ಆಧಾರ್: ಖಾಸಗಿತನದ ಹಕ್ಕು ಕುರಿತ ವಿಚಾರಣೆಗೆ ಸುಪ್ರೀಂ ಸಮ್ಮತಿ
ಹೊಸದಿಲ್ಲಿ, ಜು.12: ಆಧಾರ್ ಕುರಿತ ವಾದ ವಿವಾದ ಆಲಿಸಲು ಮತ್ತು ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಆಗಿದೆಯೇ ಎಂಬುದನ್ನು ನಿರ್ಧರಿಸಲು ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠವೊಂದನ್ನು ರಚಿಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ಆಧಾರ್ ಕಾರ್ಡ್‌ನ ಸಿಂಧುತ್ವವನ್ನು ಪ್ರಶ್ನಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನ ಪೀಠವನ್ನು ರಚಿಸಿ ಈ ಕುರಿತು ವಿಚಾರಣೆ ನಡೆಸಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಮತ್ತು ಹಿರಿಯ ವಕೀಲ ಶ್ಯಾಮ್‌ದಿವಾನ್ ಮಾಡಿದ ಮನವಿಯನ್ನು ಪ್ರಧಾನ ನ್ಯಾಯಾಧೀಶ ಜೆ.ಎಸ್.ಖೇಹರ್ ಅವರ ಅಧ್ಯಕ್ಷತೆಯ ನ್ಯಾಯಾಲಯದ ಪೀಠವೊಂದು ಪುರಸ್ಕರಿಸಿತು. ಜುಲೈ 18ರಂದು ವಿಚಾರಣೆ ಆರಂಭವಾಗಲಿದ್ದು ಎರಡು ದಿನಗಳೊಳಗೆ ಮುಗಿಸಬೇಕು ಎಂದು ನ್ಯಾಯಮೂರ್ತಿ ಖೇಹರ್ ಸೂಚಿಸಿದ್ದಾರೆ.
ವಿವಿಧ ಸಮಾಜಕಲ್ಯಾಣ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಸಾಮಾಜಿಕ ಕಾರ್ಯಕರ್ತರ ತಂಡವೊಂದು ಆಕ್ಷೇಪಿಸಿತ್ತು. ವ್ಯಕ್ತಿಯೋರ್ವನ ಕಣ್ಣ ಪಾಪೆ, ಶಾರೀರಿಕ ಚಿಹ್ನೆ ಸೇರಿದಂತೆ ದೈಹಿಕ ವಿವರಗಳು ಆಧಾರ್ ಕಾರ್ಡ್‌ನಲ್ಲಿದ್ದು ಇದರಿಂದ ತಮ್ಮ ಖಾಸಗಿತನ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದವರು ಅರ್ಜಿಯಲ್ಲಿ ಹೇಳಿದ್ದರು.
ಆದರೆ ಆದಾರ್ ಜೋಡಣೆ ಕಡ್ಡಾಯಗೊಳಿಸಿದ ಕ್ರಮದಿಂದ ಸರಕಾರಕ್ಕೆ ಸಾವಿರಾರು ಕೋಟಿ ರೂ.ಗಳಷ್ಟು ಲಾಭವಿದೆ. ಈ ಹಿಂದೆ ನಕಲಿ ಫಲಾನುಭವಿಗಳು ಸರಕಾರದ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು ಎಂದು ಸರಕಾರ ಹೇಳಿದೆ.