ಟ್ರಂಪ್ ಪುತ್ರನಿಗೆ ಹಿಲರಿ ಬಗ್ಗೆ ವಿವಾದಾತ್ಮಕ ಮಾಹಿತಿ ಒದಗಿಸುವುದಾಗಿ ಭರವಸೆ ನೀಡಿದ್ದ ರಶ್ಯನ್ ನ್ಯಾಯವಾದಿ
ವಾಶಿಂಗ್ಟನ್,ಜು.10: ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ರ ವರ್ಚಸ್ಸಿಗೆ ಧಕ್ಕೆಯುಂಟು ಮಾಡುವಂತಹ ಮಾಹಿತಿಯನ್ನು ಒದಗಿಸುವುದಾಗಿ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಾಲಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರನಿಗೆ ರಶ್ಯದ ನ್ಯಾಯವಾದಿಯೊಬ್ಬಳು ಭರವಸೆ ನೀಡಿದ್ದರೇ?. ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು, ಹೌದೆನ್ನುತ್ತದೆ.
ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಹಾಗೂ ರಶ್ಯದ ನ್ಯಾಯವಾದಿ ನಟಾಲಿಯಾ ವೆಸೆಲ್‌ನಿಟ್‌ಸ್ಕಾಯಾ ನಡುವೆ ರಹಸ್ಯ ಮಾತುಕತೆ ವಿವರಗ ಬಗ್ಗೆ ಅಮೆರಿಕ ಅಧ್ಯಕ್ಷರ ಚುನಾವಣಾ ಪ್ರಚಾರ ವರಿಷ್ಠರಾಗಿದ್ದ ಪಾವುಲ್ ಜೆ. ಮಾನಾಫೋರ್ಟ್, ಟ್ರಂಪ್ ಅಳಿಯ ಜೇರಡ್ ಕುಶ್ನೆರ್ ಹಾಗೂ ಶ್ವೇತಭವನದ ಮೂವರು ಸಲಹೆಗಾರರಿಗೆ ಆನಂತರ ಮಾಹಿತಿ ನೀಡಲಾಯಿತೆಂದು ವರದಿ ಹೇಳಿದೆ.
2016ರ ಜೂನ್ 9ರಂದು ಅಂದರೆ ಅಮೆರಿಕ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಟ್ರಂಪ್ ಘೋಷಣೆಯಾದ ಎರಡು ತಿಂಗಳುಗಳ ಬಳಿಕ ಮ್ಯಾನ್‌ಹಟ್ಟನ್‌ನಲ್ಲಿರುವ ಟ್ರಂಪ್ ನಿವಾಸದ ಬಳಿ ಈ ರಹಸ್ಯ ಸ ನಡೆದಿತ್ತು.
ಆದಾಗ್ಯೂ ರಶ್ಯನ್‌ನ್ಯಾಯವಾದಿ ವೆಸೆಲೆಂಟ್‌ಕಾಯಾ ಅವರು ಕ್ಲಿಂಟನ್ ವಿರುದ್ಧ ಯಾವುದಾದರೂ ಮಹತ್ವದ ಪುರಾವೆಗಳನ್ನು ಒದಗಿಸಿದ್ದರೇ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ.
ಡೊನಾಲ್ಡ್ ಟ್ರಂಪ್ ಜೂನಿಯರ್ ಅವರು ಈ ಬಗ್ಗೆ ಹೇಳಿಕೆ ನೀಡಿ, 2013ರ ಮಿಸ್ ಯೂನಿವರ್ಸ್ ಸ್ಪರ್ಧಿಯೊಬ್ಬರು ತನ್ನನ್ನು ವೆಸೆಲೆಂಟಿಸ್ಕಾಯಾ ಅವರಿಗೆ ಪರಿಚಯಿಸಿದ್ದರೆಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಆಕೆ, ರಶ್ಯದಲ್ಲಿರುವ ಕೆಲವು ವ್ಯಕ್ತಿಗಳು ಹಿಲರಿ ಕ್ಲಿಂಟನ್ ಹಾಗೂ ಆಕೆಯ ಡೆಮಾಕ್ರಾಟಿಕ್ ಪಕ್ಷಕ್ಕೆ ಆರ್ಥಿಕ ನೆರವು ನೀಡುತ್ತಿರುವುದಾಗಿ ಹೇಳಿದ್ದರು. ಆದರೆ ಆಕೆಯ ಹೇಳಿಕೆಗಳು ಯಾವುದೇ ಹುರುಳಿಲ್ಲವೆಂದು ತೋರಿತು. ಆಕೆ ತನ್ನ ಆರೋಪಗಳಿಗೆ ಬೆಂಬಲವಾಗಿ ಯಾವುದೇ ಪುರಾವೆಗಳನ್ನು ಒದಗಿಸಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.