×
Ad

ಕಾಶ್ಮೀರದಲ್ಲಿ ಕೆಲವು ಯೋಧರ ವರ್ತನೆ ವೃತ್ತಿಪರವಾಗಿಲ್ಲ: ಲೆ.ಜ. ಸಂಧು

Update: 2017-07-15 20:57 IST

ಶ್ರೀನಗರ, ಜು.15: ಕಾಶ್ಮೀರದ ಯುವಜನತೆಯ ವಿರುದ್ಧ ಯೋಧರು ನಡೆಸಿದ್ದಾರೆ ಎನ್ನಲಾದ ‘ಅತಿರೇಕದ ವರ್ತನೆ’ಯ ವೀಡಿಯೊ ದೃಶ್ಯಾವಳಿಯ ಕುರಿತು ತನಿಖೆ ನಡೆಸಿದ್ದು ಕೆಲವು ಯೋಧರು ‘ವೃತ್ತಿಪರ ರೀತಿ’ಯಲ್ಲಿ ವರ್ತಿಸದಿರುವುದು ತಿಳಿದು ಬಂದಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಲೆಜ ಜೆ.ಎಸ್.ಸಂಧು ತಿಳಿಸಿದ್ದಾರೆ.

ಅದಾಗ್ಯೂ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕೆಲವು ವೀಡಿಯೊ ದೃಶ್ಯಾವಳಿಗಳನ್ನು ತಿರುಚಲಾಗಿರುವ ಕಾರಣ ಪ್ರಕರಣದ ಸಂಪೂರ್ಣ ವಿವರಗಳನ್ನು ಈ ವೀಡಿಯೋ ದೃಶ್ಯಗಳಿಂದ ಪಡೆಯಲಾಗುತ್ತಿಲ್ಲ ಎಂದವರು ಹೇಳಿದರು. ಲೆಜ ಸಂಧು ಶ್ರೀನಗರದಲ್ಲಿರುವ ‘15 ಕಾರ್ಪ್ಸ್’ನ ಪ್ರಧಾನ ಸಮಾದೇಶಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಸೇನಾಪಡೆಯ ಯೋಧರು ಯುವಜನರನ್ನು ಥಳಿಸುತ್ತಿರುವ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವೀಡಿಯೊ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು. ಕೆಲವು ವೀಡಿಯೊಗಳನ್ನು ತಿರುಚಲಾಗಿದೆ. ಇದರಲ್ಲಿ ಕೆಲವು ಹಳೆಯ ವೀಡಿಯೊ ದೃಶ್ಯಗಳು. ಯೋಧರ ವಿರುದ್ಧ ಪ್ರಭಲ ಸಾಕ್ಷಾಧಾರ ದೊರೆತರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸೇನೆಯ ಬಗ್ಗೆ ಹೇಳುವುದಾದರೆ, ಇಲ್ಲಿ ಕಾರ್ಯ ನಿರ್ವಹಿಸುವವರು ವೃತ್ತಿಪರ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ . ಈ ರೀತಿ ಕಾರ್ಯ ನಿರ್ವಹಿಸದ ವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದವರು ಹೇಳಿದರು.

ಮೇ ತಿಂಗಳಲ್ಲಿ ಸೇನಾಧಿಕಾರಿ ಲೆ.ಉಮರ್ ಫಯಾಝ್ ಅವರ ಬರ್ಬರ ಹತ್ಯೆಯ ಬಳಿಕವೂ ಸೇನೆಗೆ ಸೇರುವ ಯುವಜನರ ಉತ್ಸಾಹದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯಲ್ಲಿ 800 ಯೋಧರ ಹುದ್ದೆ ಭರ್ತಿಗೆ ನಡೆಸಲಾದ ನೇಮಕಾತಿ ರ್ಯಾಲಿಯಲ್ಲಿ 19,000 ಯುವಜನತೆ ಪಾಲ್ಗೊಂಡಿದ್ದರು. ಜಮ್ಮು-ಕಾಶ್ಮೀರ ಲೈಟ್ ಇನ್‌ಫ್ಯಾಂಟ್ರಿ ಸೆಂಟರ್‌ನಲ್ಲಿ ಮಾರ್ಚ್‌ನಲ್ಲಿ 200 ಹುದ್ದೆ ಭರ್ತಿಗಾಗಿ ನಡೆದ ನೇಮಕಾತಿ ರ್ಯಾಲಿಯಲ್ಲಿ 5,000 ಯುವಜನತೆ ಪಾಲ್ಗೊಂಡಿದ್ದರು ಎಂದವರು ವಿವರಿಸಿದರು. ದಕ್ಷಿಣ ಕಾಶ್ಮೀರ ವಿಭಾಗದಲ್ಲಿ 100ರಿಂದ 110ರಷ್ಟು ಉಗ್ರರು ಸಕ್ರಿಯರಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಜೆ.ಎಸ್.ಸಂಧು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News