ಶಿಲುಬೆ ಧ್ವಂಸಗೊಳಿಸಿದ ಪ್ರಕರಣ: ವ್ಯಕ್ತಿಯ ಬಂಧನ

Update: 2017-07-15 15:22 GMT

ಪಣಜಿ, ಜು.15: ದಕ್ಷಿಣ ಗೋವಾ ಜಿಲ್ಲೆಯಲ್ಲಿ 12 ಶಿಲುಬೆ(ಕ್ರೈಸ್ತ ಧರ್ಮೀಯರ ಧಾರ್ಮಿಕ ಚಿಹ್ನೆ) ಗಳನ್ನು ಧ್ವಂಸಗೊಳಿಸಿದ ಆರೋಪದಲ್ಲಿ 50ರ ಹರೆಯದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಕಸ್ಮಾತ್ ಆಗಿ ತನ್ನಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

 ದಕ್ಷಿಣ ಗೋವಾ ಜಿಲ್ಲೆಯಲ್ಲಿ ಜುಲೈ 1ರಿಂದ ಕನಿಷ್ಟ 12 ಶಿಲುಬೆಗಳಿಗೆ ಮತ್ತು ಒಂದು ದೇವಸ್ಥಾನಕ್ಕೆ ಹಾನಿ ಎಸಗಲಾಗಿತ್ತು. ಶುಕ್ರವಾರ ರಾತ್ರಿ ಕರ್ಟೊರಿಮ್ ಎಂಬ ಗ್ರಾಮದಲ್ಲಿ ಶಿಲಬೆಯೊಂದನ್ನು ಧ್ವಂಸಗೊಳಿಸಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಗೋವಾ ಪೊಲೀಸ್ ಪಡೆಯ ವಿಶೇಷ ತನಿಖಾ ತಂಡ ಪತ್ತೆಹಚ್ಚಿ ಬಂಧಿಸಿತ್ತು. ಈತನನ್ನು ಫ್ರಾನ್ಸಿಸ್ ಪೆರೇರ ಎಂದು ಗುರುತಿಸಲಾಗಿದೆ.

      ಕಳೆದ 15 ದಿನದಿಂದ ಇಂತಹ ಕೃತ್ಯ ನಡೆಸಿದ್ದು ಅಕಸ್ಮಾತ್ ಆಗಿ ಈರೀತಿಯ ಕೃತ್ಯ ತನ್ನಿಂದ ನಡೆದುಹೋಗುತ್ತದೆ. ವೈರತ್ವ ಹುಟ್ಟಿಸುವ ಯಾವುದೇ ಇರಾದೆ ಈ ಕೃತ್ಯದ ಹಿಂದೆ ಇಲ್ಲ ಎಂದು ಆರೋಪಿ ತನಿಖೆಯ ವೇಳೆ ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈತನ ಬಂಧನದಿಂದ ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದ 150ಕ್ಕೂ ಹೆಚ್ಚು ಪ್ರಕರಣಗಳ ನಿಗೂಢತೆ ಬೇಧಿಸಲು ಸಾಧ್ಯವಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಫ್ರಾನ್ಸಿಸ್ ಪಿರೇರ ಈ ಹಿಂದೆ ಕೊಲೆಯತ್ನ ಪ್ರಕರಣವೊಂದರಲ್ಲಿ ಜೈಲುಶಿಕ್ಷೆ ಅನುಭವಿಸಿದ್ದ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News