ಒಳಚರಂಡಿ ಸ್ವಚ್ಚಗೊಳಿಸುವ ವೇಳೆ ವಿಷಾನಿಲ ಸೇವಿಸಿ ನಾಲ್ವರು ಕಾರ್ಮಿಕರು ಮೃತ್ಯು
ಹೊಸದಿಲ್ಲಿ, ಜು.15: ಒಳಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಹೊರಹೊಮ್ಮಿದ ವಿಷಾನಿಲ ಸೇವನೆಯಿಂದಾಗಿ ನಾಲ್ವರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ದಕ್ಷಿಣ ದಿಲ್ಲಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಗಿತೊರ್ನಿ ಪ್ರದೇಶದ 100 ಫೀಟ್ ರೋಡ್ ಎಂಬಲ್ಲಿ ಐವರು ಕಾರ್ಮಿಕರು ಒಳಚರಂಡಿಯನ್ನು ಸ್ವಚ್ಛಗೊಳಿಸಲು ಮ್ಯಾನ್‌ಹೋಲ್‌ನೊಳಗೆ ಇಳಿದಿದ್ದರು. ಹಲವು ತಾಸುಗಳಾದರೂ ಅವರು ಹೊರಬರದೇ ಇದ್ದಾಗ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಒಳಚರಂಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಐವರನ್ನೂ ಹೊರಕ್ಕೆ ತಂದರು.
ಕೂಡಲೇ ಐವರನ್ನು ದಿಲ್ಲಿಯ ಫೋರ್ಟಿಸ್,ಏಮ್ಸ್ ಹಾಗೂ ಸಫ್ದರ್‌ಜಂಗ್ ಆಸ್ಪತ್ರೆಗಳಲ್ಲಿ ದಾಖಲಿಲಾಯಿತು. ನಾಲ್ವರು ಆಸ್ಪತ್ರೆಗೆ ದಾಖಲಿಸುವಾಗಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸ್ವರಣ್‌ಸಿಂಗ್, ದೀಪು, ಅನಿಲ್ ಹಾಗೂ ಬಲವೀಂದರ್ ಎಂದು ಗುರುತಿಸಲಾಗಿದೆ.
ದುರಂತದಲ್ಲಿ ಜಸ್ಪಾಲ್ ಎಂಬಾತ ಬದುಕುಳಿದಿದ್ದು, ಆತ ನಗರದ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಈ ನಾಲ್ವರು ಮೆಹ್ರೌಲಿಯ ಅಂಬೇಡ್ಕರ್ ಕಾಲನಿಯ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ.