ಮಲಯಾಳಂ ನಟ ದಿಲೀಪ್‌ಗೆ 2 ದಿನಗಳ ಪೊಲೀಸ್ ಕಸ್ಟಡಿ
ಕೊಚ್ಚಿ,ಜು.12: ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯೋರ್ವಳನ್ನು ಅಪಹರಿಸಿ,ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಜನಪ್ರಿಯ ಮಲಯಾಳಂ ನಟ ದಿಲೀಪ್‌ಗೆ ಇಲ್ಲಿಗೆ ಸಮೀಪದ ಅಂಗಮಾಲಿ ನ್ಯಾಯಾಲಯವು ಬುಧವಾರ ಎರಡು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ.
ಪೊಲೀಸ್ ಕಸ್ಟಡಿಯ ಅವಧಿಯು ಶುಕ್ರವಾರ ಅಂತ್ಯಗೊಳ್ಳಲಿದ್ದು, ದಿಲೀಪ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯು ಅಂದು ನಡೆಯಲಿದೆ.
ಪೊಲೀಸರು ನ್ಯಾಯಾಲಯದ ಆದೇಶದ ಬಳಿಕ ದಿಲೀಪ್‌ನನ್ನು ವಿಚಾರಣೆಗಾಗಿ ಅಲುವಾ ಪೊಲೀಸ್ ಕ್ಲಬ್‌ಗೆ ಕರೆದೊಯ್ದರು.
ನಟಿಯ ಅಪಹರಣಕ್ಕೆ ಒಳಸಂಚು ರೂಪಿಸಿದ್ದ ಆರೋಪವನ್ನು ಹೊತ್ತಿರುವ ದಿಲೀಪ್ ನನ್ನು ಬಿಗಿಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದಾಗ ಅಲ್ಲಿ ಸೇರಿದ್ದ ಜನರು ಧಿಕ್ಕಾರವನ್ನು ಕೂಗುತ್ತಿದ್ದರು. ಇದೇ ಜನರು ಹಿಂದೆ ಈ ನಟನಿಗೆ ಜೈಕಾರವನ್ನು ಹಾಕುತ್ತಿದ್ದರು.
ದಿಲೀಪ್‌ನನ್ನು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಲಾಗಿದೆ ಎಂದು ಆತನ ಪರ ವಕೀಲ ಕೆ.ರಾಮಕುಮಾರ್ ಹೇಳಿದ್ದಾರೆ.
ಸೋಮವಾರ ಸಂಜೆ ಬಂಧಿಸಲ್ಪಟ್ಟಿದ್ದ ದಿಲೀಪ್‌ಗೆ ಮಂಗಳವಾರ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು.
ಮಲಯಾಳಂ ಚಿತ್ರ ಕಲಾವಿದರ ಸಂಘಟನೆ ಅಮ್ಮಾ ಈಗಾಗಲೇ ದಿಲೀಪ್‌ನನ್ನು ತನ್ನ ಸದಸ್ಯತ್ವದಿಂದ ಉಚ್ಚಾಟಿಸಿದೆ.