78 ಭಾರತೀಯರನ್ನು ಬಂಧಮುಕ್ತಗೊಳಿಸಿದ ಪಾಕ್
Update: 2017-07-11 18:11 IST
ಹೊಸದಿಲ್ಲಿ, ಜು.11: ಕರಾಚಿ ಜೈಲಿನಲ್ಲಿ ಬಂಧನಲ್ಲಿದ್ದ 77 ಭಾರತೀಯ ಮೀನುಗಾರರು ಹಾಗೂ ಬಿಹಾರದ ವ್ಯಕ್ತಿಯೋರ್ವನನ್ನು ಪಾಕಿಸ್ತಾನ ಬಿಡುಗಡೆಗೊಳಿಸಿದ್ದು ಇವರು ಭಾರತಕ್ಕೆ ಮರಳಿದ್ದಾರೆ.
ಸದ್ಭಾವನೆಯ ಸಂಕೇತವಾಗಿ 78 ಮಂದಿಯನ್ನು ಪಂಜಾಬ್‌ನ ಅಟ್ಟಾರಿ ಗಡಿಭಾಗದಲ್ಲಿ ಭಾರತದ ಗಡಿನಿಯಂತ್ರಣಾ ಪಡೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.ಇಸ್ಲಮಾಬಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಒದಗಿಸಿಕೊಟ್ಟ ತಾತ್ಕಾಲಿಕ ರಹದಾರಿ ಅನುಮತಿ ಪತ್ರದ ಮೂಲಕ ಇವರು ಭಾರತಕ್ಕೆ ಹಿಂದಿರುಗಿದರು. ಅರೆಬಿಯನ್ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಅಕಸ್ಮಾತ್ ಪಾಕ್ ಸಮುದ್ರವ್ಯಾಪ್ತಿಯನ್ನು ಪ್ರವೇಶಿಸಿದ ಕಾರಣ ಇವರನ್ನು ಪಾಕಿಸ್ತಾನದ ತಟರಕ್ಷಣಾ ಪಡೆಯವರು ಕಳೆದ ವರ್ಷದ ಮೇ ತಿಂಗಳಿನಲ್ಲಿ ಬಂಧಿಸಿದ್ದರು.
ಭಾರತದ ನೆಲಕ್ಕೆ ಕಾಲಿಟ್ಟ ತಕ್ಷಣ ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇವರ ದೋಣಿಗಳನ್ನು ಪಾಕ್ ಪಡೆ ಇನ್ನೂ ಹಸ್ತಾಂತರಿಸಿಲ್ಲ.