ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ ಮಾತ್ರ ಹಜ್‌ಗೆ ಅವಕಾಶ: ಬಿಜೆಪಿ ಶಾಸಕನ ಬೆದರಿಕೆ
ಲಕ್ನೋ,ಜು.13: ಉತ್ತರ ಪ್ರದೇಶದ ಚರ್ಖಾರಿಯ ಬಿಜೆಪಿ ಶಾಸಕ ಬ್ರಿಜ್‌ಭೂಷಣ ರಜಪೂತ್ ಅವರು ಮುಸ್ಲಿಂ ಸಮುದಾಯಕ್ಕೆ ಬೆದರಿಕೆಯ ಹೇಳಿಕೆಯನ್ನು ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಹಿಂದುಗಳಿಗೆ ಅವಕಾಶ ನೀಡಿದರೆ ಮಾತ್ರ ಮುಸ್ಲಿಮರು ಹಜ್‌ಗೆ ತೆರಳಲು ತಾನು ಅವಕಾಶ ನೀಡುವುದಾಗಿ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಆಗಿರುವ ವೀಡಿಯೊದಲ್ಲಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಪಥ ತೊಡುವಂತೆ ಹಿಂದುಗಳಿಗೆ ಕರೆ ನೀಡಿರುವ ರಜಪೂತ್, ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿಯನ್ನುಂಟು ಮಾಡಲು ಮುಸ್ಲಿಮರು ಪ್ರಯತ್ನಿಸಿದರೆ ಅವರು ಮಕ್ಕಾ ಮತ್ತು ಮದೀನಾಕ್ಕೆ ತೆರಳಲು ತಾನು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಅವರ ಭಾಷಣ ಇಲ್ಲಿಗೇ ನಿಂತಿಲ್ಲ. ಈ ದೇಶದಲ್ಲಿ 20 ಕೋಟಿ ಮುಸ್ಲಿಮರು ಇರುವಾಗ ಅವರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ? ಆದ್ದರಿಂದ ಅವರಿಗೆ ನೀಡಿರುವ ಮೀಸಲಾತಿ ಯನ್ನು ರದ್ದುಗೊಳಿಸಬೇಕು ಎಂದೂ ಅವರು ಹೇಳಿದ್ದಾರೆ.
ಬಿಜೆಪಿ ನಾಯಕರು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದು ಹೊಸದೇನಲ್ಲ. ಉದಾಹರಣೆಗೆ, ಕಳೆದ ಎಪ್ರಿಲ್‌ನಲ್ಲಿ ಹೈದರಾಬಾದ್‌ನ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವವರ ತಲೆ ಕಡಿಯುವುದಾಗಿ ಹೇಳಿದ್ದರು.