ಮೋದಿಯನ್ನು ಹೋಲುವ ವ್ಯಕ್ತಿಯ ಫೋಟೊ ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದ “ಎಐಬಿ”
Update: 2017-07-14 17:27 IST
ಹೊಸದಿಲ್ಲಿ, ಜು.14: ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಹೀಯಾಳಿಸಿದ ಆರೋಪದಲ್ಲಿ ಆಲ್ ಇಂಡಿಯಾ ಬಕ್ ಚೋದ್ ಸಹ ಸಂಸ್ಥಾಪಕ ತನ್ಮಯ್ ಭಟ್ ವಿರುದ್ಧ ಮುಂಬೈ ಸೈಬರ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಸಕ್ಸೇನಾ ದೃಢಪಡಿಸಿದ್ದಾರೆ.
ರೈಲ್ವೆ ನಿಲ್ದಾಣವೊಂದರಲ್ಲಿ ಪ್ರಧಾನಿ ಮೋದಿಯವರನ್ನು ಹೋಲುವ ವ್ಯಕ್ತಿಯೊಬ್ಬರ ಚಿತ್ರವನ್ನು ಅಲ್ ಇಂಡಿಯಾ ಬಕ್ ಚೋದ್ ಟ್ವೀಟ್ ಮಾಡಿತ್ತು. ಇಷ್ಟೇ ಅಲ್ಲದೆ ಇದರ ಜೊತೆಯಿದ್ದ ಇನ್ನೊಂದು ಫೋಟೊದಲ್ಲಿ ಸ್ನ್ಯಾಪ್ ಚಾಟ್ ನ “ಡಾಗ್ ಫಿಲ್ಟರ್” ಉಪಯೋಗಿಸಿ ಮೋದಿಯವರ ಚಿತ್ರವನ್ನೂ ಪೋಸ್ಟ್ ಮಾಡಿತ್ತು. ಇದರಿಂದಾಗಿ ಆಲ್ ಇಂಡಿಯಾ ಬಕ್ ಚೋದ್ ನ ಈ ಟ್ವೀಟ್ ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬಕ್ ಚೋದ್ ಈ ಟ್ವೀಟನ್ನು ಅಳಿಸಿಹಾಕಿತ್ತು.