ನೈಲಾನ್ ಮತ್ತು ಕೃತಕ ಮಾಂಜಾಕ್ಕೆ ಎನ್‌ಜಿಟಿಯ ಸಂಪೂರ್ಣ ನಿಷೇಧ
ಹೊಸದಿಲ್ಲಿ,ಜು.11: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು ಗಾಳಿಪಟ ಗಳನ್ನು ಹಾರಿಸಲು ಬಳಕೆಯಾಗುವ ನೈಲಾನ್ ಅಥವಾ ಇತರ ಕೃತಕ ವಸ್ತುಗಳಿಂದ ತಯಾರಾದ ‘ಮಾಂಜಾ’ ವನ್ನು ಸಂಪೂರ್ಣವಾಗಿ ನಿಷೇಧಿಸಿ ಮಂಗಳವಾರ ಆದೇಶವನ್ನು ಹೊರಡಿಸಿದೆ. ಮಾಂಜಾದಿಂದ ಪಕ್ಷಿಗಳು,ಪ್ರಾಣಿಗಳು ಮತ್ತು ಮಾನವರ ಜೀವಗಳಿಗೆ ಅಪಾಯವಿದೆ ಎಂದು ಅದು ಎತ್ತಿ ಹಿಡಿದಿದೆ.
ಮಾಂಜಾದ ತಯಾರಿಕೆ, ಮಾರಾಟ, ದಾಸ್ತಾನು, ಖರೀದಿ ಮತ್ತು ಬಳಕೆಯನ್ನು ನಿಷೇಧಿಸುವಂತೆ ಎನ್‌ಜಿಟಿ ಅಧ್ಯಕ್ಷ ನ್ಯಾ.ಸ್ವತಂತ್ರ ಕುಮಾರ್ ಅವರ ನೇತೃತ್ವದ ಪೀಠವು ಎಲ್ಲ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ನಿರ್ದೇಶ ನೀಡಿತು.
ನಿಷೇಧ ಆದೇಶವು ಗಾಜಿನ ಚೂರುಗಳನ್ನು ಸವರಿದ ನೈಲಾನ್, ಚೈನೀಸ್ ಮತ್ತು ನೂಲಿನ ಮಾಂಜಾಗಳಿಗೆ ಅನ್ವಯಿಸುತ್ತದೆ ಎಂದು ಎನ್‌ಜಿಟಿ ಸ್ಪಷ್ಟಪಡಿಸಿದೆ.
ಪ್ರಾಣಿಹಕ್ಕುಗಳ ಸಂಸ್ಥೆ ಪೆಟಾ, ಖಾಲಿದ್ ಅಷ್ರಫ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಈ ತೀರ್ಪು ಹೊರಬಿದ್ದಿದೆ. ಮಾಂಜಾದಿಂದ ಮಾನವರು ಮತ್ತು ಪ್ರಾಣಿಗಳ ಜೀವಕ್ಕೆ ತೀವ್ರ ಅಪಾಯವಿದ್ದು, ಪ್ರತಿವರ್ಷ ಅದರಿಂದಾಗಿ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಅರ್ಜಿದಾರರು ವಾದಿಸಿದ್ದರು.