ಬಲೂಚಿಸ್ತಾನದಲ್ಲಿ ಆತ್ಮಹತ್ಯಾ ದಾಳಿಗೆ 3 ಬಲಿ

Update: 2017-07-10 17:38 GMT

ಕರಾಚಿ,ಜು.11: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಪೊಲೀಸ್ ವಾಹನವೊಂದರ ಮೇಲೆ ನಡೆದ ಆತ್ಮಹತ್ಯಾ ದಾಳಿಯಲ್ಲಿ ಪಾಕಿಸ್ತಾನದ ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

   ಸುಧಾರಿತ ಸ್ಫೋಟಕ ಸಾಧನದ ಮೂಲಕ ಈ ಸ್ಫೋಟವನ್ನು ನಡೆಸಲಾಗಿದೆಯೆಂದು ಪೊಲೀಸ್ ಮೂಲಗಳು ಆರಂಭದಲ್ಲಿ ತಿಳಿಸಿದ್ದವು. ಆದರೆ ಅನಂತರ ವಾಹವೊಂದನ್ನು ಗುರಿಯಾಗಿರಿಸಿ ಆತ್ಮಹತ್ಯಾ ದಾಳಿ ನಡೆದಿರುವುದಾಗಿ ಅವು ಆನಂತರ ಸ್ಪಷ್ಟಪಡಿಸಿದ್ದವು. ಅಫ್ಘಾನ್‌ನ ಗಡಿಪಟ್ಟಣವಾದ ಸ್ಪಿನ್ ಬೊಲ್ಡಾಕ್‌ಗೆ ತಾಗಿಕೊಂಡಿರುವ ಬಲೂಚಿಸ್ತಾನದ ಚಮನ್ ನಗರದಲ್ಲಿ ಈ ಸ್ಫೋಟ ನಡೆದಿದೆ.

ಸ್ಫೋಟದಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿ ಅಬ್ದುಲ್ಲಾ ಸಾಜೀದ್ ಮುಹಮ್ಮದ್ ಗಂಭೀರವಾಗಿ ಗಾಯಗೊಂಡು, ಆನಂತರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ದಾಳಿಯಲ್ಲಿ ಗಾಯಗೊಂಡವರಲ್ಲಿ ಪೊಲೀಸರು ಹಾಗೂ ದಾರಿಹೋಕರು ಸೇರಿದ್ದಾರೆಂದು ವರದಿ ತಿಳಿಸಿದೆ. ಬಲೂಚಿಸ್ತಾನದ ಗೃಹ ಸಚಿವ ಸರ್ಫಾಝ್ ಅಹ್ಮದ್ ಭುಗ್ತಿ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ. ಆದರೆ ಆತ್ಮಹತ್ಯಾ ದಾಳಿಯ ಹೊಣೆಯನ್ನು ಈತನಕ ಯಾವುದೇ ಗುಂಪು ವಹಿಸಿಕೊಂಡಿಲ್ಲ. ಬಲೂಚಿಸ್ತಾನದ ಚಮನ್ ಪಟ್ಟಣವು ಅತ್ಯಂತ ಸೂಕ್ಷ್ಮಸಂವೇದಿ ಪ್ರದೇಶವಾಗಿದ್ದು ತಾಲಿಬಾನ್ ಬಂಡುಕೋರರ ಭದ್ರಕೋಟೆಯೆಂದೇ ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News