ಇಡಿ ಎದುರು ಹಾಜರಾದ ಮೀಸಾ ಭಾರತಿ
ಹೊಸದಿಲ್ಲಿ, ಜು.11: 8,000 ಕೋಟಿ ರೂ. ಹಣಚಲುವೆ ಪ್ರಕರಣಕ್ಕೆ ಸಂಬಂಧಿಸಿ ಆರ್‌ಜೆಡಿ ಶಾಸಕಿ, ಲಾಲೂ ಪ್ರಸಾದ್ ಯಾದವ್ ಪುತ್ರಿ ಮೀಸಾ ಭಾರತಿ ಜಾರಿ ನಿರ್ದೇಶನಾಲಯ(ಇ.ಡಿ) ಎದುರು ವಿಚಾರಣೆಗೆ ಹಾಜರಾದರು.
ಜು.11ರಂದು ಇ.ಡಿ.ಯ ತನಿಖಾಧಿಕಾರಿ ಎದುರು ಖುದ್ದು ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಮೀಸಾ ಹಾಜರಾಗಿದ್ದು ಮಿಶಾಲಿ ಪ್ರಿಂಟರ್ಸ್ ಆ್ಯಂಡ್ ಪ್ಯಾಕರ್ಸ್ ಸಂಸ್ಥೆಯೊಡನೆ ಹಾಗೂ ಈ ಹಿಂದೆ ಇ.ಡಿ. ಬಂಧಿಸಿದ್ದ ಚಾರ್ಟರ್ಡ್ ಅಕೌಂಟೆಂಟ್‌ನೊಂದಿಗೆ ಇವರು ಹೊಂದಿರುವ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಲಾಯಿತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಣ ಚಲುವೆ ತಡೆ ಕಾಯ್ದೆಯಡಿ ಮೀಸಾರ ವಿಚಾರಣೆ ನಡೆಸಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಈ ಪ್ರಕರಣದಲ್ಲಿ ಮೀಸಾ ಅವರ ಪತಿ ಶೈಲೇಶ್ ಕುಮಾರ್‌ಗೆ ಸೇರಿರುವ ಫಾರ್ಮ್‌ಹೌಸ್‌ನಲ್ಲಿ ಜುಲೈ 8ರಂದು ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಜುಲೈ 10ರಂದು ವಿಚಾರಣೆಗೆ ಹಾಜರಾಗುವಂತೆ ಶೈಲೇಶ್ ಕುಮಾರ್‌ಗೂ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ.