ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನೇರ ದಾಳಿ: 'ವಾರ್ತಾ ಭಾರತಿ'

Update: 2017-07-11 09:46 GMT

ದಮನಿತರ ಧ್ವನಿಯಾಗಿ, ನೇರ-ನಿಷ್ಠುರ ಸುದ್ದಿಗಳನ್ನು ಬಿತ್ತರಿಸುವ "ವಾರ್ತಾ ಭಾರತಿ"ಯ ವಿರುದ್ಧ ಫ್ಯಾಶಿಸ್ಟ್ ಶಕ್ತಿಗಳು ನಡೆಸಿರುವ ಟ್ರೋಲ್ ಅಭಿಯಾನದಿಂದಾಗಿ ಫೇಸ್‌ಬುಕ್ 2ನೆ ಬಾರಿ "ವಾರ್ತಾ ಭಾರತಿ" ಪೇಜ್ ಅನ್ನು ಬ್ಲಾಕ್ ಮಾಡಿದೆ. ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಿ ಸತ್ಯದ ಧ್ವನಿಯ ಸದ್ದಡಗಿಸುವ ಷಡ್ಯಂತ್ರ ಇದಾಗಿದ್ದು, ಈ ಬಗ್ಗೆ 'ವಾರ್ತಾ ಭಾರತಿ' ಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆಯವರು ಫೇಸ್‌ಬುಕ್ ಗೆ ಬರೆದ ಪತ್ರದ ಕನ್ನಡ ಅನುವಾದ ಇಲ್ಲಿದೆ.

"​​ಫೇಸ್ ಬುಕ್ ನವರು ಕರ್ನಾಟಕದ ಸತ್ಯದ ಪರ, ಶಾಂತಿ ಪ್ರಿಯ ಹಾಗು ಜಾತ್ಯತೀತ ಜನರ ಧ್ವನಿಯನ್ನು ​ಹತ್ತಿಕ್ಕುತ್ತೇವೆಂದು ಪಣ ತೊಟ್ಟಿರುವಂತಿದೆ. ​ಇದೀಗ ಮತ್ತೆ ಅವರು 'ವಾರ್ತಾ ಭಾರತಿ'ಯ ಫೇಸ್ ಬುಕ್ ಪೇಜನ್ನು (https://www.facebook.com/varthabharati) ನ್ಯೂಸ್ ಲಿಂಕ್ ಶೇರ್ ಮಾಡದಂತೆ ಬ್ಲಾಕ್ ಮಾಡಿ​ದ್ದಾರೆ​. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ. ಕಳೆದ ತಿಂಗಳಷ್ಟೇ ಒಂದು ವಾರ ( ಜೂನ್ 20ರಿಂದ 27, 2017) 'ವಾರ್ತಾ ಭಾರತಿ' ಪೇಜನ್ನು ಬ್ಲಾಕ್ ಮಾಡಿ​ದ್ದ  ಫೇಸ್ ಬುಕ್ ನವರು ಬೆನ್ನಿಗೇ, ​ಇದೀಗ ​ಎರಡೇ ವಾರಗಳ​ ಬಳಿಕ ಮತ್ತೆ ಈ ​ಬಗೆಯ ​ಆಘಾತಕಾರಿ ​ಕ್ರಮ ಕೈಗೊಂಡಿದ್ದಾರೆ. ವಿಶೇಷವೇನೆಂದರೆ ಈ ಬಾರಿ ಫೇಸ್ ಬುಕ್ 'ವಾರ್ತಾ ಭಾರತಿ' ಮೇಲೆ ​ಹೇರಿರುವ ನಿರ್ಬಂಧವು ಭರ್ತಿ ಒಂದು ತಿಂಗಳಷ್ಟಾಗಿದೆ. ( ಜುಲೈ 10 ರಿಂದ ಆಗಸ್ಟ್ 9, 2017)".

"ಕಳೆದ ಬಾರಿಯಂತೆ, ಈ ಬಾರಿಯೂ ಫೇಸ್ ಬುಕ್ ಏಕಪಕ್ಷೀಯವಾಗಿ ಹಾಗು ಅಷ್ಟೇ ನಿರಂಕುಶ​ ಶೈಲಿಯಲ್ಲಿ ​ 'ವಾರ್ತಾ ಭಾರತಿ' ​ಪೇಜ್ ​ಮೇಲೆ ​ನಿರ್ಬಂಧ ​ವಿಧಿಸಿದೆ.​ ​ಕಳೆದ ಬಾರಿ ಫೇಸ್ ಬುಕ್ "ವಾರ್ತಾ ಭಾರತಿ ಓದುಗರನ್ನು ದಾರಿ ತಪ್ಪಿಸುವ ರೀತಿಯ ಮಾಹಿತಿ ಹಾಕುತ್ತಿದೆ" ಎಂದು ಅತ್ಯಂತ ಆಧಾರರಹಿತ ಹಾಗು ಅಷ್ಟೇ ಬೇಜವಾಬ್ದಾರಿಯುತ ಸಬೂಬು ನೀಡಿತ್ತು. "ವಾರ್ತಾ ಭಾರತಿ" ಫೇಸ್ ಬುಕ್ ನೀತಿ-ನಿಯಮಗಳನ್ನು ಉಲ್ಲಂಘಿಸಿದ ಯಾವುದಾದರೂ ಒಂದು ಸುದ್ದಿಯನ್ನು ತೋರಿಸಿ ಎಂದು ನಾನು, ಪತ್ರಿಕೆಯ ಸಾವಿರಾರು ಓದುಗರು ಹಾಗು ಅಭಿಮಾನಿಗಳು ಫೇಸ್ ಬುಕ್ ಸ್ಥಾಪಕರಿಗೆ, ಭಾರತದಲ್ಲಿ ಅದರ ಆಡಳಿತ ಹುದ್ದೆಯಲ್ಲಿರುವವರಿಗೆ ಸಾಕಷ್ಟು ಬಾರಿ ಬರೆದಿದ್ದೆವು. ಆದರೆ ಈವರೆಗೂ ಅಂತಹ ​ಒಂದೇ ​ಒಂದು ಸುದ್ದಿಯನ್ನೂ ತೋರಿಸಲು​ ​ಫೇಸ್ ಬುಕ್ ​ನವರಿಗೆ  ಸಾಧ್ಯವಾಗಿಲ್ಲ. ಈ ಬಾರಿ​ಯಂತೂ ಅವರು 'ವಾರ್ತಾ ಭಾರತಿ'ಯ ಮೇಲೆ ​ಒಂದು ತಿಂಗಳ ​ನಿರ್ಬಂಧ ಹೇರಿದಾಗ ಅಂತಹ ​ಯಾವ ​ಸಬೂಬನ್ನೂ ನೀಡಿಲ್ಲ".

"ಮಂಗಳೂರು ಹಾಗು ಬೆಂಗಳೂರುಗಳಿಂದ ಪ್ರಕಟವಾಗುತ್ತಿರುವ 'ವಾರ್ತಾ ಭಾರತಿ' ಕಳೆದ ಹದಿನಾಲ್ಕು ವರ್ಷಗಳಿಂದ ವಸ್ತುನಿಷ್ಠ ​ಹಾಗೂ ವೃತ್ತಿಪರ ​ಪತ್ರಿಕೋದ್ಯಮದ ಅತ್ಯುತ್ತಮ ನಿದರ್ಶನ ಎಂದು ಗುರುತಿಸಲ್ಪಟ್ಟಿದೆ. ಇಂದು 'ವಾರ್ತಾ ಭಾರತಿ' ರಾಜ್ಯದ ಅತ್ಯಂತ ಪ್ರಮುಖ ಹಾಗು ಖ್ಯಾತ ದಿನಪತ್ರಿಕೆಗಳಲ್ಲಿ ಒಂದು. 'ವಾರ್ತಾ ಭಾರತಿ'ಯ ಮುದ್ರಣ ಹಾಗು ಆನ್ ಲೈನ್ ಆವೃತ್ತಿಗಳಿಗೆ ಕರ್ನಾಟಕ ಮಾತ್ರವಲ್ಲದೆ ಜಗತ್ತಿನ ಎಲ್ಲೆಡೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಕನ್ನಡಿಗ ಓದುಗರಿದ್ದಾರೆ. ರಾಜ್ಯದಲ್ಲಿ ಎಲ್ಲ ಸಮುದಾಯಗಳು ಹಾಗು ವರ್ಗಗಳ ಪಾಲಿನ ನೆಚ್ಚಿನ ಪತ್ರಿಕೆಯಾಗಿ 'ವಾರ್ತಾ ಭಾರತಿ' ಬೆಳೆದಿದೆ. ಸಾಮಾನ್ಯವಾಗಿ ಮುಖ್ಯವಾಹಿನಿಯ ಇತರ ಮಾಧ್ಯಮಗಳು ನಿರ್ಲಕ್ಷಿಸುವ ದುರ್ಬಲ ವರ್ಗಗಳ ಸುದ್ದಿ ಹಾಗು ಅಭಿಪ್ರಾಯಗಳಿಗೆ ಪ್ರಾಮುಖ್ಯತೆ ನೀಡುವ ವೃತ್ತಿಪರ, ನಿಷ್ಪಕ್ಷ ಪರ್ಯಾಯ ಕನ್ನಡ ದೈನಿಕ ಎಂಬ ಹೆಗ್ಗಳಿಕೆಗೆ 'ವಾರ್ತಾ ಭಾರತಿ' ಇಂದು ಪಾತ್ರವಾಗಿದೆ".

"ವಾರ್ತಾ ಭಾರತಿಯ ಜಾತ್ಯತೀತ ಹಾಗು ಉದಾರವಾದಿ ನಿಲುವು ಸಹಜವಾಗಿ ಫ್ಯಾಶಿಸ್ಟ್ , ಕೋಮುವಾದಿ ಹಾಗು ವಿ​ಭಾ​ಜಕ ಶಕ್ತಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅದಕ್ಕಾಗಿಯೇ ಅವರು 'ವಾರ್ತಾ ಭಾರತಿ' ವಿರುದ್ಧ ಅಪಪ್ರಚಾರದ ಅಭಿಯಾನವನ್ನು ಅತ್ಯಂತ ವ್ಯವಸ್ಥಿತವಾಗಿ ಬಹಳ ಕಾಲದಿಂದ ನಡೆಸುತ್ತಲೇ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆ ಹಾಗು ಅದರ ಆನ್ ಲೈನ್ ಆವೃತ್ತಿಗಳ ವಿರುದ್ಧ ಈ ಟ್ರೋಲ್ ಪಡೆಯ ದ್ವೇಷ ಅಭಿಯಾನ ಅತ್ಯಂತ ಬಿರುಸು ಪಡೆದುಕೊಂಡಿದೆ. ಈ ದ್ವೇಷ ಪ್ರಚಾರವನ್ನು 'ವಾರ್ತಾ ಭಾರತಿ' ನಿರ್ಲಕ್ಷಿಸುತ್ತಾ ಬಂದಿತ್ತು ಹಾಗು ತನ್ನ ಅಭಿಮಾನಿ ಓದುಗರಿಗೂ ಇದೇ ಸಲಹೆ ನೀಡಿತ್ತು. ಆದರೆ ಇಂದು ಈ ಟ್ರೋಲ್ ಪಡೆಯ ಸುಳ್ಳುಗಳ ಆಧರಿತ ದ್ವೇಷ ಅಭಿಯಾನ ಫೇಸ್ ಬುಕ್ ನಂತಹ ಬೃಹತ್ ಸಂಸ್ಥೆಯ ಮೇಲೇ ಪ್ರಭಾವ ಬೀರಿ ​ಒಂದು ​ಜನಪರ ಪತ್ರಿಕೆಯ ಮೇಲೆ ದಾಳಿ ಮಾಡಿಸುವ ಹಂತಕ್ಕೆ ಬಂದು ನಿಂತಿದೆ".

"ಒಂದು ಸ್ವತಂತ್ರ ಸಾಮಾಜಿಕ ಮಾಧ್ಯಮ ಎಂಬ ನೆಲೆಯಲ್ಲಿ ಫೇಸ್ ಬುಕ್ ಬಗ್ಗೆ ನಮಗೆ ಅಪಾರ ಗೌರವವಿದೆ. ಅದು ಸತ್ಯವನ್ನು ಬಹಳ ಬೇಗ ಅರಿತುಕೊಳ್ಳುತ್ತದೆ ಹಾಗು 'ವಾರ್ತಾ ಭಾರತಿ'ಯ ಮೇಲೆ ಈಗ ನಡೆದಿರುವ ಆಕ್ರಮಣವನ್ನು ತಕ್ಷಣ ಹಿಂದೆಗೆದುಕೊಂಡು ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದೇವೆ. ಇನ್ನು ಮುಂದೆ ಇಂತಹ ಪ್ರಮಾದ ಪುನರಾವರ್ತನೆ ಆಗದು ಎಂಬ ಆಶಾಭಾವನೆ ನಮಗಿದೆ".

-ಅಬ್ದುಸ್ಸಲಾಮ್ ಪುತ್ತಿಗೆ (aputhige@gmail.com)​
 ಪ್ರಧಾನ ಸಂಪಾದಕ, ವಾರ್ತಾ ಭಾರತಿ ಕನ್ನಡ ದೈನಿಕ, www.varthabharati.in

-------------------------------------------------------

ಫೇಸ್‌ಬುಕ್ ಇವತ್ತು ಮಧ್ಯಾಹ್ನ ಹಠಾತ್ತನೆ "ವಾರ್ತಾ ಭಾರತಿ" ಮೇಲಿನ ನಿರ್ಬಂಧ ಹಿಂದೆಗೆದುಕೊಂಡಿದೆ. ಇದು ತಾತ್ಕಾಲಿಕ. ಹೀಗೆ ಟ್ರೋಲ್ ಗಳ ಸುಳ್ಳು ಆಧರಿತ ಅಭಿಯಾನಕ್ಕೆ ಬೆದರಿ ಏಕಪಕ್ಷೀಯವಾಗಿ ನಿರ್ಬಂಧ ಹೇರುವ ಪ್ರವೃತ್ತಿ ಪುನರಾವರ್ತನೆ ಆಗದಂತೆ ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸುವ ಪ್ರತಿಯೊಬ್ಬರೂ ಪ್ರಯತ್ನಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News