ಬೆಂಕಿ ಹಚ್ಚಲು ರಾಜ್ಯವೆನ್ನುವುದು ಬಿಜೆಪಿಯ ಪಿತ್ರಾರ್ಜಿತ ಆಸ್ತಿಯೇ?

Update: 2017-07-14 03:54 GMT

ಇತ್ತೀಚೆಗೆ ಸಂಘಪರಿವಾರದ ಕಾರ್ಯಕರ್ತನೊಬ್ಬನ ಹತ್ಯೆಗೆ ಸಂಬಂಧಿಸಿ ಪ್ರತಿಭಟನೆ ನಡೆಸುತ್ತಾ ಸಂಸತ ನಳಿನ್‌ಕುಮಾರ್ ಕಟೀಲು ಅವರು ‘ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲು ನಮಗೆ ಗೊತ್ತಿದೆ’ ಎಂದು ಬೆದರಿಕೆಯೊಡ್ಡಿದ್ದರು. ಆ ಹತ್ಯೆಯನ್ನು ಕೇರಳದಿಂದ ಬಂದ ಭಯೋತ್ಪಾದಕರು ನಡೆಸಿದ್ದಾರೆ ಎಂದೆಲ್ಲ ತಲೆಗೆ ಹೊಳೆದದ್ದನ್ನು ವಾಂತಿ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಉದ್ವಿಗ್ನ ವಾತಾವರಣ ನಿರ್ಮಿಸಿದ್ದರು. ಆದರೆ ಅಂತಿಮವಾಗಿ ಆ ಕೊಲೆಯನ್ನು ಕೊಲೆಗೀಡಾದ ವ್ಯಕ್ತಿಯ ಸೋದರಿಯೇ ಮಾಡಿಸಿರುವುದು ಬೆಳಕಿಗೆ ಬಂತು. ಸಂಸದರು ಮತ್ತು ಅವರ ಪರಿವಾರಕ್ಕೆ ಅಪರಾಧಿಯನ್ನು ಬಂಧಿಸುವುದಕ್ಕಿಂತ, ಜಿಲ್ಲೆಗೆ ಬೆಂಕಿ ಹಚ್ಚುವ ಕುರಿತಂತೆಯೇ ಅತ್ಯಾಸಕ್ತಿ ಇದ್ದಂತಿತ್ತು. ಒಬ್ಬ ಸಂಸದನನ್ನು ಜಿಲ್ಲೆಯ ಜನರು ಆಯ್ಕೆ ಮಾಡುವುದು ಜಿಲ್ಲೆಯನ್ನು ಉದ್ಧರಿಸುವುದಕ್ಕಾಗಿಯೇ ಹೊರತು, ಬೆಂಕಿ ಹಚ್ಚುವುದಕ್ಕಾಗಿ ಅಲ್ಲ. ಬೆಂಕಿ ಮತ್ತು ಅಭಿವೃದ್ಧಿ ಜೊತೆ ಜೊತೆಯಾಗಿ ಸಾಗುವುದಕ್ಕೆ ಸಾಧ್ಯವಿಲ್ಲ.

ಹಚ್ಚಿದ ಬೆಂಕಿಯನ್ನು ನಂದಿಸುವ ಕೆಲಸ ಮಾಡುವವನು ನಿಜವಾದ ಜನ ನಾಯಕ. ಅದಕ್ಕೆ ಬದಲಾಗಿ ಸಂಸದರು, ಒಂದು ಹತ್ಯೆ ಪ್ರಕರಣದ ತನಿಖೆಯನ್ನು ದಾರಿತಪ್ಪಿಸುವ, ಜನರನ್ನು ಪ್ರಚೋದಿಸಿ ಪರಸ್ಪರ ಕಾದಾಡಿಸುವ ಜನದ್ರೋಹಿ ಕೆಲಸಕ್ಕೆ ಇಳಿದರು. ಈ ಸಂಸದನಿಗೆ ಬಿಜೆಪಿಯ ರಾಜ್ಯಮಟ್ಟದ ವರಿಷ್ಠರು ಬುದ್ಧಿ ಹೇಳುತ್ತಾರೆ ಎಂದು ಕರಾವಳಿ ಜನರು ನಿರೀಕ್ಷಿಸಿದರೆ, ಇದೀಗ ಇವರ ನಾಯಕರಾಗಿರುವ ಬಿ. ಎಸ್. ಯಡಿಯೂರಪ್ಪ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇನೆ ಎಂದು ಜನರನ್ನು ಬೆದರಿಸುತ್ತಿದ್ದಾರೆ. ಕಲ್ಲಡ್ಕ ಘರ್ಷಣೆಗೆ ಸಂಬಂಧಿಸಿ ಸೆಕ್ಷನ್ ಉಲ್ಲಂಘಿಸಿ ಜನರನ್ನು ಪ್ರಚೋದಿಸಿದ ಆರೋಪವನ್ನು ಹೊತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ಟರನ್ನೇನಾದರೂ ಬಂಧಿಸಿದ್ದೇ ಆದರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳುತ್ತದೆ ಎಂದಿರುವ ಯಡಿಯೂರಪ್ಪ, ಪರೋಕ್ಷವಾಗಿ ತನ್ನ ಬಾಲಕ್ಕೇ ಬೆಂಕಿ ಹಚ್ಚಿಕೊಂಡಿದ್ದಾರೆ.

 ಕಲ್ಲಡ್ಕ ಭಟ್ ಮೇಲೆ ಪ್ರಕರಣ ದಾಖಲಾದರೆ ಅವರನ್ನು ಬಂಧಿಸಬೇಕೆ ಬೇಡವೇ ಎನ್ನುವುದನ್ನು ನಿರ್ಧರಿಸುವವರು ಪೊಲೀಸರು. ಭಟ್ಟರು ನಿರಪರಾಧಿ ಎಂದಾದರೆ ಅದನ್ನು ಸಾಬೀತು ಮಾಡಲು ನ್ಯಾಯಾಲಯಗಳಿವೆ. ಒಂದೆಡೆ ಬಿಜೆಪಿಯ ಮುಖಂಡರು ಕರಾವಳಿಯಲ್ಲಿ ಶಾಂತಿ ಸ್ಥಾಪಿಸಬೇಕು, ಕಾನೂನು ಸುವ್ಯವಸ್ಥೆ ಸರಿಪಡಿಸಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸುತ್ತಾರೆ. ಮಗದೊಂದೆಡೆ, ಗಲಭೆಯಲ್ಲಿ ನೇರ ಪಾತ್ರವಹಿಸಿದವರನ್ನು ಬಂಧಿಸಿದರೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆಯೊಡ್ಡುತ್ತಾರೆ. ಇದೇ ಸಂದರ್ಭದಲ್ಲಿ, ಕರಾವಳಿಯಲ್ಲಿ ಶಾಂತಿ ಸ್ಥಾಪಿಸಲು ‘ಶಾಂತಿ ಸಭೆ’ ಮಾಡಿದರೆ ಅದರಲ್ಲಿ ಭಾಗವಹಿಸದೇ, ಸಾರ್ವಜನಿಕವಾಗಿ ವೇದಿಕೆಯಲ್ಲಿ ಅಶಾಂತಿಯನ್ನು ಹರಡುವಂತಹ ಹೇಳಿಕೆಗಳನ್ನು ನೀಡುತ್ತಾರೆ. ಜಿಲ್ಲೆಯಲ್ಲಿ ಕಾನೂನು ಹದಗೆಡಬೇಕು ಎನ್ನುವುದು ಬಿಜೆಪಿಯ ಉದ್ದೇಶವೇ ಹೊರತು, ಶಾಂತಿ ಸ್ಥಾಪನೆ ಅಲ್ಲ ಎನ್ನುವುದು ಅವರ ಪ್ರತಿ ನಡೆಯಲ್ಲಿ ಸಾಬೀತಾಗುತ್ತಿದೆ. ಈ ಹಿನ್ನೆಲೆಯಲ್ಲೇ ಶಾಂತಿ ಸಭೆಯನ್ನು ಬಹಿಷ್ಕರಿಸಿ ಅಶಾಂತಿ ಸಭೆಯನ್ನು ನಡೆಸಿದ್ದಾರೆ. ಪ್ರಭಾಕರ ಭಟ್ಟರನ್ನು ಮತ್ತು ಅವರ ಹಿಂಬಾಲಕರನ್ನು ಬಂಧಿಸದಂತೆ ಒತ್ತಡ ಹೇರಲು ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವ ಬೆದರಿಕೆಯನ್ನು ಒಡ್ಡಿದ್ದಾರೆ. ಅಂದರೆ ಬಿಜೆಪಿಯ ಪಾಲಿಗೆ ರಾಜ್ಯದ ಜನರ ಹಿತಾಸಕ್ತಿಗಿಂತ, ಪ್ರಭಾಕರಭಟ್ಟರ ಹಿತಾಸಕ್ತಿಯೇ ದೊಡ್ಡದು ಈ ಮೂಲಕ ಸಾಬೀತಾಗಿದೆ. ಇಷ್ಟಕ್ಕೂ ಈ ಪ್ರಭಾಕರ ಭಟ್ಟರ ಹಿನ್ನೆಲೆ, ಆತನ ಅನಾಗರಿಕ ಭಾಷಣಗಳು ಯಾವ ರೀತಿಯಲ್ಲೂ ಈ ನಾಡಿನ ಸಂಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ. ಅವರ ಮಾತುಗಳು ಮತ್ತು ಕಾರ್ಯಗಳು ಈ ನಾಡನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವ ಬದಲು, ಒಡೆದು ನಾಶ ಮಾಡುವ ದುರುದ್ದೇಶವನ್ನು ಹೊಂದಿದೆ. ಇತ್ತೀಚೆಗೆ ಧರ್ಮ, ಸಂಸ್ಕೃತಿಯ ಮರೆಯಲ್ಲಿ ತನ್ನ ಆರ್ಥಿಕ ವ್ಯವಹಾರವನ್ನು ಹಿಗ್ಗಿಸುತ್ತಿರುವ ಪ್ರಭಾಕರ ಭಟ್ಟರಿಗೆ, ಹೇಗಾದರೂ ಮಾಡಿ ಮತ್ತೆ ರಾಜ್ಯದಲ್ಲಿ ತನ್ನ ಸರಕಾರ ಅಧಿಕಾರಕ್ಕೆ ಬರುವುದು ಬೇಕಾಗಿದೆ. ಅಧಿಕಾರಕ್ಕೆ ಏರುವಂತಹ ಯಾವ ಯೋಗ್ಯತೆಯೂ ಬಿಜೆಪಿ ನಾಯಕರಿಗಿಲ್ಲ ಎನ್ನುವುದು ಅರಿತೇ ಪ್ರಭಾಕರ ಭಟ್ಟರು ಸ್ವಯಂ ಬೀದಿಗಿಳಿದಿದ್ದಾರೆ. ತಾನು ಸಾಕಿದ ಗೂಂಡಾಗಳು, ರೌಡಿಗಳನ್ನು ಮುಂದಿಟ್ಟುಕೊಂಡು ನಾಡಿನ ಶಾಂತಿ ಕೆಡಿಸಲು ಹೊರಟಿದ್ದಾರೆ. ತನ್ನ ದುರುದ್ದೇಶಕ್ಕಾಗಿ ಕರಾವಳಿಯ ಹಿಂದುಳಿದ ವರ್ಗಗಳ ಮಕ್ಕಳನ್ನು ಬಲಿಕೊಟ್ಟು ಇದೀಗ ತಲೆಮರೆಸಿ ಕೂತು, ಯಡಿಯೂರಪ್ಪರಂತಹ ನಾಯಕರ ಬಾಯಿಯಿಂದ ‘ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ’ ಎಂಬ ಬೆದರಿಕೆಯನ್ನು ಕಾನೂನು ವ್ಯವಸ್ಥೆಗೆ ಒಡ್ಡುತ್ತಿದ್ದಾರೆ.

 ಶಾಂತಿ ಕಾಪಾಡುವುದೆಂದರೆ, ಯಡಿಯೂರಪ್ಪ ಮತ್ತು ಅವರ ಪರಿವಾರ ಹೇಳಿದವರನ್ನು ಬಂಧಿಸುವುದು ಮತ್ತು ಅವರು ಹೇಳಿದವರನ್ನು ಬಂಧಿಸದೇ ಇರುವುದು ಅಲ್ಲ. ಯಾರು ಕಾನೂನು ಮುರಿದಿದ್ದಾರೆಯೋ, ಯಾರು ಜಿಲ್ಲೆಯ ಶಾಂತಿಯನ್ನು ಕೆಡಿಸುವಲ್ಲಿ ಭಾಗಿಯಾಗಿದ್ದಾರೆಯೋ ಅವರನ್ನು ನಿಷ್ಪಕ್ಷಪಾತವಾಗಿ ಬಂಧಿಸುವುದರಿಂದಷ್ಟೇ ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡಬಹುದು. ಅಶಾಂತಿ ಮಾಡಿದವರು ಹಿಂದೂಗಳಿರಲಿ, ಮುಸ್ಲಿಮರಿರಲಿ ಅವರನ್ನು ಬಂಧಿಸಿ ಜೈಲಿಗೆ ತಳ್ಳಿ ಎಂದು ಸೂಚನೆ ನೀಡುವ ನಾಯಕ ಮಾತ್ರ ಈ ಸಂದರ್ಭದಲ್ಲಿ ರಾಜ್ಯಕ್ಕೆ ಬೇಕಾಗಿದ್ದಾನೆಯೇ ಹೊರತು, ತಮ್ಮ ತಮ್ಮ ಧರ್ಮದ ನಾಯಕರು ಅಧರ್ಮವನ್ನು ಎಸಗಿದರೆ ಅವರನ್ನು ರಕ್ಷಿಸುವ ನಾಯಕನಲ್ಲ. ಪ್ರಭಾಕರ ಭಟ್ಟರನ್ನು ಬಂಧಿಸಿದರೆ ರಾಜ್ಯಕ್ಕೆ ಬೆಂಕಿ ಬೀಳುತ್ತದೆ ಎಂದಿರುವ ಯಡಿಯೂರಪ್ಪ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇನ್ನೊಬ್ಬರ ಮನೆಗೆ ಬಿದ್ದ ಬೆಂಕಿ ತನ್ನ ಮನೆಯನ್ನು ಸುಡದೇ ಇರುವುದಿಲ್ಲ. ಯಡಿಯೂರಪ್ಪ , ಪ್ರಭಾಕರ ಭಟ್ಟ ಮೊದಲಾದವರೂ ಇದೇ ರಾಜ್ಯಕ್ಕೆ ಸೇರಿದವರು ಎನ್ನುವುದನ್ನು ಮರೆಯಬಾರದು. ರಾಜ್ಯವೆನ್ನುವುದು ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ ಅವರ ಪಿತ್ರಾರ್ಜಿತ ಆಸ್ತಿಯಲ್ಲ. ರಾಜಕಾರಣಿಗಳು ನೀಡುವ ಬೆಂಕಿಗೆ ಬಲಿಯಾಗುವುದು ಈ ನಾಡಿನ ಶ್ರೀಸಾಮಾನ್ಯರ ಮನೆಗಳು. ಅದರಲ್ಲಿ ಸುಟ್ಟುಹೋಗುವವರು ಅಮಾಯಕ ಮಕ್ಕಳು, ಮಹಿಳೆಯರು. ನಾಶವಾಗುವುದು ಬಡವರ ಬದುಕು. ಇಂದು ರಾಜ್ಯಕ್ಕೆ ಬೆಂಕಿ ಹಚ್ಚುತ್ತೇನೆ ಎನ್ನುವ ಮೂಲಕ ಯಡಿಯೂರಪ್ಪ ಬೆದರಿಕೆ ಹಾಕಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗಲ್ಲ. ಕರಾವಳಿಯೂ ಸೇರಿದಂತೆ ರಾಜ್ಯದ ಅಮಾಯಕ ಜನಸಾಮಾನ್ಯರಿಗೆ. ಶ್ರೀಸಾಮಾನ್ಯನ ಬದುಕನ್ನು ಒತ್ತೆಯಾಳಾಗಿಟ್ಟುಕೊಂಡು ಪ್ರಭಾಕರ ಭಟ್ಟರೆಂಬ ಕ್ರಿಮಿನಲ್ ನಾಯಕನನ್ನು ರಕ್ಷಿಸಲು ಹೊರಟಿರುವ ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಶ್ರೀಸಾಮಾನ್ಯರ ಮುಂದೆ ಯಾವ ಮುಖವಿಟ್ಟು ಮತ ಯಾಚಿಸುತ್ತಾರೆ? ಒಂದು ಕಾಲದಲ್ಲಿ ಬಿಜೆಪಿಗೆ ಮತಕೊಟ್ಟು ಅವರನ್ನು ನಾಡಿನ ಮುಖ್ಯಮಂತ್ರಿಯಾಗಿ ಮಾಡಿದ್ದ ಜನರಿಗೆ ಯಡಿಯೂರಪ್ಪರ ಋಣ ಸಂದಾಯವೇ ಇದು? ಈ ಹಿಂದೆ ಹಲವು ಭ್ರಷ್ಟಾಚಾರಗಳಲ್ಲಿ ಸಿಲುಕಿಕೊಂಡು ಜೈಲಿಗೆ ಹೋಗಿರುವ ದಿನಗಳನ್ನು ಯಡಿಯೂರಪ್ಪ ನೆನೆದುಕೊಳ್ಳಬೇಕು. ಒಂದು ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪರನ್ನೇ ಜೈಲಿಗೆ ತಳ್ಳಲು ನಮ್ಮ ಕಾನೂನು ವ್ಯವಸ್ಥೆ, ನ್ಯಾಯ ವ್ಯವಸ್ಥೆ ಹಿಂದೆ ಸರಿಯಲಿಲ್ಲ. ಹೀಗಿರುವಾಗ ಕಲ್ಲಡ್ಕ ಪ್ರಭಾಕರ ಭಟ್ಟರೆಂಬ ಕ್ರಿಮಿನಲ್ ನಾಯಕರನ್ನು ಬಂಧಿಸಲು ನ್ಯಾಯವ್ಯವಸ್ಥೆ ಯಾಕೆ ಅಂಜಬೇಕು? ಕಾನೂನು ಮತ್ತು ನ್ಯಾಯವ್ಯವಸ್ಥೆಗೆ ಸವಾಲೊಡ್ಡಿರುವ ಯಡಿಯೂರಪ್ಪ ಆ ಮೂಲಕ ಕರಾವಳಿಯಲ್ಲೂ, ರಾಜ್ಯದಲ್ಲ್ಲೂ ಶಾಂತಿ ಕೆಡಿಸುತ್ತಿರುವವರು ಯಾರು ಎನ್ನುವುದನ್ನು ಸ್ವಯಂ ಒಪ್ಪಿಕೊಂಡಿದ್ದಾರೆ. ರಾಜ್ಯಕ್ಕೆ ಬೆಂಕಿ ಹಚ್ಚುವ ಬೆದರಿಕೆ ಒಡ್ಡಿದ್ದಕ್ಕೆ ಸ್ವತಃ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆಯ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಬೇಕಾಗಿದೆ. ಆ ಮೂಲಕ ತಮ್ಮ ಪ್ರೀತಿ ಪಾತ್ರರಾದ ಪ್ರಭಾಕರ ಭಟ್ಟರ ಜೊತೆಗೆ ಜೈಲಿನಲ್ಲಿ ಒಂದೇ ತಟ್ಟೆಯಲ್ಲಿ ಉಣ್ಣಲು ಅವರಿಗೆ ಅವಕಾಶ ನೀಡಿದಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News