ಪಿ ಶೇಷಾದ್ರಿ ತೆರೆದಿಟ್ಟ ನೆನಪುಗಳ 'ಬೆಳ್ಳಿಹೆಜ್ಜೆ'

Update: 2017-07-10 17:53 GMT

ನಿರ್ದೇಶಿಸಿದ ಎಂಟು ‌ಚಿತ್ರಗಳಿಗೆ ಸತತವಾಗಿ ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಏಕೈಕ ಭಾರತೀಯ ನಿರ್ದೇಶಕ ಪಿ ಶೇಷಾದ್ರಿ.

ಅವರ ಚಿತ್ರ ಬದುಕಿನ ಸಾಧನೆಯ ಬಗ್ಗೆ ಅವಲೋಕಿಸುವಂಥ ಸುಸಂದರ್ಭ ಈ ಬಾರಿಯ 'ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಾಯಿತು. ಕರ್ನಾಟಕ ಚಲನಚಿತ್ರ ಅಕಾಡಮಿ ನಡೆಸಿಕೊಡುವ ಬೆಳ್ಳಿಹೆಜ್ಜೆಯು ಬೆಂಗಳೂರು ಗಾಂಧಿನಗರದ ಗಾಂಧಿಭವನದಲ್ಲಿ ಆಕರ್ಷಕವಾಗಿ ಮೂಡಿ ಬಂತು.

"ಮೇಷ್ಟ ಮಗನಾಗಿ ಹುಟ್ಟಿದ ನಾನು ಗಾದೆ ಮಾತಿಗೆ ತಕ್ಕಂತೆ ಬುದ್ಧಿವಂತನಾಗಿರಲಿಲ್ಲ. ಜೊತೆಗೆ ಕಪ್ಪಗೆ ಇದ್ದಿದ್ದು, ಇಂಗ್ಲಿಷ್ ಬರುತ್ತಿರಲಿಲ್ಲ ಎಂಬ ಅಂಶಗಳು ನನ್ನೊಳಗೆ ಕೀಳರಿಮೆ ಮೂಡಿಸಿತ್ತು. ಆದರೆ ಪುಸ್ತಕ ಓದುವ ಹವ್ಯಾಸವೊಂದೇ ನನ್ನ ಕೈ ಹಿಡಿದು ಮುನ್ನಡೆಸಿತು" ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

'ಸುದ್ದಿ ಸಂಗಾತಿ' ಎಂಬ ಪತ್ರಿಕೆಯಲ್ಲಿ ಪತ್ರಕರ್ತನಾಗಿ, ಡಿಸೈನರಾಗಿ ಸಿನಿಮಾ ಸಂಬಂಧಿತ ಸುದ್ದಿಗಳನ್ನು ಮಾಡುವಾಗಲೂ, ನನಗೆ ಚಿತ್ರರಂಗಕ್ಕೆ ಬರಬೇಕೆಂಬ ಆಕಾಂಕ್ಷೆ ಇರಲಿಲ್ಲ. ‌ಆದರೆ ಪತ್ರಿಕೆ ನಿಂತ ಮೇಲೆ ಅನಿವಾರ್ಯವಾಗಿ ಸಿನಿಮಾ ಕ್ಷೇತ್ರದಲ್ಲಿ ಬರಹಗಾರನಾಗಲು ನಿರ್ಧರಿಸಿದೆ.  ಬಿ ಸುರೇಶ್ ನನ್ನನ್ನು ಆ ವೃತ್ತಿಗೆ ಆಹ್ವಾನಿಸಿದರು.

ಧಾರಾವಾಹಿಗಳ ನಿರ್ದೇಶಕನಾಗಿದ್ದ ನನಗೆ ಸಿನಿಮಾ ಅಂದರೆ ರಾಜಕುಮಾರ್, ಜಯಂತಿ, ನರಸಿಂಹ ರಾಜು ಮೊದಲಾದವರು ತುಂಬಿದ ಕಮರ್ಷಿಯಲ್ ಚಿತ್ರಗಳು ಮಾತ್ರ ಎನ್ನುವ ನಂಬಿಕೆಯಿತ್ತು. ಆದರೆ ಸಿನಿಮಾದ ವೈವಿಧ್ಯತೆಯ ಆಳವನ್ನು ತೋರಿಸಿದ ಮಾರ್ಗದರ್ಶಕ ಟಿ ಎನ್ ಸೀತಾರಾಮ್. 90ರ ದಶಕದ ಆರಂಭದಲ್ಲಿ ಅವರೊಂದಿಗೆ ದೆಹಲಿಯ ಚಿತ್ರೋತ್ಸವಗಳಿಗೆ ಹೋಗಲು ಶುರು ಮಾಡಿದೆ. ಕಡಿಮೆ ಬಜೆಟ್ ನಲ್ಲಿಯೂ ಚಿತ್ರಗಳನ್ನು ತೆಗೆಯಬಹುದೆಂಬ ನಂಬಿಕೆಯನ್ನು ಆ ಅಂತಾರಾಷ್ಟ್ರೀಯ ಚಿತ್ರಗಳು ನೀಡಿದವು. ಅದು 'ಮುನ್ನುಡಿ'ಯಂಥ ಚಿತ್ರಗಳನ್ನು ನೀಡಲು ಮುನ್ನುಡಿಯಾಯಿತು ಎಂದರು.

ಈ ಸಂದರ್ಭದಲ್ಲಿ ಇಂಥ ಪ್ರಯತ್ನಗಳಿಗೆ ಸದಾ ಪ್ರೋತ್ಸಾಹಕರಾಗಿದ್ದ ದತ್ತಣ್ಣ ಮತ್ತು ಒಂದು ರುಪಾಯಿ ಸಂಭಾವನೆಗೆ 'ಅತಿಥಿ' ಚಿತ್ರದಲ್ಲಿ ನಟಿಸಿದ ಪ್ರಕಾಶ್ ರೈ, ಮೊದಲ ಬಾರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಿದ  ಜಯಮಾಲ ಮೊದಲಾದವರನ್ನು ನೆನಪಿಸಿಕೊಂಡರು.

ನನ್ನ ಚಿತ್ರಗಳಿಗೂ ಪ್ರೇಕ್ಷಕರಿದ್ದಾರೆ:

ಕಲಾತ್ಮಕ ಚಿತ್ರಗಳು ಸಮಾಜದಲ್ಲಿ ಬದಲಾವಣೆ ತರುವುದೆಂಬ ನಿಟ್ಟಿನಲ್ಲಿ ಪ್ರಶಸ್ತಿಗಳಿಗೆ ಪಾತ್ರವಾಗುತ್ತವೆ. ಆದರೆ ಅಂಥ ಚಿತ್ರಗಳು‌ ಚಿತ್ರಮಂದಿರಗಳಲ್ಲಿ ಪ್ರದರ್ಶನವನ್ನೇ ಕಾಣುವುದಿಲ್ಲ ಎಂಬ ಆಪಾದನೆಯಿದೆ. ಅಂದಮಾತ್ರಕ್ಕೆ ಚಿತ್ರ ಜನತೆಗೆ ತಲುಪುತ್ತಿಲ್ಲ ಎನ್ನುವುದು ಸುಳ್ಳು. ಯಾಕೆಂದರೆ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳನ್ನು ದೆಹಲಿ ದೂರದರ್ಶನದವರು ಕೊಳ್ಳುತ್ತಾರೆ. ಅವುಗಳಿಗೆ ಬಹಳಷ್ಟು ವೀಕ್ಷಕರಿದ್ದಾರೆ. ಆದರೆ ಅವರೆಲ್ಲ ಥಿಯೇಟರ್ ಪ್ರೇಕ್ಷಕರಂತೆ ಜೊತೆಯಾಗಿ ಕಾಣಿಸದಿರಬಹುದಷ್ಟೇ ಎನ್ನುವುದು ಶೇಷಾದ್ರಿಯವರ ಮಾತು.

ಕಮರ್ಷಿಯಲ್ ಕನಸಿಲ್ಲ

ನನಗೆ ಹೊಡಿ ಬಡಿ ಕಮರ್ಷಿಯಲ್ ಚಿತ್ರಗಳನ್ನು ನಿರ್ದೇಶಿಸುವ ಬಗ್ಗೆ ಕಲ್ಪಿಸಲು ಸಾಧ್ಯವಿಲ್ಲ. ಆದರೆ ಸ್ಟಾರ್ ಗಳು ನನ್ನ ನಿರ್ದೇಶನದ ನೈಜತೆಗೆ ಹೊಂದಿಕೊಳ್ಳುವಂತೆ ನಟಿಸಲು ಸಿದ್ದವಾದರೆ ನಾನು ಕೂಡ ತಯಾರಿದ್ದೇನೆ. ಮಲಯಾಳಂನಲ್ಲಿ ಮಮ್ಮುಟ್ಟಿ ಮೋಹನ್ ಲಾಲ್ ರಂಥ ನಟರು ಅಂಥ ಪ್ರಯೋಗಗಳಿಗೆ ಸಿದ್ಧರಿರುತ್ತಾರೆ. ನಮ್ಮಲ್ಲಿ‌ ಶಿವರಾಜ್ ಕುಮಾರ್ ಕೂಡ ಅಂಥ ಆಹ್ವಾನ ನೀಡಿದ್ದಾರೆ. ನಿಜ ಹೇಳುವುದಾದರೆ, ನಾನು ಕಾದಂಬರಿಯಾಧರಿತ ಉತ್ತಮ ಚಿತ್ರಗಳಿಗೆ ವಾಣಿಜ್ಯ ಮಂಡಳಿ ನೀಡುವ ಸಬ್ಸಿಡಿಯ ಧೈರ್ಯದಿಂದ ಚಿತ್ರ ನಿರ್ಮಾಣ ಶುರು ಮಾಡಿದವನು. ಹಾಗಾಗಿ ಯಾವುದೇ ಇಮೇಜ್ ಗಾಗಿ ಅನಗತ್ಯ ಖರ್ಚುಗಳಲ್ಲಿ ಚಿತ್ರ ಮಾಡುವ ಬಗ್ಗೆ ಒಲವು ಇಲ್ಲ ಎಂದು ಶೇಷಾದ್ರಿ ಅಭಿಪ್ರಾಯ ಪಟ್ಟರು.

ಸದಭಿರುಚಿಯ ಪ್ರೇಕ್ಷಕರ ಕೊರತೆ:

ಸಾಮಾನ್ಯವಾಗಿ ಗುಣಮಟ್ಟದ ಚಿತ್ರಗಳೆಂದರೆ ಮಲಯಾಳಂ, ಬಂಗಾಳಿ ಚಿತ್ರಗಳೆಂಬ ನಂಬಿಕೆಯಿತ್ತು. ಆದರೆ ಇತ್ತೀಚಿಗೆ ಮರಾಠಿಯಲ್ಲಿಯೂ‌ ಉತ್ತಮ ಚಿತ್ರಗಳು ಗೆಲುವು ಕಾಣುತ್ತಿವೆ. ಆದರೆ ನಮ್ಮಲ್ಲಿ ಅಂಥ ಪ್ರೇಕ್ಷಕರ ಕೊರತೆಯಿದೆ ಎನ್ನುವುದಕ್ಕೆ ಹಲವು ಪ್ರಯೋಗಾತ್ಮಕ ಚಿತ್ರಗಳು ಸೋಲುತ್ತಿರುವುದೇ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದರು.

ಗಣ್ಯರ ಸಂಗಮ:

ಕಾರ್ಯಕ್ರಮದ ಆರಂಭದಲ್ಲಿ ನಟ ಸುಚೇಂದ್ರ ಪ್ರಸಾದ್ ನಿರ್ದೇಶಿಸಿದ ಪಿ ಶೇಷಾದ್ರಿಯವರ ಬದುಕಿನ ಕುರಿತಾದ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು. ಸುಚೇಂದ್ರ ಪ್ರಸಾದ್ ಸೇರಿದಂತೆ ಹಿರಿಯ ನಿರ್ದೇಶಕರಾದ ಭಗವಾನ್, ಗಿರೀಶ್ ಕಾಸರವಳ್ಳಿ, ಟಿಎನ್ ಸೀತಾರಾಮ್, ಬಿಎಸ್ ಲಿಂಗದೇವರು, ನಟ ದತ್ತಣ್ಣ, ನಟಿ ಲಕ್ಷ್ಮೀ ಗೋಪಾಲಸ್ವಾಮಿ, ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ, ಜೋಗಿ, ಗೀತಾ ಉಪೇಂದ್ರ ಬೆಂಗಳೂರು, ನಾ ದಾ ಶೆಟ್ಟಿ, ನಿರ್ಮಾಪಕ‌ ಬಸಂತ್ ಕುಮಾರ್ ಪಾಟೀಲ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಮೊದಲಾದವರೊಂದಿಗೆ ಶೇಷಾದ್ರಿಯ ಕುಟುಂಬ ಮತ್ತು ಅಪಾರ ಸಂಖ್ಯೆಯ ಪ್ರೇಕ್ಷಕರು ಉಪಸ್ಥಿತರಿದ್ದರು.

ಅಕಾಡಮಿಯ ರಿಜಿಸ್ಟ್ರಾರ್ ದಿನೇಶ್ ಸ್ವಾಗತಿಸಿ, ವಾರ್ತಾ ಮತ್ತು ಸಂಪರ್ಕ ಇಲಾಖೆಯ ನಿರ್ದೇಶಕ ಎನ್ ಆರ್ ವಿಶುಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಕಾರ್ಯಕ್ರಮಕ್ಕೆ ಶುಭ ಕೋರಿದರು. ಪತ್ರಕರ್ತ ಬಿ ಗಣಪತಿ ಸಂವಾದವನ್ನು ನಡೆಸಿಕೊಟ್ಟರು. ವಾಡಿಕೆಯಂತೆ ನಿರ್ದೇಶಕರ ಬದುಕಿನ ಪಯಣವನ್ನು ಛಾಯಾಚಿತ್ರಗಳ ಮೂಲಕ ಪ್ರದರ್ಶಿಸಲಾಯಿತು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News