×
Ad

ಭಾರತೀಯ ಮಾಧ್ಯಮಗಳ ಪ್ರಕಾರ ಮೋದಿ ಸರಕಾರ ವಿಶ್ವದಲ್ಲೇ ಅತಿ ಹೆಚ್ಚು ಜನಬೆಂಬಲ ಪಡೆದ ಸರಕಾರ

Update: 2017-07-14 21:58 IST

ಹೊಸದಿಲ್ಲಿ, ಜು.14: ಪ್ರಜೆಗಳು ತಮ್ಮ ಸರಕಾರದ ಮೇಲೆ ಅತ್ಯಧಿಕ ವಿಶ್ವಾಸವಿರಿಸಿದ ರಾಷ್ಟ್ರಗಳ ಜಾಗತಿಕ ಸೂಚ್ಯಂಕದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಭಾರತದ ಹಲವಾರು ಪ್ರಮುಖ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇತ್ತೀಚೆಗೆ ಪ್ರಕಟವಾದ ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಸ್ಥೆ (ಒಇಸಿಡಿ) ವರದಿಯೊಂದು ಅದನ್ನು ಅಲ್ಲಗಳೆದಿದೆ.

ಸರಕಾರದ ಮೇಲೆ ಗರಿಷ್ಠ ನಂಬಿಕೆಯಿಟ್ಟ ದೇಶಗಳ ಸಾಲಿನಲ್ಲಿ ಭಾರತ ಮೂರನೆ ಸ್ಥಾನದಲ್ಲಿರುವುದಾಗಿ ಒಇಸಿಡಿ ವರದಿ ಬಹಿರಂಗಪಡಿಸಿದೆ. ಜನತೆ ಅತ್ಯಧಿಕ ವಿಶ್ವಾಸವಿರಿಸಿದ ಸರಕಾರಗಳ ಪೈಕಿ ಇಂಡೊನೇಶ್ಯ ಹಾಗೂ ಸ್ವಿಟ್ಜರ್‌ಲ್ಯಾಂಡ್ ದೇಶಗಳು ತಲಾ ಶೇ.80ರಷ್ಟು ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಹಂಚಿಕೊಂಡಿವೆ. ಶೇ.73 ಅಂಕವನ್ನು ಪಡೆದಿರುವ ಭಾರತ ಮೂರನೆ ಸ್ಥಾನದಲ್ಲಿದೆ. ಶೇ.73ರಷ್ಟು ಭಾರತೀಯರು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಬಗ್ಗೆ ಭರವಸೆ ಹೊಂದಿದ್ದಾರೆಂದು ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಪ್ರಕಟಿಸಿದ ‘ಗವರ್ನ್‌ಮೆಂಟ್ ಎಟ್ ಎ ಗ್ಲೇನ್ಸ್ ’ ವರದಿಯು ಹೇಳಿದೆ.

ಸರಕಾರದ ಮೇಲಿನ ನಂಬಿಕೆಯಲ್ಲಿ ಬದಲಾವಣೆಯಾಗಲು ಹಲವಾರು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಂಶಗಳು ಕಾರಣವಾಗಿರುತ್ತವೆ ಎಂದು ವರದಿ ಹೇಳಿದೆ. ಈ ವರದಿಯ ದತ್ತಾಂಶಗಳ ಪ್ರಕಾರ 2007ರಲ್ಲಿ ಭಾರತೀಯರಿಗೆ ತಮ್ಮ ಸರಕಾರದ ಮೇಲಿನ ವಿಶ್ವಾಸವು ಈಗ ಇರುವುದಕ್ಕಿಂತ ಶೇ.9ರಷ್ಟು ಅಧಿಕವಾಗಿತ್ತು. ಆ ವರ್ಷ ಭಾರತವು ಶೇ.82 ಅಂಕಗಳೊಂದಿಗೆ ಯುರೋಪ್ ರಾಷ್ಟ್ರವಾದ ಲಕ್ಸೆಂಬರ್ಗ್ ಜೊತೆ ನಂ.1 ಸ್ಥಾನವನ್ನು ಹಂಚಿಕೊಂಡಿತ್ತು. ಆದರೆ ಕಳೆದ 9 ವರ್ಷಗಳಲ್ಲಿ ಅಂದರೆ 2016ರ ವೇಳೆಗೆ ಅದು ಮೂರನೇ ಸ್ಥಾನಕ್ಕೆ ಜಾರಿದೆ.

ಸರಕಾರದ ಮೇಲೆ ಭಾರತೀಯರಿಗಿರುವ ವಿಶ್ವಸನೀಯತೆಯ ದರವು 2012ರಲ್ಲಿ ಶೇ.55ಕ್ಕೆ ಇಳಿದಿತ್ತಾದರೂ, 2014ರ ವೇಳೆಗೆ ಮೋದಿ ಸರಕಾರ ಅಧಿಕಾರಕ್ಕೇರಿದಾಗ ಅದು ಶೇ.73ಕ್ಕೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News