ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ ಪ್ರಯಾಣಿಕ!: ವಿಮಾನದಲ್ಲಿ ಹೊಡೆದಾಟ
ರಾಂಚಿ, ಜು. 11: ದಿಲ್ಲಿಯಿಂದ ರಾಂಚಿಗೆ ಸಂಚರಿಸುತ್ತಿದ್ದ ವಿಮಾನ ರಾಂಚಿ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಇಳಿಯುವ ಮೊದಲು ಪ್ರಯಾಣಿಕನೋರ್ವ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ್ದು, ಇದರಿಂದ ಪ್ರಯಾಣಿಕ ಹಾಗೂ ವಿಮಾನದ ಸಿಬ್ಬಂದಿ ನಡುವೆ ಹೊಡೆದಾಟ ನಡೆದಿದೆ.
ರಾಂಚಿ ನಿವಾಸಿ 32ರ ಹರೆಯದ ಅಫ್ತಾಬ್ ಅಹ್ಮದ್ ಹೊಸದಿಲ್ಲಿಯಿಂದ ಏರ್ ಏಶ್ಯಾ ವಿಮಾನ ಏರಿದ್ದ. ವಿಮಾನ ರಾಂಚಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ಆತ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ. ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ ಇತರ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ನಡೆದ ಹೊಡೆದಾಟ ದಲ್ಲಿ ಅಫ್ತಾಬ್ ಅಹ್ಮದ್, ಸಿಬ್ಬಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ವಿಮಾನ ರಾಂಚಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಅಹ್ಮದ್‌ನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಏರ್ ಏಶ್ಯಾ ವಿಮಾನ ದಿಲ್ಲಿಯಿಂದ ಸಂಚಾರ ಆರಂಭಿಸಿ ಕೋಲ್ಕತ್ತಾ ಮೂಲಕ ರಾಂಚಿಗೆ ತೆರಳುತ್ತಿತ್ತು. ಸುಮಾರು 9.30ರ ಹೊತ್ತಿಗೆ ಅಹ್ಮದ್ ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ್ದ. ಇಂತಹ ಹಲವು ಪ್ರಕರಣಗಳ ಈ ಹಿಂದೆ ಸಂಭವಿಸಿವೆ.