಲ್ಲುವ ಘಟನೆ ಅಸ್ವೀಕಾರಾರ್ಹ ಎಂಬ ಪ್ರಧಾನಿ ಮೋದಿಯ ಹೇಳಿಕೆಯನ್ನು ಪ್ರಶ್ನಿಸಿದ ಅವರು, ಗೋರಕ್ಷಕರು ಕ್ರಿಮಿನಲ್‌ಗಳು ಎಂದು ಪ್ರಧಾನಿ ಯಾವ ಆಧಾರದಲ್ಲಿ ಹೇಳುತ್ತಾರೆ. ಕೆಲವರು ಗೂಂಡಾಗಳಿರುವ ಸಾಧ್ಯತೆಯಿದೆ. ಆದರೆ ಗೋಮಾತೆಯ ಸೇವೆ ಮಾಡುವ ನಮ್ಮ ಬಜರಂಗದಳ ಹಾಗೂ ಇತರ ಸಂಘಟನೆಗಳ ಸದಸ್ಯರು ಗೂಂಡಾಗಳಾಗಲು ಸಾಧ್ಯವಿಲ್ಲ ಎಂದರು. ತನ್ನನ್ನು ಒಂದು ದಿನದ ಮಟ್ಟಿಗೆ ಪ್ರಧಾನಿಯನ್ನಾಗಿ ಮಾಡಿದರೆ ಎಲ್ಲಾ ಆಂಗ್ಲಮಾಧ್ಯಮ ಶಾಲೆಗಳನ್ನೂ ಮುಚ್ಚಿಸಲು ಕ್ರಮ ಕೈಗೊಳ್ಳುತ್ತೇನೆ ಎಂದವರು ಹೇಳಿದರು.