ಉಗ್ರರಿಂದ ಏಳು ಅಮರನಾಥ ಯಾತ್ರಿಗಳ ಹತ್ಯೆ

Update: 2017-07-10 17:50 GMT

ಶ್ರೀನಗರ,ಜು.10: ಸೋಮವಾರ ರಾತ್ರಿ ಅನಂತನಾಗ್ ಜಿಲ್ಲೆಯಲ್ಲಿ ಶಂಕಿತ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಮಹಿಳೆಯರು ಸೇರಿದಂತೆ ಕನಿಷ್ಠ ಏಳು ಅಮರನಾಥ ಯಾತ್ರಿಗಳು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯ ಗೊಂಡಿದ್ದಾರೆ.

 ರಾತ್ರಿ 8:20ರ ಸುಮಾರಿಗೆ ಅನಂತನಾಗ್‌ನ ಬಟೆಂಗೂ ಎಂಬಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಗುಂಡು ನಿರೋಧಕ ಕವಚವನ್ನು ಹೊಂದಿದ್ದ ಪೊಲೀಸ್ ಕಾರೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದು, ಪೊಲೀಸರು ಪ್ರತಿದಾಳಿ ನಡೆಸಿದ್ದರು. ಆಗ ಉಗ್ರರು ಮನಬಂದಂತೆ ಗುಂಡುಗಳನ್ನು ಹಾರಿಸುತ್ತ ಸ್ಥಳದಿಂದ ಪರಾರಿಯಾಗಿದ್ದು, ಇದೇ ವೇಳೆ ಹೆದ್ದಾರಿಯಲ್ಲಿ ಬರುತ್ತಿದ್ದ ಅಮರನಾಥ ಯಾತ್ರಿಗಳನ್ನು ಹೊತ್ತಿದ್ದ ಬಸ್ ದಾಳಿಗೆ ಸಿಲುಕಿತ್ತು. ಉಗ್ರರ ಗುಂಡೇಟುಗಳಿಂದ ಏಳು ಯಾತ್ರಿಗಳು ಸಾವನ್ನಪ್ಪಿದ್ದು, ಇತರ ಏಳು ಯಾತ್ರಿಗಳು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಅಮರನಾಥ ಗುಹಾಮಂದಿರಕ್ಕೆ ಭೇಟಿ ನೀಡಿ ವಾಪಸಾಗುತ್ತಿದ್ದ ಯಾತ್ರಿಗಳನ್ನು ಹೊತ್ತಿದ್ದ ಬಸ್ ಸೋನಾಮಾರ್ಗ್‌ನಿಂದ ಬರುತ್ತಿತ್ತು.
ಯಾವುದೇ ಯಾತ್ರಾ ವಾಹನವು ಸಂಜೆ ಏಳು ಗಂಟೆಯ ನಂತರ ಹೆದ್ದಾರಿಯಲ್ಲಿ ಚಲಿಸುವುದನ್ನು ನಿರ್ಬಂಧಿಸಲಾಗಿದೆ. ಬಸ್ ಚಾಲಕ ಈ ನಿಯಮವನ್ನು ಉಲ್ಲಂಘಿಸಿದ್ದ ಎಂದು ಪೊಲೀಸರು ತಿಳಿಸಿದರು.

ಅತ್ತ ದಿಲ್ಲಿಯಲ್ಲಿ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು, ಈ ದಾಳಿಗೆ ಭದ್ರತಾ ಸಂಸ್ಥೆಗಳು ಶೀಘ್ರ ಉತ್ತರಿಸಲಿವೆ ಎಂದು ತಿಳಿಸಿದರು.

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು,‘‘ಇದೊಂದು ಅತ್ಯಂತ ದುಃಖದ ಸುದ್ದಿ. ಈ ವರ್ಷದ ಯಾತ್ರೆಯ ಬಗ್ಗೆ ನಮಗೆ ಭೀತಿಯಿತ್ತು. ಉಗ್ರರ ವಿರುದ್ಧ ಇತ್ತೀಚಿನ ಯಶಸ್ವಿ ಕಾರ್ಯಾಚರಣೆಗಳು ಮತ್ತು ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳ ಉಪಸ್ಥಿತಿಯ ನಡುವೆಯೂ ದುರಂತವು ನಡೆದುಹೋಗಿದೆ. ದಾಳಿಯನ್ನು ಖಂಡಿಸಲು ಶಬ್ದಗಳೇ ಸಿಗುತ್ತಿಲ್ಲ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ’’ಎಂದು ಟ್ವೀಟಿಸಿದ್ದಾರೆ.

   ಈ ವರ್ಷ 100 ಪೊಲೀಸರು ಮತ್ತು ಅಷ್ಟೇ ಸಂಖ್ಯೆಯಲ್ಲಿ ಅಮರನಾಥ ಯಾತ್ರಿಗಳನ್ನು ಗುರಿಯಾಗಿಸಿಕೊಳ್ಳುವ ಉಗ್ರರ ಸಂಚಿನ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಹುಸ್ತರಗಳ ಭದ್ರತೆಯನ್ನು ಏರ್ಪಡಿಸಿದ್ದರು. 40 ದಿನಗಳ ಅವಧಿಯ ಯಾತ್ರೆಯಲ್ಲಿ ಅಮರನಾಥ ಮಂದಿರಕ್ಕೆ ತೆರಳುವ ಎರಡೂ ಮಾರ್ಗಗಳಲ್ಲಿ 40,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಕಣ್ಗಾವಲು ಕ್ಯಾಮರಾಗಳು, ಜಾಮರ್‌ಗಳು, ಗುಂಡು ನಿರೋಧಕ ಬಂಕರ್‌ಗಳು, ಉಪಗ್ರಹದ ಮೂಲಕ ಜಾಡು ಹಿಡಿಯುವ ಸಾಧನಗಳು ಮತ್ತು ಇತರ ಸುರಕ್ಷಾ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಮೂಲಶಿಬಿರಗಳಾದ ಪಹಲಗಾಮ್ ಮತ್ತು ಬಲ್ತಾಲ್ ಅನಂತನಾಗ್ ಮತ್ತು ಗಂಡೇರಬಾಲ್ ಜಿಲ್ಲೆಗಳಲ್ಲಿವೆ. ಸಮುದ್ರಮಟ್ಟದಿಂದ 3,888 ಮೀ.ಎತ್ತರದಲ್ಲಿರುವ ಅಮರನಾಥ ಗುಹಾಮಂದಿರವು ಪಹಲಗಾಮ್‌ನಿಂದ 46 ಕಿ.ಮೀ. ಮತ್ತು ಬಲ್ತಾಲ್‌ನಿಂದ 14 ಕಿ.ಮೀ.ಅಂತರದಲ್ಲಿದೆ.
2000,ಆ.1ರಂದು ಪಹಲಗಾಮ್‌ನಲ್ಲಿ ಅಮರನಾಥ ಯಾತ್ರಿಗಳ ಮೇಲೆ ದಾಳಿ ನಡೆಸಿದ್ದ ಉಗ್ರರು 30 ಜನರನ್ನು ಕೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News