ಸೆನ್ಸಾರ್ ಅಡಕತ್ತರಿಯಲ್ಲಿ "ಇಂದು ಸರ್ಕಾರ್"

Update: 2017-07-15 13:02 GMT

ನಿರ್ಮಾಪಕ-ನಿರ್ದೇಶಕ ಮಧುಭಂಡಾರ್ಕರ್ ಚಿತ್ರಗಳು ವಿವಾದಗಳಿಗೆ ತುತ್ತಾಗುವುದು ಹೊಸದೇನಲ್ಲ. ಆದರೆ ಅವರ ನೂತನ ಚಿತ್ರ ‘ಇಂದು ಸರ್ಕಾರ್’ ಬಿಡುಗಡೆಗೆ ಮೊದಲೇ ವಿವಾದದ ಬಿರುಗಾಳಿಗೆ ಸಿಲುಕಿದೆ. ತುರ್ತು ಪರಿಸ್ಥಿತಿ (1975-77) ಹಿನ್ನೆಲೆಯ ಕಥಾವಸ್ತುವನ್ನು ಒಳಗೊಂಡಿರುವ ಇಂದು ಸರ್ಕಾರ್‌ನ ಬರೋಬ್ಬರಿ 14 ದೃಶ್ಯಗಳಿಗೆ ಕತ್ತರಿಪ್ರಯೋಗ ಮಾಡು ವಂತೆ ಕೇಂದ್ರೀಯ ಸೆನ್ಸಾರ್ ಮಂಡಳಿ, ಭಂಡಾರ್ಕರ್‌ಗೆ ಸೂಚನೆ ನೀಡಿದೆ ಯಂತೆ. ಚಿತ್ರದಲ್ಲಿನ ದೃಶ್ಯಗಳನ್ನು ಕತ್ತರಿಸಬೇಕೆನ್ನುವ ಮಂಡಳಿಯ ಬೇಡಿಕೆಯಲ್ಲಿ ಯಾವುದೇ ಹುರುಳಿಲ್ಲ ವೆಂದು ಭಂಡಾರ್ಕರ್ ಅವರ ವಾದ ವಾಗಿದೆ. ಚಿತ್ರದ ಕಥೆಗೆ ಈ ಸನ್ನಿವೇಶಗಳು ಅತ್ಯಗತ್ಯ ವಾಗಿದ್ದು, ಅವುಗಳಿಗೆ ಕತ್ತರಿ ಪ್ರಯೋಗ ಮಾಡೆನೆಂದು ಅವರು ಪಟ್ಟುಹಿಡಿದಿದ್ದಾರೆ. ಸೆನ್ಸಾರ್ ಮಂಡಳಿಯ ಆದೇಶವನ್ನು ಪ್ರಶ್ನಿಸಿ ರಿವೈಸಿಂಗ್ ಕಮಿಟಿಯ ಮೊರೆ ಹೋಗುವುದಾಗಿಯೂ ಅವರು ಹೇಳಿದ್ದಾರೆ.

ಫ್ಯಾಶನ್, ಕಾರ್ಪೊರೇಟ್‌ನಂತಹ ಜನಪ್ರಿಯ ಚಿತ್ರ ಗಳನ್ನು ನಿರ್ಮಿಸಿರುವ ಮಧುಭಂಡಾರ್ಕರ್, ಅವರ ನೂತನ ಚಿತ್ರ ‘ಇಂದು ಸರ್ಕಾರ್’ನಲ್ಲಿ ದಿ.ಪ್ರಧಾನಿ ಇಂದಿರಾಗಾಂಧಿ ಹಾಗೂ ಅವರ ಪುತ್ರ ಸಂಜಯ್‌ಗಾಂಧಿಯನ್ನು ಹೋಲುವ ಪಾತ್ರಗಳಿರುವುದು ಸೆನ್ಸಾರ್ ಮಂಡಳಿಯ ಆಕ್ಷೇಪಕ್ಕೆ ಕಾರಣವಾಗಿದೆ. ನೀಲ್ ನಿತಿನ್ ಮುಖೇಶ್, ಕೀರ್ತಿ ಕುಲ್ಹಾರಿ,ಸುಪ್ರಿಯಾ ವಿನೋದಾ, ಅನುಪಮ್ ಖೇರ್ ಮತ್ತಿತರರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಮಧ್ಯೆ ‘ಇಂದು ಸರ್ಕಾರ್’ ಕಾಂಗ್ರೆಸ್‌ನ ಕೆಂಗಣ್ಣಿಗೂ ಗುರಿಯಾಗಿದೆ. ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಕಳೆದ ವಾರ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹಲಾಜ್ ನಿಹಲಾನಿ ಅವರಿಗೆ ಪತ್ರ ಬರೆದು, ಚಿತ್ರವು ಸೆನ್ಸಾರ್‌ಗೊಳ್ಳುವ ಮುನ್ನ ಅದನ್ನು ವೀಕ್ಷಿಸಲು ಪಕ್ಷದ ಮುಖಂಡ ರಿಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದರು. ಕಳೆದ ವಾರ ಇಂದೋರ್‌ನ ಕಾಂಗ್ರೆಸ್ ಕೂಡಾ ಚಿತ್ರ ವಿತರಕರ ಸಂಘಕ್ಕೆ ಪತ್ರ ಬರೆದು ಸಿನೆಮಾವನ್ನು ಪ್ರದರ್ಶಿಸದಂತೆ ಎಚ್ಚರಿಕೆ ನೀಡಿದೆ. ಒಟ್ಟಿನಲ್ಲಿ ‘ಇಂದು ಸರ್ಕಾರ್’ನ ಬಿಡುಗಡೆಗೆ ವಿಘ್ನಗಳ ಸರಮಾಲೆ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News