ರವಿತೇಜಾ, ಪೂರಿ ಜಗನ್ನಾಥ್, ಚಾರ್ಮಿಗೆ ನೋಟಿಸ್

Update: 2017-07-15 16:11 GMT

ಹೈದರಾಬಾದ್, ಜು.15: ದಕ್ಷಿಣ ಭಾರತದ ಚಿತ್ರರಂಗಕ್ಕೆ ಇದೀಗ ಡ್ರಗ್  ಮಾಫಿಯಾದ ನಂಟಿನ ಆರೋಪ ಅಂಟಿಕೊಂಡಿದೆ. ನೆರೆಯ ಆಂಧ್ರ ಪ್ರದೇಶದಲ್ಲಿ ಈ ಮಾದಕ ಮಾಫಿಯಾ ಬಲವಾಗಿ ಬೇರೂರಿದ್ದು, ಇದರ ಬೆನ್ನತ್ತಿರುವ ಪೊಲೀಸರು ಸ್ಟಾರ್ ನಟರಿಗೂ, ಡ್ರಗ್ ಪಾತಕಿಗಳಿಗೂ ನಂಟಿರುವ ಗುಮಾನಿಯನ್ನು ವ್ಯಕ್ತಪಡಿಸಿದ್ದಾರೆ. 

ಈ ಸಂಬಂಧ ಕಾರ್ಯಾಚರಣೆ ಮುಂದುವರಿಸಿರುವ ತನಿಖಾ ತಂಡಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟ-ನಟಿಯರು ಈ ಡ್ರಗ್ ಮಾಫಿಯಾದ ಜೊತೆ ಕೈ ಜೋಡಿಸಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದೆ.  ಈ ಸಂಬಂಧ 10ಕ್ಕೂ ಹೆಚ್ಚು ಮಂದಿ ನಟ-ನಟಿಯರು-ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಖ್ಯಾತ ನಟ ರವಿತೇಜಾ, ನಟಿ ಚಾರ್ಮಿ, ನಿರ್ದೇಶಕ ಪೂರಿ ಜಗನ್ನಾಥ್ ಹೆಸರು ಈ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ. 

ಏನಿದು ಪ್ರಕರಣ? 
ಈ ತಿಂಗಳ 4ರಂದು ಅಬಕಾರಿ ಅಧಿಕಾರಿಗಳು ಮಾದಕ ಜಾಲವನ್ನು ಬೇಧಿಸಿದ್ದರು. ಆರೋಪಿಗಳನ್ನು ವಿಚಾರಣೆಗೆ ಗುರಿಪಡಿಸಿದಾಗ ಈ ಡ್ರಗ್ ಮಾಫಿಯಾ ಟಾಲಿವುಡ್ ಚಿತ್ರರಂಗಕ್ಕೂ ವಿಸ್ತಾರಿಸಿರುವ ಸಂಗತಿ ಬೆಳಕಿಗೆ ಬಂದಿತ್ತು. ಹಗರಣದ ಪ್ರಮುಖ ಆರೋಪಿಯ ದೂರವಾಣಿ ಕರೆ ವಿವರ ಪರಿಶೀಲಿಸಿದಾಗ ಚಿತ್ರರಂಗದ ಪ್ರಮುಖರ ಜೊತೆ ಈ ಆರೋಪಿಗಳಿಗೆ ಒಡನಾಟ ಇದ್ದುದ್ದು ಬೆಳಕಿಗೆ ಬಂದಿದೆ ಎಂದು NDPS ತನಿಖಾ ತಂಡದ ಮೂಲಗಳು ತಿಳಿಸಿವೆ. 

ಒಂದು ಮೂಲದ ಪ್ರಕಾರ, ಚಿತ್ರರಂಗದ 50ಕ್ಕೂ ಹೆಚ್ಚು ಮಂದಿಗೆ ಡ್ರಗ್ ಮಾಫಿಯಾದ ಜತೆ ನಂಟು ಇದೆ ಎಂಬ ಗುಮಾನಿಯಿದ್ದು, ಇದೀಗ 12 ಮಂದಿಗೆ ನೋಟಿಸ್ ನೀಡಿರುವ NDPS ತನಿಖಾ ತಂಡ, ಇನ್ನೂ 35 ಮಂದಿಗೆ ನೋಟಿಸ್ ನೀಡಲು ಚಿಂತನೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News