ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ 35 ವಿದ್ಯುತ್ ಸ್ಥಾವರಗಳಿಗೆ ನೋಟಿಸ್ ಜಾರಿ
ಹೊಸದಿಲ್ಲಿ, ಜು.13: ತನ್ನ ನಿರ್ದೇಶನದ ಹೊರತಾಗಿಯೂ ದೇಶದಾದ್ಯಂತದ 35 ಉಷ್ಣ ವಿದ್ಯುತ್ ಸ್ಥಾವರಗಳು ಅಂತರ್ಜಾಲ ಹೊರಹೊಮ್ಮುವ ಮತ್ತು ಮಾಲಿನ್ಯ ತಪಾಸಣಾ ವ್ಯವಸ್ಥೆಯನ್ನು ಅಳವಡಿಸಲು ವಿಫಲವಾಗಿವೆ ಎಂದು ಆರೋಪಿಸಿ ಕೇಂದ್ರೀಯ ಮಾಲಿನ್ಯ ನಿಯಂತ್ರಣಾ ಮಂಡಳಿ (ಸಿಪಿಸಿಬಿ) ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದೆ. ಇದರಲ್ಲಿ ರಾಯಚೂರು ಉಷ್ಣವಿದ್ಯುತ್ ಸ್ಥಾವರವೂ ಸೇರಿದೆ.
ಈ ಬಗ್ಗೆ ಉತ್ತರಿಸುವಂತೆ ನ್ಯಾಯಮೂರ್ತಿ ಜಾವಡ್ ರಹೀಂ ನೇತೃತ್ವದ ನ್ಯಾಯಪೀಠವು ಕೇಂದ್ರ ವಿದ್ಯುತ್ ಇಲಾಖೆ ಮತ್ತು 35 ಉಷ್ಣ ವಿದ್ಯುತ್ ಸ್ಥಾವರಗಳಿಗೆ ನೋಟಿಸ್ ಜಾರಿಗೊಳಿಸಿದೆ. ರಾಯಚೂರು, ಕೊರಾಡಿ, ಸತ್‌ಪುರ,ಖಾಪರ್‌ಖೆಡ, ಪರಸ್, ಪರ್ಲಿ ಸೇರಿದಂತೆ ಉಷ್ಣವಿದ್ಯುತ್ ಸ್ಥಾವರಗಳು ಹಾಗೂ ಕಮಲ್ ಸ್ಪಾಂಜ್ ಸ್ಟೀಲ್ ಆ್ಯಂಡ್ ಪವರ್ ಲಿ, ಇಂಡೊ ರಾಮ ಸಿಂಥೆಟಿಕ್ಸ್, ಉತ್ತಮ್ ಗಲ್ವ ಸ್ಟೀಲ್ಸ್, ಅರೊಬಿಂದೊ ಆಗ್ರೋ ಎನರ್ಜಿ, ಕಾವೇರಿ ಗ್ಯಾಸ್ ಪವರ್ ಲಿ, ತ್ರಿಪುರದಲ್ಲಿರುವ ಅನಿಲ ಆಧಾರಿತ 16 ಎಂವಿ ಉಷ್ಣವಿದ್ಯುತ್ ಸ್ಥಾವರ ಇದರಲ್ಲಿ ಸೇರಿದೆ.
2015ರ ಜುಲೈ 21ರಂದು ದೇಶದಾದ್ಯಂತದ 318 ಉಷ್ಣ ವಿದ್ಯುತ್ ಸ್ಥಾವರಗಳಿಗೆ ಆದೇಶ ನೀಡಲಾಗಿತ್ತು. ಇದರಲ್ಲಿ 35 ಉಷ್ಣ ವಿದ್ಯುತ್ ಸ್ಥಾವರಗಳು ಇದನ್ನು ಪಾಲಿಸುವಲ್ಲಿ ವಿಫಲವಾಗಿರುವ ಕಾರಣ ತಕ್ಷಣ ಆದೇಶ ಪಾಲಿಸುವಂತೆ ಈ ಸಂಸ್ಥೆಗಳಿಗೆ ಸೂಚಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.