ಸಂತ-ಮಹಂತ ಕಾಂಗ್ರೆಸ್ ಸ್ಥಾಪನೆ!,

Update: 2017-07-10 18:45 GMT

ಸಂತ ಮಹಂತರು ಬಿಜೆಪಿ ಕಡೆಗೆ ಎನ್ನುವ ಮಾತು ಆಗಾಗ ಕೇಳಿ ಬರುತ್ತಿದೆ. ಇದೀಗ ಮುಂಬೈಯಲ್ಲಿ ಈ ವಿಷಯವಾಗಿ ಹೊಸ ದೃಶ್ಯವೊಂದು ಕಂಡು ಬಂದಿದೆ. ಕಾಂಗ್ರೆಸ್ ಪಕ್ಷ ಕೂಡಾ ತಾನೂ ಕಡಿಮೆ ಇಲ್ಲ ಎಂಬಂತೆ ಮುಂಬೈಯಲ್ಲಿ ಕಳೆದ ವಾರ ಸಂತ-ಮಹಂತ ಕಾಂಗ್ರೆಸ್‌ನ ಸ್ಥಾಪನೆಯನ್ನು ಮಾಡಿದೆ. ಮುಂಬೈಯ ವಿಭಿನ್ನ ಮಂದಿರಗಳಲ್ಲಿ ಪೂಜೆ-ಅರ್ಚನೆ ಮಾಡುತ್ತಿರುವ ಆಚಾರ್ಯರನ್ನು, ಸಂತರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಈ ಮುಂಬೈ ಕಾಂಗ್ರೆಸ್ ಸಂತ-ಮಹಂತ ಕಾಂಗ್ರೆಸನ್ನು ಸ್ಥಾಪನೆ ಮಾಡಿತು.ಸಂಘಟನೆ ಧರ್ಮದ ರಕ್ಷಣೆಯ ಜೊತೆ ಜೊತೆಗೆ ಧರ್ಮದ ವಿಷಯದಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವ ಕೆಲಸವನ್ನೂ ಮಾಡಲಿದೆಯಂತೆ.

ಆದರೆ ಇದರ ಅಸಲಿ ಉದ್ದೇಶ ಬಿಜೆಪಿಯಲ್ಲಿ ನಡೆಯುತ್ತಿರುವ ಹಿಂದೂ ಮತಗಳ ಧ್ರುವೀಕರಣವನ್ನು ತಡೆಯುವುದಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ದೇಶದಲ್ಲಿ ಬಹು ಸಂಖ್ಯಾಕ ಹಿಂದೂ ಮತಗಳನ್ನು ತನ್ನತ್ತ ಸೆಳೆಯುವುದಕ್ಕೆ ಬಿಜೆಪಿಯ ಬಳಿ ಆರೆಸ್ಸೆಸ್ ಮತ್ತು ವಿಹಿಂಪನಂತಹ ಸಂಘಟನೆಗಳಿದ್ದರೆ ಕಾಂಗ್ರೆಸ್ ಬಳಿ ಯಾವುದೂ ಇಲ್ಲ.

ಜುಲೈ 2ರಂದು ಸಾಂತಾಕ್ರೂಸ್ ಪೂರ್ವದಲ್ಲಿ ವೆಸ್ಟರ್ನ್ ಎಕ್ಸ್ ಪ್ರೆಸ್ ಹೈವೇ ಬಳಿ ಹನುಮಾನ್ ಟೆಕ್ಡಿ ಸಮೀಪವಿರುವ ಪ್ರಾಚೀನ ಹನುಮಾನ್ ಮಂದಿರದಲ್ಲಿ ಸಂತ-ಮಹಂತ ಕಾಂಗ್ರೆಸ್‌ನ ಮೊದಲ ಬೈಠಕ್ ಆಯೋಜಿಸಲಾಗಿತ್ತು. ಇದರಲ್ಲಿ ಮುಂಬೈ ಕಾಂಗ್ರೆಸ್‌ನ ಅಧ್ಯಕ್ಷ ಸಂಜಯ ನಿರೂಪಮ್, ಉಪಾಧ್ಯಕ್ಷ ಜೈಪ್ರಕಾಶ್ ಸಿಂಗ್, ಮುಂಬೈ ಸಂತ-ಮಹಂತ ಕಾಂಗ್ರೆಸ್‌ನ ಅಧ್ಯಕ್ಷ ಧ್ಯಾನಯೋಗಿ ಓಮ್‌ದಾಸ್ ಮಹಾರಾಜ್, ಮಹಂತ ರಾಮ್‌ಸೇವಕ್ ದಾಸ್ ಮಹಾರಾಜ್, ಮಹಂತ ಹರ್‌ದೇವ್‌ದಾಸ್ ಮಹಾರಾಜ್, ಮಹಂತ ರಾಜೇಂದ್ರ ಪ್ರಸಾದ್ ಪಾಂಡೆ ಮೊದಲಾದವರು ಉಪಸ್ಥಿತರಿದ್ದರು.

ಇಲ್ಲಿ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರೂಪಮ್ ಏನು ಹೇಳಿದ್ದಾರೆಂದರೆ ‘‘ಮುಂಬೈಯಲ್ಲಿ ಸಂತ ಮಹಂತರು ಹಲವರಿದ್ದಾರೆ ಮತ್ತು ಮುಂಬೈಯಲ್ಲಿ ಮಂದಿರಗಳೂ ಹಲವಾರಿವೆ. ಆದರೆ ಇಲ್ಲಿರುವವರ ಸಮಸ್ಯೆಗಳೂ ಹೆಚ್ಚಿವೆ ಮತ್ತು ಅದನ್ನು ನಿವಾರಣೆ ಮಾಡಲಾಗಿಲ್ಲ. ಹಾಗೂ ಹಿಂದೂ ಧರ್ಮದ ರಕ್ಷಕರ ಜೊತೆ ಜೊತೆಗೆ ಧರ್ಮದ ಹೆಸರಲ್ಲಿ ಏನು ದೌರ್ಜನ್ಯಗಳು ಕಾಣಿಸಿಕೊಳ್ಳುತ್ತಿವೆಯೋ ಅವುಗಳನ್ನು ತಡೆಯಲು ಮುಂಬೈ ಸಂತ-ಮಹಂತ ಕಾಂಗ್ರೆಸ್‌ನ ಸ್ಥಾಪನೆ ಕಾಂಗ್ರೆಸ್ ಪಕ್ಷ ಮಾಡಿರುತ್ತದೆ. ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್ ಹಿಂದೂಗಳ ಮತ್ತು ಹಿಂದೂ ಧರ್ಮದ ವಿರೋಧಿ ಪಾರ್ಟಿ ಎಂಬ ಅಪಪ್ರಚಾರ ನಡೆಯುತ್ತಿದೆ. ಆದರೆ ಸತ್ಯ ಏನೆಂದರೆ ಕಾಂಗ್ರೆಸ್ ಒಂದು ಧರ್ಮ ನಿರಪೇಕ್ಷ ಪಕ್ಷವಾಗಿದೆ’’ ಎಂದರು.

ಆದರೆ ಕಾಂಗ್ರೆಸ್ ಬ್ಯಾನರ್‌ನಲ್ಲಿ ಮುಂಬೈ ಸಂತ-ಮಹಂತ ಕಾಂಗ್ರೆಸ್‌ನ ಸ್ಥಾಪನೆಯಿಂದ ಕಾಂಗ್ರೆಸ್‌ನಲ್ಲಿರುವ ನಿರೂಪಮ್ ವಿರೋಧಿ ಬಣವು ತೀವ್ರ ಸಿಟ್ಟುಗೊಂಡಿದೆ. ಇದು ಕಾಂಗ್ರೆಸ್‌ನ ಧರ್ಮ ನಿರಪೇಕ್ಷತೆಗೆ ದೊಡ್ಡ ಕಳಂಕ ಎಂದು ಬಣ್ಣಿಸುತ್ತಿದ್ದಾರೆ.
* * *

ಪೊಲೀಸರಿಂದ ವಿದ್ಯಾರ್ಥಿಗಳಿಗೆ ಡ್ರಗ್ಸ್ ಅಪಾಯದ ಪಾಠ:
ಮುಂಬೈಯಲ್ಲಿ ವಿದ್ಯಾರ್ಥಿಗಳಿಗೆ ಎರಡು ವಾರಗಳಿಂದ ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್‌ನ ಸೈಡ್ ಇಫೆಕ್ಟ್ ಬಗ್ಗೆ ಪೊಲೀಸರಿಂದ ಪಾಠ ಹೇಳಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಇದಕ್ಕಾಗಿ ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದಾರೆ. ಪೊಲೀಸರಿಂದ ಮಕ್ಕಳಿಗಾಗಿ ಜಾಗೃತಿ ಅಭಿಯಾನ ನಡೆಯುತ್ತಿದ್ದು ಇದಕ್ಕೆ ಮುಂಬೈ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ನೆರವು ನೀಡುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಪ್ರಕಾರ ಡ್ರಗ್‌ಸ್ ಸೇವನೆಯ ಅಪಾಯದ ಕುರಿತಂತೆ ಶಾಲಾ, ಕಾಲೇಜುಗಳಲ್ಲಿ ಪಠ್ಯದ ಜೊತೆಗೆ ಒಂದು ಅಧ್ಯಾಯ ಸೇರಿಸಬೇಕು ಎನ್ನುವುದಾಗಿದೆ.

ಸೋಶಿಯಲ್ ಸಯನ್ಸ್ ಸಬ್ಜೆಕ್ಟ್‌ನಲ್ಲಿ ಡ್ರಗ್ಸ್‌ನ ಸೈಡ್ ಇಫೆಕ್ಟ್ ವಿಷಯದ ಒಂದು ಅಧ್ಯಾಯ ಇರಬೇಕು ಎನ್ನುವುದು ಹಲವು ಅಧಿಕಾರಿಗಳ ಅಭಿಮತ. ‘‘ಮಕ್ಕಳಿಗೆ ಉಪನ್ಯಾಸ ನೀಡುವುದು ಪೊಲೀಸರ ಕೆಲಸವಲ್ಲ. ಇದು ಶಿಕ್ಷಕರ ಕೆಲಸ. ಹೀಗಾಗಿ ಸರಕಾರವು ಪಠ್ಯ ಪುಸ್ತಕದಲ್ಲೇ ಆ ಬಗ್ಗೆ ಒಂದು ಅಧ್ಯಾಯವನ್ನು ಇರಿಸಬೇಕು. ಡ್ರಗ್ಸ್ ಸೇವನೆಯ ಅಪಾಯದ ಬಗ್ಗೆ ಶಿಕ್ಷಕರೇ ಪಾಠ ಹೇಳಬೇಕು. ಇದರಿಂದ ಮಕ್ಕಳಿಗೆ ಲಾಭ ಮಾತ್ರವಲ್ಲ, ಪೊಲೀಸರ ಕೆಲಸವೂ ಕಡಿಮೆಯಾಗಬಹುದಾಗಿದೆ. ಪೊಲೀಸರು ಬೇರೆ ಕೆಲಸಗಳಲ್ಲಿ ತಮ್ಮ ಗಮನ ಆಗ ಹರಿಸಬಹುದಾಗಿದೆ.’’ ಎಂದು ಮಾಜಿ ಪೊಲೀಸ್ ಅಧಿಕಾರಿ ಎಡ್ವೊಕೇಟ್ ವೈ.ಪಿ.ಸಿಂಗ್ ಹೇಳುತ್ತಾರೆ.

ಆ್ಯಂಟಿ ನಾರ್ಕೋಟಿಕ್ಸ್ ಸೆಲ್‌ನ ಡಿಸಿಪಿ ಶಿವದೀಪ್ ಲಾಂಡೆ, ‘‘ಮಕ್ಕಳನ್ನು ಡ್ರಗ್ಸ್‌ನಿಂದ ದೂರವಿರಿಸುವ ಕೆಲಸವನ್ನು ಮಕ್ಕಳ ಹೆತ್ತವರೂ ಮಾಡಬೇಕು. ಆಗ ಸಮಸ್ಯೆ ಇಷ್ಟು ಗಂಭೀರವಾಗದು. ಯಾರು ಡ್ರಗ್ಸ್ ಸೇವನೆ ಆರಂಭಿಸುವರೋ ಆ ಮಕ್ಕಳ ಹಾವಭಾವದಲ್ಲಿ ವ್ಯತ್ಯಾಸವಾಗುವುದು. ಹಾಗಾಗಿ ತಂದೆ ತಾಯಿಯರು ಮೊದಲಿಗೆ ಇದನ್ನು ಗಮನಿಸಬೇಕಾಗಿದೆ. ಏಕಾಂತವನ್ನು ಇಷ್ಟ ಪಡುವ ಮಕ್ಕಳ ಬಗ್ಗೆ ಮನೆಯಲ್ಲಿ ಹೆಚ್ಚು ನಿಗಾ ಇರಿಸಬೇಕು’’ ಎನ್ನುತ್ತಾರೆ.

ಮುಂಬೈಯಲ್ಲಿ 22 ವರ್ಷಗಳ ನಂತರ ಮೊನ್ನೆ ಮಾದಕ ದ್ರವ್ಯಗಳ ಎರಡು ಫ್ಯಾಕ್ಟರಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ವಿಶೇಷವೆಂದರೆ ಇದರ ಹಿಂದೆ ಒಂದು ಘಟನೆ ನಡೆದಿತ್ತು. ದಕ್ಷಿಣ ಮುಂಬೈಯ ಒಂದು ಮನೆಯ ಬಾಲಕನ ದಿನಚರಿಯಲ್ಲಿ ತುಂಬಾ ಪರಿವರ್ತನೆಗಳು ಕಂಡು ಬಂದಾಗ ತಂದೆಗೆ ಅನುಮಾನ ಬಂತು. ಆಗ ಏನೂ ಹೇಳದೆ ಅವರು ಆ ಬಾಲಕನನ್ನು ಹಿಂಬಾಲಿಸಲು ನಿಶ್ಚಯಿಸಿದರು. ಆ ಬಾಲಕ ಡ್ರಗ್ ಸಪ್ಲಾಯರ್ ಬಳಿ ಹೋಗಿ ಖರೀದಿಸುವುದನ್ನು ಕಂಡರು. ಆನಂತರ ಅವರು ಆ್ಯಂಟಿ ನಾರ್ಕೊಟಿಕ್ಸ್‌ನ ಆಝಾದ್ ಮೈದಾನ ಯುನಿಟ್‌ನ್ನು ಸಂಪರ್ಕಿಸಿದರು. ಪೊಲೀಸರು ಜಾಲ ಬೀಸಿ ಆ ಡ್ರಗ್ ಸಪ್ಲಾಯರ್‌ನನ್ನು ಬಂಧಿಸಿದರು.
 ಇದಕ್ಕಿಂತ ಮೊದಲು ಮುಂಬೈಯಲ್ಲಿ 1995ರಲ್ಲಿ ಮ್ಯಾಂಡ್ರೆಕ್ಸ್ ಡ್ರಗ್‌ನ ಫ್ಯಾಕ್ಟರಿ ಜಪ್ತಿ ಮಾಡಲಾಗಿತ್ತು.
* * *

ಜಿಎಸ್‌ಟಿಯಿಂದಾಗಿ ಹೊಸ ಕೆಲಸ

ಜಿಎಸ್‌ಟಿ ಜಾರಿಗೆ ಬಂದ ನಂತರ ಮುಂಬೈಯ ಆಕ್ಟ್ರಾಯ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸುಮಾರು 1,300 ಸಿಬ್ಬಂದಿಗೆ ಹೊಸ ಕೆಲಸ ನೀಡುವ ತಯಾರಿ ನಡೆದಿದೆ. ಆಕ್ಟ್ರಾಯ್ ವಿಭಾಗದ ಅಧಿಕಾರಿಯವರ ಪ್ರಕಾರ ಇಲ್ಲಿನ 300ರಿಂದ 400 ಸಿಬ್ಬಂದಿಯನ್ನು ಆಸ್ತಿ ತೆರಿಗೆ ವಿಭಾಗದಲ್ಲಿ ಸೇರಿಸಲಾಗುತ್ತದೆ. ಉಳಿದವರನ್ನು ಬೇರೆ ಬೇರೆ ವಿಭಾಗಗಳಲ್ಲಿ ಇರಿಸಲಾಗುವುದು. ಈ ವಿಷಯವಾಗಿ ಪ್ರಸ್ತಾವ ತಯಾರಿಸಿ ಮಂಜೂರಿಗಾಗಿ ಕಳುಹಿಸಲಾಗಿದೆ. ಈಗ ಆಕ್ಟ್ರಾಯ್ ನಾಕಾಗಳಲ್ಲಿ ಕಲೆಕ್ಷನ್ ಬಂದ್ ಇದೆ. ಆದರೆ ದಾಖಲೆ ಪತ್ರಗಳ ಕೆಲಸಗಳು ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಬೇಕಾಗುವುದು. ಅಲ್ಲಿಯ ತನಕ ಸಿಬ್ಬಂದಿ ಇಲ್ಲೇ ಇರುತ್ತಾರೆ. ಮುಂಬೈಯಲ್ಲಿ ಆಸ್ತಿ ತೆರಿಗೆಯ ಬಾಕಿ 11,000 ಕೋಟಿ ರೂಪಾಯಿಗೂ ಹೆಚ್ಚಿಗಿದೆ. ಹೊಸ ನಿಯುಕ್ತಿಯ ನಂತರ ಇದರ ವಸೂಲಿಯಲ್ಲಿ ವೃದ್ಧಿಯನ್ನು ನಿರೀಕ್ಷಿಸಲಾಗಿದೆ. ಈಗ ಅಗತ್ಯವಿರುವಷ್ಟು ಸ್ಟಾಫ್ ಇಲ್ಲದ್ದರಿಂದ ಕೆಲಸದಲ್ಲಿ ನಿಧಾನಗತಿ ಕಾಣುತ್ತಿದೆ.
* * *

ಝುಣ್ಕಾಭಾಕರ್ ಹೊಸ ಅವತಾರ
ತೊಂಬತ್ತರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿ ಸರಕಾರವಿದ್ದಾಗ ಅನೇಕ ಕಡೆ ಝುಣ್ಕಾಭಾಕರ್ ಕೇಂದ್ರಗಳನ್ನು ತೆರೆಯಲಾಗಿತ್ತು. ಆಗ ಈ ಕೇಂದ್ರಗಳಲ್ಲಿ ಒಂದು ರೂಪಾಯಿಯಲ್ಲಿ ತಿಂಡಿ ನೀಡುವ ಗುರಿ ಇರಿಸಲಾಗಿತ್ತು. ಆನಂತರ ಅನೇಕ ಕಡೆ ಈ ಕೇಂದ್ರ ವಿವಾದ ಹುಟ್ಟಿಸಿತ್ತು. ಝುಣ್ಕಾಭಾಕರ್ ಕೇಂದ್ರದಲ್ಲಿ ಇನ್ನಿತರ ತಿಂಡಿಗಳನ್ನು ತಯಾರಿಸಿ ಮಾರುವ ದೃಶ್ಯ ಕಾಣಿಸಿಕೊಂಡಿತು. ಇದೀಗ ಶಿವಸೇನೆ ಮತ್ತೊಮ್ಮೆ ಝುಣ್ಕಾಭಾಕರ್ ಕೇಂದ್ರದ ಸ್ಥಳದಲ್ಲಿ ‘ಅನ್ನದಾತಾ ಆಹಾರ್ ಕೇಂದ್ರ’ ತೆರೆಯಲು ನಿರ್ಧರಿಸಿದೆ. ಶಿವಸೇನೆಯ ಪ್ರಮುಖ ಉದ್ಧವ್ ಠಾಕ್ರೆ ಕೂಡಾ ಇಂತಹ ಕೇಂದ್ರ ತೆರೆಯಲು ಆಸಕ್ತರಾಗಿದ್ದಾರೆ. ಶಿವಸೇನಾ ನಗರ ಸೇವಕ ಮಂಗೇಶ್ ಸಾತಮ್ಕರ್ ಈ ಪ್ರಸ್ತಾವ ತಂದಿದ್ದಾರೆ. ಆದರೆ ಕಮಿಶನರ್ ಕಡೆಯಿಂದ ಸಕಾರಾತ್ಮಕ ಉತ್ತರ ಇನ್ನೂ ಬಂದಿಲ್ಲ.

90ರ ದಶಕದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿ ಸರಕಾರದ ಕಾಲದಲ್ಲಿ ಆರಂಭವಾದ ಝಣ್ಕಾಭಾಕರ್ ಕೇಂದ್ರ ಯೋಜನೆಯನ್ನು ನಂತರದ ಕಾಂಗ್ರೆಸ್ ಕಾರ್ಯಾವಧಿಯಲ್ಲಿ ಬಂದ್ ಮಾಡಲಾಗಿತ್ತು. ಆನಂತರ ಪ್ರಕರಣ ಕೋರ್ಟ್‌ಗೆ ಹೋಗಿತ್ತು. ಮುಂಬೈ ಮಹಾನಗರ ಪಾಲಿಕೆಯ ಜಾಗದಲ್ಲಿ ನಡೆಯುವ ಈ ಝುಣ್ಕಾಭಾಕರ್ ಕೇಂದ್ರವನ್ನು ಮೊದಲಿನ ಸ್ವಯಂ ಸೇವಕ ಸಂಸ್ಥೆಗಳ ಮಾಧ್ಯಮದಿಂದಲೇ ಪುನಃ ಆರಂಭಿಸಲು ಅನುಮತಿ ನೀಡಬೇಕು. ಇದರಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಕ್ಕಿದಂತಾಗುವುದು ಎನ್ನುತ್ತಿದೆ ಶಿವಸೇನೆ. 125 ಚದರ ಅಡಿಯ ಜಾಗದಲ್ಲಿ ಇಂತಹ ಕೇಂದ್ರಗಳನ್ನು ತೆರೆಯಲು ಅಂದು ಅನುಮತಿ ನೀಡಲಾಗಿತ್ತು. 2009ರಲ್ಲಿ ಈ ರೀತಿಯ ಯೋಜನೆಯನ್ನು ಮತ್ತೆ ಆರಂಭಿಸುವ ಪ್ರಸ್ತಾವ ಸುಧಾರ್ ಸಮಿತಿಯಲ್ಲಿ ಪಾಸಾಗಿತ್ತು. ಆದರೆ ಸಭಾಗೃಹದಲ್ಲಿ ಶಿವಸೇನೆ ಕೆಲವು ಮತಗಳ ಅಂತರದಲ್ಲಿ ಸೋತಿತ್ತು. ಹಾಗೂ ಆ ಯೋಜನೆ ನನೆಗುದಿಗೆ ಬಿದ್ದಿತು.

ಹೀಗಾಗಿ ಈ ಸಲ ಬೇರೆ ಹೆಸರಲ್ಲಿ ಅನ್ನದಾತಾ ಆಹಾರ ಕೇಂದ್ರ ಆರಂಭಿಸಲು ಶಿವಸೇನೆ ತಯಾರಿ ನಡೆಸುತ್ತಿದೆ. ಫೇರಿವಾಲಾ ಕಾನೂನು ನಿಯಮಗಳನ್ನು ಗಮನದಲ್ಲಿರಿಸಿ ಆಡಳಿತವು ಇದಕ್ಕಾಗಿ 44 ಕೇಂದ್ರಗಳನ್ನು ಆರಂಭಿಸುವ ವಿಚಾರ ಕೈಗೊಂಡಿದೆ. ಈ ಮೊದಲಿನ ಶಿವ ವಡಾಪಾವ್ ಕೂಡಾ ಶಿವಸೇನೆಯದ್ದೇ ಯೋಜನೆ ಆಗಿತ್ತು. ಆದರೆ ಅದು ಕಾನೂನಿನ ಕಿರಿಕಿರಿಗೆ ಒಳಗಾಗಿತ್ತು. ಝುಣ್ಕಾಭಾಕರ್‌ನ ಸ್ಥಿತಿಯೂ ಇದೇ ಆಗಿತ್ತು. ಕಡಿಮೆ ದರಕ್ಕೆ ತಿಂಡಿ ತಿನಿಸು ಎಂದು ಆರಂಭಿಸಿದ ಝುಣ್ಕಾಭಾಕರ್ ಕೇಂದ್ರದಲ್ಲಿ ನಂತರ ದರಗಳೂ ಏರುತ್ತಾ ವಿವಿಧ ತಿಂಡಿಗಳ ಜೊತೆ ಹೊಟೇಲುಗಳಾಗಿ ಪರಿವರ್ತಿಸುವ ದೃಶ್ಯಗಳು ಕಂಡು ಬಂದು ಚರ್ಚೆ ಎಬ್ಬಿಸಿತ್ತು.


* * *

ಬೆಸ್ಟ್‌ನ ಮಹಿಳಾ ಸ್ಪೆಶಲ್ ‘ತೇಜಸ್ವಿನಿ’

ಮುಂಬೈ ಮಹಾನಗರ ಪಾಲಿಕೆಯ ಬೆಸ್ಟ್ ಬಸ್ಸು ಇದೀಗ ಮಹಿಳೆಯರಿಗಾಗಿ ತೇಜಸ್ವಿನಿ ಬಸ್ಸು ಓಡಿಸಲು ಸಿದ್ಧತೆ ನಡೆಸಿದೆ. ಈ ಬಸ್ಸಿನ ವಿಶೇಷತೆಯೆಂದರೆ ಇದರಲ್ಲಿ ಚಾಲಕರು ಮತ್ತು ನಿರ್ವಾಹಕರು ಕೂಡಾ ಮಹಿಳೆಯರೇ ಆಗಿರುವರು. ಸರಕಾರಿ ಯೋಜನೆಯ ಅನ್ವಯ ಮಹಿಳೆಯರಿಗಾಗಿ ವಿಶೇಷ 50 ಮಿನಿ ಬಸ್ಸುಗಳನ್ನು ಓಡಿಸಲು ಬೆಸ್ಟ್ ಆಡಳಿತವು ಕಾರ್ಯಪ್ರವೃತ್ತವಾಗಿದೆ. ‘ತೇಜಸ್ವಿನಿ’ ಹೆಸರಿರುವ ಈ ಬಸ್ಸುಗಳಲ್ಲಿ ಹವಾನಿಯಂತ್ರಿತ ಮತ್ತು ಸಾಧಾರಣ ಬಸ್ಸುಗಳಿರುತ್ತವೆ. ಈ ಬಸ್ಸುಗಳ ರೂಪುರೇಷೆ ಈಗಾಗಲೇ ರೆಡಿಯಾಗಿದೆ. ಈ ಬಸ್ಸುಗಳು ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆಯ ಸಮಯ ಓಡಿಸಲಾಗುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿ ತೇಜಸ್ವಿನಿ ಬಸ್ಸುಗಳ ಓಡಾಟಕ್ಕೆ ಸರಕಾರವು ಹಸಿರು ನಿಶಾನೆ ನೀಡಿತ್ತು. ಬೆಸ್ಟ್ ನ ಹೆಚ್ಚುವರಿ ಮಹಾಪ್ರಬಂಧಕ ಸಂಜಯ್ ಭಾಗವತ್ ಅವರ ಪ್ರಕಾರ ಕೆಲವೇ ತಿಂಗಳುಗಳಲ್ಲಿ ಈ ಬಸ್ಸು ರಸ್ತೆಗೆ ಇಳಿಯಲಿದೆಯಂತೆ. ಮಹಿಳಾ ಪ್ರಯಾಣಿಕರು ಹೆಚ್ಚಿಗಿರುವ ಏರಿಯಾಗಳಲ್ಲಿ ಈ ಬಸ್ಸು ಓಡಾಡಲಿದೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News