50 ವರ್ಷಗಳಲ್ಲಿ 300 ಚಿತ್ರಗಳು

Update: 2017-07-15 12:47 GMT

ಭಾರತೀಯ ಚಿತ್ರರಂಗದಲ್ಲಿ ಬಾಕ್ಸ್‌ಆಫೀಸ್ ಗೆಲ್ಲುವ ಕುದುರೆಗಳೆಂದೇ ಖ್ಯಾತಿಪಡೆದ ಖಾನ್‌ತ್ರಯರಾದ ಸಲ್ಮಾನ್‌ಖಾನ್, ಆಮಿರ್‌ಖಾನ್ ಹಾಗೂ ಶಾರುಖ್ ಖಾನ್ ಈ ಮೂವರು ನಟಿಸಿದ ಚಿತ್ರಗಳನ್ನು ಒಟ್ಟು ಸೇರಿಸಿದರೂ ಅವು 250ರ ಗಡಿಯನ್ನು ದಾಟದು. ಆದರೆ ಎವರ್‌ಗ್ರೀನ್ ಹೀರೋಯಿನ್ ಎಂದೇ ಖ್ಯಾತಿಪಡೆದ ಶ್ರೀದೇವಿ ಈತನಕ 300 ಚಿತ್ರಗಳಲ್ಲಿ ನಟಿಸಿ ಹೊಸ ಸಾಧನೆ ಮಾಡಿದ್ದಾರೆ. ಶ್ರೀದೇವಿಯ ಚಿತ್ರ ಬದುಕಿಗೆ ಈಗ 50 ವರ್ಷ ತುಂಬಿದ್ದು, ಇತ್ತೀಚೆಗೆ ತೆರೆಕಂಡ ಅವರ ಅಭಿನಯದ ಮಾಮ್ ಕೂಡಾ ಯಶಸ್ಸು ಕಂಡಿದೆ. ಯಾವುದೇ ಪಾತ್ರ ದೊರೆಯಲಿ ಸಮರ್ಪಣಾ ಮನೋಭಾವದೊಂದಿಗೆ ಆ ಪಾತ್ರ ದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು ಶ್ರೀದೇವಿಯ ಗೆಲುವಿಗೆ ಒಂದು ಮುಖ್ಯ ಕಾರಣವಾಗಿದೆ. ತಮಿಳು, ಮಲಯಾಳಂ, ತೆಲುಗು, ಕನ್ನಡ, ಹಿಂದಿ ಭಾಷೆಗಳಲ್ಲಿ ನಟಿಸಿರುವ ಶ್ರೀದೇವಿಯ ಚಿತ್ರ ಬದುಕಿಗೆ ಈ ವರ್ಷ 50 ವಸಂತಗಳು ತುಂಬಿವೆ.

1963ರ ಆಗಸ್ಟ್ 13ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ ಶ್ರೀದೇವಿಯ ತಂದೆ ಅಯ್ಯಪ್ಪನ್ ಹಾಗೂ ತಾಯಿ ರಾಜೇಶ್ವರಿ. ಓರ್ವ ಸಹೋದರ ಹಾಗೂ ಇನ್ನಿಬ್ಬರು ಮಲಸಹೋದರರ ಜೊತೆ ಬೆಳೆದ ಶ್ರೀದೇವಿ, ತನ್ನ ಮೂರನೆ ವಯಸ್ಸಿನಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. 1967ರಲ್ಲಿ ಕಂದನ್‌ಕರುಣೈ ಎಂಬ ಚಿತ್ರದಲ್ಲಿ ಆಕೆ ನಟಿಸಿದ್ದರು. 1969ರಲ್ಲಿ ಕುಮಾರಸಂಭವ ಎಂಬ ಮಲಯಾಳಂ ಚಿತ್ರದಲ್ಲೂ ಆಕೆ ಬಾಲನಟಿಯಾಗಿ ಅಭಿನಯಿಸಿದ್ದರು.

 1974ರಲ್ಲಿ ತೆರೆಕಂಡ ಭಕ್ತ ಕುಂಬಾರ ಕನ್ನಡ ಚಿತ್ರದಲ್ಲೂ ಶ್ರೀದೇವಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದರು. 1975ರಲ್ಲಿ ಬಿಡುಗಡೆ ಯಾದ ‘ಜೂಲಿ’, ಆಕೆ ಅಭಿನಯಿಸಿದ ಮೊದಲ ಹಿಂದಿ ಚಿತ್ರ. 1976ರಲ್ಲಿ ಬಾಲಚಂದರ್ ನಿರ್ದೇಶನದ ‘ಮೂನ್ರು ಮುಡಿಚ್ಚು’ ಚಿತ್ರದ ಮೂಲಕ ಶ್ರೀದೇವಿ ಮೊದಲ ಬಾರಿಗೆ ನಾಯಕಿಯ ಪಟ್ಟವನ್ನಲಂಕರಿಸಿದರು. ಕಮಲಹಾಸನ್ ಹಾಗೂ ರಜನಿಕಾಂತ್ ಈ ಚಿತ್ರದ ನಾಯಕರು. ಆನಂತರ ತೆರೆಕಂಡ ‘ಪದಿನಾರು ವಯದಿನಿಲೆ’ ಶ್ರೀದೇವಿಯನ್ನು ತಮಿಳಿನ ನಂ.1 ನಾಯಕಿಯ ಸ್ಥಾನಕ್ಕೇರಿಸಿತು. ಹೀಗೆ ಕಮಲ್-ಶ್ರೀದೇವಿ ಜೋಡಿ ಹಲವಾರು ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿತು.

‘ಕ್ಷಣಂಕ್ಷಣಂ’, ‘ಅಖಿರಿ ಪೋರಾಟಂ’, ‘ಬೊಬ್ಬಿಲಿಪುಲಿ’, ‘ಜಗದೇಕ ವೀರುಡು ಅತಿಲೋಕ ಸುಂದರಿ’ ಶ್ರೀದೇವಿ ನಟಿಸಿದ ಕೆಲವು ಸೂಪರ್‌ಹಿಟ್ ತೆಲುಗು ಚಿತ್ರಗಳಾಗಿವೆ. ಈ ನಡುವೆ ಶ್ರೀದೇವಿ ಮಲಯಾಳಂನಲ್ಲಿ ‘ದೇವರಾಗಂ’, ‘ಅಂಗೀಕಾರಂ’ ಸೇರಿದಂತೆ 12ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

ಹೀಗೆ ತಮಿಳು, ತೆಲುಗಿನಲ್ಲಿ ಅಸಂಖ್ಯ ಹಿಟ್ ಚಿತ್ರಗಳನ್ನು ನೀಡಿದ ಶ್ರೀದೇವಿ 1979ರಲ್ಲಿ ‘ಸೊಲ್ವಾ ಸಾವನ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಮಾರನೆ ವರ್ಷ ಆಕೆ ಜಿತೇಂದ್ರ ಜೊತೆ ಅಭಿನಯಿಸಿದ ‘ಹಿಮ್ಮತ್‌ವಾಲ್’ ಸೂಪರ್‌ಹಿಟ್ ಎನಿಸಿತು. ಆನಂತರ ಬಿಡುಗಡೆಯಾದ ‘ಮಿ. ಇಂಡಿಯಾ’, ‘ಚಾಂದಿನಿ’ ಮತ್ತಿತರ ಚಿತ್ರಗಳು ಶ್ರೀದೇವಿಯನ್ನು ಬಾಲಿವುಡ್‌ನಲ್ಲಿಯೂ ನಂ.1 ಸ್ಥಾನಕ್ಕೇರಿಸಿತು. 1996ರಲ್ಲಿ ಅನಿಲ್ ಕಪೂರ್ ಸಹೋದರ ಬೋನಿಕಪೂರ್‌ರನ್ನು ವಿವಾಹದ ಬಳಿಕ ಶ್ರೀದೇವಿ ಸ್ವಲ್ಪ ವರ್ಷ ತೆರೆಯ ಮರೆಗೆ ಸರಿದರು. ವಿವಾಹವಾದ ಆನಂತರದ ಏಳು ವರ್ಷಗಳ ಬಿಡುವಿನ ಬಳಿಕ ಶ್ರೀದೇವಿ 2012ರಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದಲ್ಲಿ ಅಭಿನಯಿಸಿ ಮತ್ತೆ ಪ್ರೇಕ್ಷಕರ ಮನಗೆದ್ದರು. ಇದೀಗ ರವಿ ಉದ್ಯಾವರ್ ನಿರ್ದೇಶನದ ‘ಮಾಮ್’ ಕೂಡಾ ಬಾಕ್ಸ್ ಆಫೀಸಿನಲ್ಲಿ ಗೆಲ್ಲುವ ಭರವಸೆ ಮೂಡಿಸಿದೆ. ತಾಯಿ, ಮಗಳ ಬಾಂಧವ್ಯದ ಕತೆ ಹೇಳುವ ‘ಮಾಮ್’ ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ಎರಡು ಹೆಣ್ಣು ಮಕ್ಕಳ ತಾಯಿಯಾದ ತನಗೆ ಈ ಚಿತ್ರದ ಪಾತ್ರವು ತನ್ನ ಮೇಲೆ ಗಾಢವಾದ ಪರಿಣಾಮ ಬೀರಿದೆಯೆಂದು ಶ್ರೀದೇವಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News