ಇರೋಮ್ ಶರ್ಮಿಳಾ ಮದುವೆಗೆ ಆಕ್ಷೇಪ
ಡಿಂಡಿಗಲ್, ಜು.14: ಮಾನವ ಹಕ್ಕುಗಳ ಕಾರ್ಯಕರ್ತೆ ಇರೋಮ್ ಶರ್ಮಿಳಾ ಅವರು ತಮ್ಮ ದೀರ್ಘಕಾಲದ ಸ್ನೇಹಿತನೊಂದಿಗೆ ವಿವಾಹಕ್ಕಾಗಿ ಕೊಡೈಕನಾಲ್‌ನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಿರುವುದರ ಬಗ್ಗೆ ಸಾಮಾಜಿಕ ಕಾರ್ಯಕರ್ತರೋರ್ವರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಶರ್ಮಿಳಾ ತಮ್ಮ ಸ್ನೇಹಿತ ಬ್ರಿಟಿಷ್ ಪ್ರಜೆ ಡೆಸ್ಮಂಡ್ ಕುಟಿನ್ಹೊ ಜೊತೆ ವಿವಾಹವಾದರೆ ಬಳಿಕ ಅವರು ಶಾಶ್ವತವಾಗಿ ಕೊಡೈಕನಾಲ್‌ನಲ್ಲೇ ನೆಲೆಸುತ್ತಾರೆ. ಇದು ಸ್ಥಳೀಯರ ಹಿತಾಸಕ್ತಿ ಮತ್ತು ಸ್ಥಳೀಯ ಸುರಕ್ಷತೆಯ ದೃಷ್ಟಿಯಿಂದ ಅಹಿತಕರ ವಿಷಯವಾಗಿದೆ ಎಂದು ಕೊಡೈಕನಾಲ್ ಸಮೀಪದ ಪೆಥುಪರಾಯ್ ಎಂಬಲ್ಲಿನ ನಿವಾಸಿ , ಸಾಮಾಜಿಕ ಕಾರ್ಯಕರ್ತರಾಗಿರುವ ವಿ.ಮಹೇಂದ್ರನ್ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.
ಕುಟಿನ್ಹೊ ವಿಶ್ವದಾದ್ಯಂತ ಸಾಮಾಜಿಕ ಕಾರ್ಯಕರ್ತರು ಒಳಗೊಂಡಿರುವ ವೆಬ್‌ಸೈಟ್ ಒಂದರ ಉಸ್ತುವಾರಿ ಹೊಂದಿದ್ದು , ಇವರು ಇಲ್ಲಿ ನೆಲೆಸುವುದರಿಂದ ಈ ಗಿರಿಧಾಮದ ಶಾಂತಿಗೆ ಭಂಗ ಬರುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಶರ್ಮಿಳಾ ಮತ್ತು ಕುಟಿನ್ಹೊ ವಿಭಿನ್ನ ರಾಷ್ಟ್ರಕ್ಕೆ ಸೇರಿದ ಮತ್ತು ವಿಭಿನ್ನ ಧರ್ಮೀಯರು ಆಗಿರುವ ಹಿನ್ನೆಲೆಯಲ್ಲಿ, ವಿಶೇಷ ವಿವಾಹ ಕಾಯ್ದೆಯಡಿ ಇವರಿಬ್ಬರ ವಿವಾಹಕ್ಕೆ ಆಕ್ಷೇಪ ಇದ್ದರೆ ಸಲ್ಲಿಸಬಹುದು ಎಂದು ಉಪನೋಂದಣಾಧಿಕಾರಿ ತಿಳಿಸಿದ್ದರು.
ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ವಿರುದ್ಧ 16 ವರ್ಷಗಳ ಸುದೀರ್ಘ ಉಪವಾಸ ಮುಷ್ಕರ ನಡೆಸಿದ್ದ ‘ಉಕ್ಕಿನ ಮಹಿಳೆ’ ಇರೋಮ್ ಶರ್ಮಿಳಾ ತನ್ನ ದೀರ್ಘ ಕಾಲದ ಸ್ನೇಹಿತ ಡೆಸ್ಮಂಡ್ ಕುಟಿನ್ಹೊ ಜೊತೆ ವಿವಾಹವಾಗಲು ನಿರ್ಧರಿಸಿದ್ದಾರೆ.