'ಮೊಟ್ಟೆ'ಯ ಯಶಸ್ಸಿನ ಕತೆ

Update: 2017-07-13 04:29 GMT

'ಒಂದು ಮೊಟ್ಟೆಯ ಕತೆ' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದರ ಖುಷಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿದ್ದ ಚಿತ್ರತಂಡ ತಮ್ಮ ಅನುಭವಗಳನ್ನು ಹಂಚಿಕೊಂಡಿತು.

ರಾಜ್ ಎಂಬ ರಾಜಕುಮಾರ್ ಫ್ಯಾನ್

ನಿರ್ದೇಶಕ ರಾಜ್ ಬಿ ಶೆಟ್ಟಿ, ಈ ‌ಸಂದರ್ಭದಲ್ಲಿ ಎರಡು ಪ್ರಮುಖ ಸಂದೇಹಗಳಿಗೆ ಉತ್ತರಿಸಬೇಕಾಯಿತು. ಅದರಲ್ಲೊಂದು 'ಬೋಳು ತಲೆಯ ವ್ಯಕ್ತಿಯನ್ನು 'ಮೊಟ್ಟೆ' ಎಂದು ಅಣಕಿಸುವುದನ್ನು ತಮಿಳು ಅಥವಾ ಮಲಯಾಳಂ ಭಾಷೆಗಳಲ್ಲಿ ನೋಡಿರುತ್ತೇವೆ.ಆದರೆ ಕನ್ನಡದಲ್ಲಿ ಈ ಪದದ ಬಳಕೆಗೆ ಕಾರಣ ಅಥವಾ ಸ್ಫೂರ್ತಿ ಏನಾಗಿತ್ತು ಎಂಬುದು. ಅದಕ್ಕೆ ರಾಜ್ ನೀಡಿದ ಉತ್ತರ ಹೀಗಿದೆ. " ಬೋಳು ತಲೆ ವ್ಯಕ್ತಿಯನ್ನು ಬಾಂಡ್ಲಿ ಎಂದು ಹೇಳುವುದು ಹಳೆಯ ಪದದಂತೆ, ಅಥವಾ ನೇರವಾಗಿ ಅಣಕಿಸುವಂತೆ ಕಾಣುತ್ತದೆ. ಅದಕ್ಕೆ ಹತ್ತಿರದ ಪದವಾದ ಮೊಟ್ಟೆ ಎಂಬ ಪದವನ್ನು ಬಳಸಿದ್ದೇನೆ."
ಮತ್ತೊಂದು ಪ್ರಶ್ನೆ, "ಡಾ ರಾಜಕುಮಾರ್ ಅವರ ಪಾತ್ರವನ್ನು ಚಿತ್ರದಲ್ಲಿ ಕಮರ್ಷಿಯಲ್ ಉದ್ದೇಶದಿಂದಲೇ ಬಳಸಿಕೊಳ್ಳಲಾಯಿತೇ?"
ಎನ್ನುವುದಕ್ಕೆ ಉತ್ತರಿಸಿದ ರಾಜ್, "ಚಿತ್ರ ನೋಡಿದಾಗ ಈ ಪ್ರಶ್ನೆಗೆ ತಕ್ಕ ಉತ್ತರ ದೊರಕುತ್ತದೆ ಎಂದುಕೊಂಡಿದ್ದೇನೆ. ರಾಜಕುಮಾರ್ ಅವರು ಚಿತ್ರದ ನಾಯಕನ ಪಾಲಿಗೆ ಒಂದು ಮುಖ್ಯ ಭಾಗವಾಗಿರುತ್ತಾರೆ" ಎಂದಿದ್ದಾರೆ.
ವೈಯಕ್ತಿಕವಾಗಿಯೂ ನೀವು ರಾಜಕುಮಾರ್ ಅಭಿಮಾನಿಯೇ? ಎಂದು ಕೇಳಿದಾಗ
"ಹೌದು, ನಾನೊಬ್ಬ ರಾಜಕುಮಾರ್ ಅಭಿಮಾನಿ" ಎಂಬ ಸಹಜ ಉತ್ತರ ನೀಡಿದ್ದಾರೆ.

'ಪವರ್ ಸ್ಟಾರ್'ನಿಂದ  ಪ್ರಶಂಸೆ

ಚಿತ್ರದ ನಿರ್ಮಾಪಕ ಪವನ್ ಕುಮಾರ್ ಮಾತನಾಡಿ, ನಟ ಪುನೀತ್ ರಾಜಕುಮಾರ್ ಅವರು ಚಿತ್ರದ ಬಗ್ಗೆ ಮತ್ತು ಚಿತ್ರದಲ್ಲಿ ಡಾ.ರಾಜ್ ಅವರನ್ನು ತೋರಿಸಿರುವ ರೀತಿಯ ಬಗ್ಗೆ ಖುಷಿ ವ್ಯಕ್ತಪಡಿಸಿರುವುದಾಗಿ  ಹೇಳಿದರು. ಚಿತ್ರ ಯುರೋಪ್ ನಲ್ಲಿ ಈಗಾಗಲೇ ಸೆನ್ಸಾರ್ ಆಗಿದ್ದು, ವ್ಯಾಪಕ ಪ್ರಶಂಸೆ ಪಡೆದುಕೊಂಡಿದೆ. ಜರ್ಮನಿಯಿಂದಲೂ ಚಿತ್ರಕ್ಕೆ ಅಭೂತಪೂರ್ವವಾದ ಬೇಡಿಕೆ ಇದೆ ಎಂದರು.

ಚಿತ್ರದ ವಿತರಕ ಜಾಕ್ ಮಂಜು ಪ್ರಕಾರ ಚಿತ್ರಕ್ಕೆ ದಿನೇ ದಿನೇ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳ ಸಂಖ್ಯೆಯನ್ನು ಅರುವತ್ತರಷ್ಟು ಹೆಚ್ಚಿಸಲು ತೀರ್ಮಾನಿಸಿದ್ದಾರಂತೆ. ಮಂಗಳೂರಿನ ತುಳುವರು ಕನ್ನಡ ಚಿತ್ರ ಮಾಡಿ ತಮ್ಮ ವಿಭಿನ್ನ ಆಲೋಚನೆಯನ್ನು ಕನ್ನಡಿಗರೊಂದಿಗೆ ಹಂಚಿಕೊಂಡಿದ್ದಕ್ಕೆ ವಂದನೆ ಹೇಳಬೇಕು ಎಂದು ಜಾಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕಿಯರಾಗಿ ನಟಿಸಿದ ಅಮೃತಾ ನಾಯಕ್, ಶೈಲ ಶ್ರೀ ಮತ್ತು ತಮ್ಮನಾಗಿ ನಟಿಸಿದ ವಿಜೆ ವಿನೀತ್, ಪ್ರಾಂಶುಪಾಲ ಮೈಮ್ ರಾಮದಾಸ್ ಸೇರಿದಂತೆ ಒಟ್ಟು ಚಿತ್ರತಂಡ ಪಾಲ್ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News