ಆಗಸ್ಟ್ 4ಕ್ಕೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ 'ರಾಜ್ ವಿಷ್ಣು'

Update: 2017-07-13 14:48 GMT

ಬೆಂಗಳೂರು, ಜು.13: ಶರಣ್ ನಾಯಕರಾಗಿರುವ ಬಹುನಿರೀಕ್ಷಿತ ಚಲನಚಿತ್ರ 'ರಾಜ್ ವಿಷ್ಣು' ಮುಂದಿನ ತಿಂಗಳ ಮೊದಲ ವಾರ ತೆರೆಕಾಣಲಿದೆ. ಇಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಂಡದ ಪ್ರಮುಖರು ಪಾಲ್ಗೊಂಡು ವಿಶೇಷ ಮಾಹಿತಿಗಳನ್ನು ನೀಡಿದರು.

ರಿಮೇಕ್ ಚಿತ್ರಗಳ ನಿರ್ದೇಶಕರಾಗಿ ಯಶಸ್ಸು ಕಂಡಿರುವ ಕೆ. ಮಾದೇಶ್, ಈ ಬಾರಿ ತಮಿಳಿನ 'ರಜಿನಿ ಮುರುಗನ್' ಚಿತ್ರವನ್ನು ಕನ್ನಡಕ್ಕೆ ತಂದಿದ್ದಾರೆ. ಅವರ ಪ್ರಕಾರ ಇದೊಂದು ಅಪ್ಪಟ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಚಿತ್ರ. ಮೂಲ ಚಿತ್ರದ ಕತೆಯನ್ನು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಿಸಲಾಗಿದೆಯಂತೆ. ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ, ಈ ಹಿಂದೆ ಶರಣ್ ರದ್ದೇ 'ಬುಲೆಟ್ ಬಸ್ಯಾ', 'ಮಾರುತಿ 800' ಮೊದಲಾದ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಅನುಭವ ಇರುವುದನ್ನು ನೆನಪಿಸಿಕೊಂಡರು.

ನಟ ಭಜರಂಗಿ ಲೋಕಿ ಮಾತನಾಡಿ, "ಮೊದಲ ಬಾರಿಗೆ ಹಾರಾಟ, ಚೀರಾಟಗಳಿರದ ಸೈಲೆಂಟ್ ಕಿಲ್ಲರ್ ನಂಥ ಪಾತ್ರ ದೊರಕಿದೆ. ಒರಿಜಿನಲ್ ಚಿತ್ರಕ್ಕಿಂತ ಅದ್ದೂರಿಯಾಗಿ ತಯಾರಾಗಿದೆ" ಎಂದರು. ನವ ನಟ ಗೌತಮ್ ತಮ್ಮದು ಭಜರಂಗಿ ಲೋಕಿಯ ಬಲಗೈಯಂತಿರುವ ಪಾತ್ರ ಎಂದರು. ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಮಾತನಾಡಿ, "ಅಧ್ಯಕ್ಷ ಚಿತ್ರದ ಬಳಿಕ ನನ್ನ ಮತ್ತೆ ಶರಣ್ ರ ಜೋಡಿ  ಒಂದಾಗಿದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಖುಷಿ ನೀಡುವುದೆಂಬ ನಂಬಿಕೆ ಇದೆ" ಎಂದರು.

ಚಿತ್ರದ ನಾಯಕಿ ವೈಭವಿ ಈಗಾಗಲೇ ಮರಾಠಿ ಸೇರಿದಂತೆ ತಮಿಳು‌ ಚಿತ್ರಗಳಲ್ಲಿಯೂ ನಟಿಸಿದ ಅನುಭವ ಹೊಂದಿದ್ದಾರೆ. "ಚಿತ್ರದಲ್ಲಿ ನನ್ನದು ಲಾವಣ್ಯ ಎಂಬ ಯುವತಿಯ ಪಾತ್ರ" ಎಂದು ತಿಳಿಸಿದ ವೈಭವಿ, ಮರಾಠಿ ರಂಗಭೂಮಿಯಿಂದ ಬಂದ ಪ್ರತಿಭೆ.

ಚಿತ್ರವನ್ನು ನಿರ್ಮಿಸಿರುವ ರಾಮು ಈ ಹಿಂದೆ ಶರಣ್ ನಟನೆಯ 'ಅಧ್ಯಕ್ಷ' ಚಿತ್ರವನ್ನು ಮೈಸೂರು ಏರಿಯಾಗೆ ವಿತರಣೆ ಹಕ್ಕು ತೆಗೆದುಕೊಂಡು ಲಾಭ ಕಂಡಿದ್ದಾಗಿ ನೆನಪಿಸಿಕೊಂಡರು. ಅದೇ ಕಾರಣದಿಂದ "ರಜನಿ ಮುರುಗನ್" ಚಿತ್ರದ ಹಕ್ಕನ್ನು ಖುದ್ದಾಗಿ ಪಡೆದುಕೊಂಡು ಶರಣ್ -ಚಿಕ್ಕಣ್ಣ ಜೋಡಿಯನ್ನು ಮತ್ತೆ ಒಂದಾಗಿಸಿರುವುದಾಗಿ ಅವರು ಹೇಳಿದರು.

ಅಂದ ಹಾಗೆ ಚಿತ್ರದಲ್ಲಿ ಶ್ರೀಮುರಳಿ ಅತಿಥಿ ಪಾತ್ರ ನಿರ್ವಹಿಸುತ್ತಿರುವ ವಿಚಾರವನ್ನು ಅವರು ತಿಳಿಸಿದರು. ಕೊನೆಯಲ್ಲಿ ಮಾತನಾಡಿದ ಶರಣ್ ಚಿತ್ರದ ಹಾಡುಗಳ ಬಗ್ಗೆ ವಿವರಿಸುತ್ತಾ, ತಮ್ಮ ಮತ್ತು ಅರ್ಜುನ್ ಜನ್ಯ ಜೊತೆಗಿನ ಕಾಂಬಿನೇಶನ್ ಈ ‌ಬಾರಿಯೂ ಚೆನ್ನಾಗಿ ವರ್ಕೌಟಾಗಿದೆ ಎಂದರು. ಈ ಚಿತ್ರ ಕೂಡ ಅಧ್ಯಕ್ಷದಂತೆ ಆಗಸ್ಟ್ ನಲ್ಲಿ ಬಿಡುಗಡೆಗೊಳ್ಳುತ್ತಿದ್ದು, ರಾಜ್ ವಿಷ್ಣು ಅಭಿಮಾನಿಗಳು ಖುಷಿಯಾಗುವಂಥ‌ ಸನ್ನಿವೇಶಗಳಿವೆ ಎಂದರು.

ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಚೇಂದ್ರ ಪ್ರಸಾದ್, ವೀಣಾ ಸುಂದರ್ ಸೇರಿದಂತೆ ದೊಡ್ಡ ಮಟ್ಟಿನ ತಾರಾಗಣ ಚಿತ್ರದಲ್ಲಿದೆ. ಪತ್ರಿಕಾಗೋಷ್ಠಿಯ ಬಳಿಕ ಚಿತ್ರದ ಹಾಡು ಮತ್ತು ಟ್ರೇಲರ್ ಪ್ರದರ್ಶಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News