×
Ad

ಸಟ್ಲೆಜ್ -ಯಮುನ ಸಂಪರ್ಕ ಕಾಲುವೆ ಯೋಜನೆ: ಆದೇಶ ಪಾಲನೆಗೆ ಸುಪ್ರೀಂಕೋರ್ಟ್ ಸೂಚನೆ

Update: 2017-07-11 19:01 IST

ಹೊಸದಿಲ್ಲಿ, ಜು.11: ಸಟ್ಲೆಜ್-ಯಮುನ ಸಂಪರ್ಕ ಕಾಲುವೆ ಕುರಿತು ತಾನು ನೀಡಿದ್ದ ಆದೇಶವನ್ನು ಗೌರವಿಸಬೇಕು ಮತ್ತು ಜಾರಿಗೊಳಿಸಬೇಕು . ಈ ಆದೇಶ ಪಾಲನೆ ಪಂಜಾಬ್ ಮತ್ತು ಹರ್ಯಾನ ಸರಕಾರದ ಕರ್ತವ್ಯವಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಅಲ್ಲದೆ ಈ ವಿಷಯದ ಕುರಿತು ಯಾವುದೇ ಆಂದೋಲನ ನಡೆಯದಂತೆ ನೋಡಿಕೊಳ್ಳಬೇಕು ಎಂದು ಎರಡೂ ರಾಜ್ಯಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಹರ್ಯಾನದಲ್ಲಿ ಈ ವಿಷಯದ ಕುರಿತಂತೆ ಭಾರೀ ಪ್ರತಿಭಟನೆ ನಡೆಯುತ್ತಿದ್ದು ಪ್ರಧಾನ ವಿಪಕ್ಷವಾದ ಐಎನ್‌ಡಿಎಲ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದೆ.

 ಈ ವಿಷಯದಲ್ಲಿ ಎರಡೂ ರಾಜ್ಯಗಳು ಹೊಂದಾಣಿಕೆಯ ಮನೋಭಾವ ತೋರಿ ನ್ಯಾಯಾಲಯದ ಆದೇಶವನ್ನು ಸೌಹಾರ್ದಯುತವಾಗಿ ಜಾರಿಗೊಳಿಸುವಂತಾಗಲು ಕೇಂದ್ರ ಸರಕಾರ ಗರಿಷ್ಟ ಪ್ರಯತ್ನ ಮಾಡುತ್ತಿದೆ . ಕೇಂದ್ರದ ಜಲಸಂಪನ್ಮೂಲ ಸಚಿವರು ಎರಡೂ ರಾಜ್ಯಗಳ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿ ಚರ್ಚಿಸಿದ್ದಾರೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ತಿಳಿಸಿದರು.

ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು ಮತ್ತು ಪಾಲಿಸಬೇಕು ಎಂಬುದನ್ನು ಎರಡೂ ರಾಜ್ಯದ ಅಧಿಕಾರಿಗಳು ಮರೆಯಬಾರದು ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ತಿಳಿಸಿತು ಹಾಗೂ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ನಿಗದಿಗೊಳಿಸಿತು.

    1966ರಲ್ಲಿ ಪಂಜಾಬ್ ರಾಜ್ಯದಿಂದ ಹರ್ಯಾನವನ್ನು ಪ್ರತ್ಯೇಕಿಸಿದ್ದು 1988ರಲ್ಲಿ ಈ ನೀರು ಹಂಚಿಕೆ ಒಪ್ಪಂದ ಜಾರಿಗೆ ಬಂದಿದೆ. ತನ್ನ ವ್ಯಾಪ್ತಿಯಲ್ಲಿ ಬರುವ ಸಟ್ಲೆಜ್-ಯಮುನಾ ಕಾಲುವೆಯ ನಿರ್ಮಾಣ ಕಾರ್ಯವನ್ನು ಹರ್ಯಾನ ಪೂರ್ಣಗೊಳಿಸಿದೆ. ಆದರೆ ಪಂಜಾಬ್ ಸರಕಾರ ಆರಂಭಿಕ ಹಂತದ ಬಳಿಕ ಕಾಮಗಾರಿ ಯನ್ನು ಸ್ಥಗಿತಗೊಳಿಸಿತ್ತು ಹಾಗೂ ಒಪ್ಪಂದದ ಬಗ್ಗೆ ರಾಜ್ಯದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News