×
Ad

ಹೆದ್ದಾರಿ ಮದ್ಯ ನಿರ್ಬಂಧ: ಅರುಣಾಚಲ ಪ್ರದೇಶ,ಅಂಡಮಾನ್-ನಿಕೋಬಾರ್‌ಗೆ ವಿನಾಯಿತಿ

Update: 2017-07-12 17:34 IST

ಹೊಸದಿಲ್ಲಿ,ಜು.12: ಸರ್ವೋಚ್ಚ ನ್ಯಾಯಾಲಯವು ಮದ್ಯದಂಗಡಿಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಂದ 500 ಮೀ.ಅಂತರದೊಳಗಿರುವಂತಿಲ್ಲ ಎಂಬ ನಿರ್ಬಂಧ ದಿಂದ ಅರುಣಾಚಲ ಪ್ರದೇಶ ಮತ್ತು ಅಂಡಮಾನ್-ನಿಕೋಬಾರ್ ನಡುಗಡ್ಡೆಗಳಿಗೆ ವಿನಾಯಿತಿ ನೀಡಿ ಬುಧವಾರ ಆದೇಶಿಸಿದೆ.

 ಅರುಣಾಚಲ ಪ್ರದೇಶದ ಸುಮಾರು ಶೇ.50ರಷ್ಟು ಆದಾಯ ಮದ್ಯಮಾರಾಟ ದಿಂದಲೇ ಬರುತ್ತದೆ ಮತ್ತು 500 ಮೀ.ನಿರ್ಬಂಧದಿಂದಾಗಿ ರಾಜ್ಯದಲ್ಲಿಯ ಒಟ್ಟು 1011 ಮದ್ಯದಂಗಡಿಗಳ ಪೈಕಿ 916 ಅಂಗಡಿಗಳು ಮುಚ್ಚುಗಡೆಯಾಗುತ್ತವೆ ಎನ್ನುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠವು ಈ ವಿನಾಯಿತಿಯನ್ನು ಪ್ರಕಟಿಸಿತು.

ರಾಜ್ಯದ ಶೇ.80ರಷ್ಟು ಪ್ರದೇಶವು ಅರಣ್ಯದಿಂದ ಕೂಡಿದೆ ಮತ್ತು ರಾಜ್ಯದ 441.61 ಕೋ.ರೂ.ಆದಾಯದಲ್ಲಿ 210 ಕೋ.ರೂ.ಮದ್ಯಮಾರಾಟದಿಂದಲೇ ಬರುತ್ತದೆ ಎಂದು ಅರುಣಾಚಲ ಪ್ರದೇಶದ ಪರ ವಕೀಲರು ನಿವೇದಿಸಿಕೊಂಡಿದ್ದರು.

ಸರ್ವೋಚ್ಚ ನ್ಯಾಯಾಲಯವು ಹೆದ್ದಾರಿಗಳಿಂದ 500 ಮೀ.ಅಂತರದೊಳಗೆ ಮದ್ಯ ಮಾರಾಟವನ್ನು ನಿಷೇಧಿಸಿ ಮಾ.31ರಂದು ಹೊರಡಿಸಿದ್ದ ಆದೇಶದಿಂದ ಸಿಕ್ಕಿಂ, ಮೇಘಾಲಯ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗೆ ವಿನಾಯಿತಿಯನ್ನು ನೀಡಿತ್ತು.

 ನಿರ್ಬಂಧದಿಂದ ವಿನಾಯಿತಿ ನೀಡಬೇಕೆಂಬ ಅಂಡಮಾನ್-ನಿಕೋಬಾರ್ ಆಡಳಿತದ ಮನವಿಯನ್ನೂ ನ್ಯಾಯಾಲಯವು ಪುರಸ್ಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News