ಕೋಚ್ ಕೆಲಸ ಕ್ಯಾಚ್ ಹಾಕಿಕೊಂಡ ಶಾಸ್ತ್ರಿಗಳು

Update: 2017-07-16 05:29 GMT

ಭಾರತೀಯ ಕ್ರಿಕೆಟ್ ಟೀಂನ ಮುಖ್ಯ ಕೋಚ್ ಆಗಿ ರವಿಶಂಕರ್ ಜಯದ್ರಿತಾ ಶಾಸ್ತ್ರಿ ಎಂಬ ಪುರೋಹಿತರನ್ನು ಕೊನೆಗೂ ಆಯ್ಕೆ ಮಾಡಲಾಗಿದೆ.

ಇದು ಇಂಡಿಯಾದ ಕ್ರಿಕೆಟ್ ಬಾಸ್‌ಗಳ ಆಯ್ಕೆಯೇ ವಿನಃ ಕ್ರಿಕೆಟ್ ಆಟದ ಸಹಜ ಆಯ್ಕೆಯಲ್ಲ ಎಂಬುದು ಆಯ್ಕೆಯ ಘಟನಾವಳಿಗಳನ್ನು ಗಮನಿಸಿದರೆ ತಿಳಿಯುವಂತಿತ್ತು.

ನಮ್ಮ ಕ್ರಿಕೆಟ್‌ನ ಘನತೆ ಗೌರವಗಳನ್ನೆಲ್ಲಾ ಮಣ್ಣುಪಾಲು ಮಾಡಿ ಸುಪ್ರೀಂ ಕೋರ್ಟ್‌ನಿಂದಲೂ ಛೀಮಾರಿ ಹಾಕಿಸಿಕೊಂಡು ಬಿಸಿಸಿಐನಿಂದ ಹೊರ ದಬ್ಬಲ್ಪಟ್ಟಿದ್ದ ಶ್ರೀನಿವಾಸನ್‌ರ ನೆರಳಿನ ರೂಪವೇ ಈ ನಮ್ಮ ರವಿ ಶಾಸ್ತ್ರಿಗಳು. ಇದೊಂದು ರೀತಿ ‘ಹೋದೆಯಾ ಪಿಶಾಚಿ ಅಂದರೆ ಬಂದೇ ನಾ ಗವಾಕ್ಷಿಲಿ’ ಎಂಬಂತಿದೆ. ಬಿಸ್‌ನೆಸ್ ಸ್ಟ್ಯಾಂಡರ್ಡ್ ದಿನಪತ್ರಿಕೆಯೂ ಇತ್ತೀಚೆಗೆ ಪ್ರಕಟಿಸಿರುವ ಒಂದು ವ್ಯಂಗ್ಯ ಚಿತ್ರವು ರವಿ ಶಾಸ್ತ್ರಿ ಯಾರ ಲೌಡ್ ಸ್ಪೀಕರ್ ಎನ್ನುವುದನ್ನು ಹೇಳಿತು.

ಸುಪ್ರೀಂಕೋರ್ಟ್‌ನ ಮಧ್ಯಪ್ರವೇಶದಿಂದ ರಚನೆಯಾದ ಕ್ರಿಕೆಟ್ ಸಲಹಾ ಮಂಡಳಿಯ ಸೂಚನೆಯ ಮೇರೆಗೆ ಕೋಚ್ ಆಯ್ಕೆಗೆ ಇತ್ತೀಚೆಗೆ ಅರ್ಜಿ ಕರೆದು, ಶುಭ ಮಹೂರ್ತದಲ್ಲಿ ಸಂದರ್ಶನವನ್ನು ನಡೆಸಿ ರವಿ ಶಾಸ್ತ್ರಿ ಆಯ್ಕೆಯನ್ನು ಘೋಷಿಸಲಾಯಿತು.

ಈ ಆಯ್ಕೆ ನಡೆಸಿದ ಸಮಿತಿಯಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗುಲಿ ಇದ್ದರು. ಅಷ್ಟು ಮುಖ್ಯ ಅನಿಸದಿದ್ದರೂ ಹೇಳಲೇಬೇಕಾದ ಸಂಗತಿ ಏನೆಂದರೆ ಇವರೆಲ್ಲಾ ಬ್ರಾಹ್ಮಣ ಜಾತಿಗೆ ಸೇರಿದವರು. ಇನ್ನು ರವಿ ಶಾಸ್ತ್ರಿಗಳು ಯಾವ ಜಾತಿ ಎಂಬುದನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲವಷ್ಟೆ. ಅದೊಂದೆಡೆ ಇರಲಿ. ಈಗ ಈ ಆಯ್ಕೆ ಯಾವ ಮಾನದಂಡದಲ್ಲಿ ಹೇಗೆ ನಡೆಯಿತೆಂಬುದನ್ನು ನೋಡೋಣ.

ಕೋಚ್‌ಗಾಗಿ ಸಂದರ್ಶನ ನಡೆಯುವ ಮೊದಲೇ ಭಾರತೀಯ ಕ್ರಿಕೆಟ್‌ನ ಲಾಭಿಕೋರ ಸುನೀಲ್ ಗವಾಸ್ಕರ್ ರವಿ ಶಾಸ್ತ್ರಿಯನ್ನೇ ಕೋಚ್ ಆಗಿ ಆರಿಸಬೇಕು ಎಂದು ಒಂದು ಆದೇಶದ ರೀತಿಯ ಅಭಿಪ್ರಾಯವನ್ನು ಬಹಿರಂಗವಾಗಿ ನೀಡಿದ್ದರು.

ಕೋಚ್ ಆಯ್ಕೆಗೆ ಒಂದು ಸಮಿತಿ ನೇಮಿಸಿ, ಆ ಸಮಿತಿಯವರು ಅದಕ್ಕೊಂದು ಪ್ರಕ್ರಿಯೆ ನಡೆಸುತ್ತಿರುವಾಗ ಆಯ್ಕೆ ಕೆಲಸವನ್ನು ಸಮಿತಿಗೆ ಬಿಟ್ಟು ಸುಮ್ಮನಿರುವ ಬದಲಾಗಿ ಈ ಗವಾಸ್ಕರ್‌ಗೆ ನಡುವೆ ತಲೆ ಹಾಕುವ ಅನಿವಾರ್ಯತೆ ಅದೇನಿತ್ತು?

ಅದೇನೆಂದರೆ ಗವಾಸ್ಕರ್ ಹಾಗೂ ಶಾಸ್ತ್ರಿಗಳು ಕ್ರಿಕೆಟ್ ಆಟಕ್ಕೆ ಸಂಬಂಧಿಸಿರುವ ಕಾರ್ಪೊರೇಟ್ ಕಂಪೆನಿಗಳ ಜೊತೆ ಅನೇಕ ಜಂಟಿ ಕಾಂಟ್ರ್ಯಾಕ್ಟ್‌ಗಳನ್ನು ಹೊಂದಿದ್ದಾರೆ. ಹಾಗಾಗಿ ಗವಾಸ್ಕರ್‌ಗೆ ವೀರೇಂದ್ರ ಸೆಹ್ವಾಗ್‌ಗಿಂತ, ನಮ್ಮ ಕರ್ನಾಟಕದ ದೊಡ್ಡ ಗಣೇಶ್‌ಗಿಂತ, ವೃತ್ತಿಪರ ಕೋಚ್‌ಗಳಾದ ಟಾಮ್ ಮೂಡಿ, ರಿಚರ್ಡ್ ಪೈಬಸ್‌ಗಿಂತ ಕಳಪೆ ಕ್ರಿಕೆಟರ್ ಆಗಿರುವ ಶಾಸ್ತ್ರಿಗಳ ಹೆಸರೇ ಆಪ್ಯಾಯಮಾನವಾಗಿ ಕಂಡಿದ್ದರೆ ಆಶ್ಚರ್ಯವೇನಿಲ್ಲ !

ಯಾವ ಆಯಾಮದಿಂದ ನೋಡಿದರೂ ಅನಿಲ್ ಕುಂಬ್ಳೆಗಿಂತ ರವಿ ಶಾಸ್ತ್ರಿ ಉತ್ತಮ ಕ್ರಿಕೆಟರ್ ಅಲ್ಲ. ಉತ್ತಮ ಕೋಚ್ ಆಗಲೂ ಸಾಧ್ಯವಿಲ್ಲ.

ಜನಸಾಮಾನ್ಯರಿಗೆ ಕ್ರಿಕೆಟ್ ಆಟದ ಹೊರಗಿನ ರೋಮಾಂಚನವಷ್ಟೇ ಕಾಣುತ್ತಿರುತ್ತದೆ. ಅದರೊಳಗಿನ ಲಾಬಿ, ಲೋಭ ವಂಚನೆಗಳು, ಸ್ವಜನಪಕ್ಷಪಾತಗಳು, ಉದಯೋನ್ಮುಖರ ಬೆನ್ನಿಗೆ ಚೂರಿ ಹಾಕುವವರು.. ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ.

ಇಂಡಿಯಾದ ಕೋಟ್ಯಂತರ ಜನರ ಮೆಚ್ಚಿನ, ಪ್ರೀತಿಯ ಕ್ರಿಕೆಟ್ ಅನ್ನು ಅನೇಕ ಸಾರಿ ದೇಶಾಭಿಮಾನದೊಂದಿಗೆ, ನಮ್ಮ ಕನಸು, ಆಕಾಂಕ್ಷೆ ಹತಾಶೆಗಳೊಂದಿಗೆ ಸಮೀಕರಿಸಿಕೊಂಡು ತಂಡ ಗೆದ್ದಾಗ ಸಂಭ್ರಮಿಸುವ, ಸೋತಾಗ ದುಃಖಪಡುವ ಜನರಿದ್ದಾರೆ.

ಆದರೆ ಭಾರತೀಯ ಕ್ರಿಕೆಟ್ ಆಟ ಈಗ ಸಂಪೂರ್ಣವಾಗಿ ವಂಚಕರ ಕೈವಶವಾಗಿದೆ. ಬಿಜೆಪಿಯ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಒಂದು ದಾವೆ ಹಾಕಿ ‘‘ಬಿಸಿಸಿಐ ವಹಿವಾಟು 30 ಸಾವಿರ ಕೋಟಿಯಾಗುವಷ್ಟಿದ್ದು ಹಲವು ಜನ ಹಣ ಲೂಟಿ ಹೊಡೆಯುತ್ತಿದ್ದಾರೆ. ಇದನ್ನು ಸರಿಪಡಿಸಬೇಕು’’ ಎಂದು ಕೋರಿದ್ದಾರೆ.
ಕೋರ್ಟ್ ಸಹ ಈ ಮನವಿಯನ್ನು ಪರಿಗಣಿಸಿ ಎಲ್ಲೆಲ್ಲಿ ಅವ್ಯವಹಾರಗಳಾಗುತ್ತಿವೆ ಎಂದು ಪರಿಶೀಲಿಸಲು ಮುಂದಾಗಿದೆ. ನಮ್ಮ ಜನರ ಮುಗ್ಧ ಕ್ರೀಡಾ ಪ್ರೀತಿಗೆ ನಮ್ಮ ಕ್ರಿಕೆಟರ್‌ಗಳು ಮತ್ತವರ ಬಾಸ್‌ಗಳು ನೀಡುತ್ತಿರುವ ಕಾಣಿಕೆ ಒಂದೇ..

ಅದು ವಂಚನೆ!

ಕೋಚ್ ಆಯ್ಕೆಯ ಸಂದರ್ಶನದ ದಿನ ಸಮಿತಿಯ ಎದುರು ಹಾಜರಿರದೆ ವಿಂಬಲ್ಡನ್ ಟೆನಿಸ್ ನೋಡಲು ಇಂಗ್ಲೆಂಡ್‌ಗೆ ಹೋಗಿದ್ದರೂ, ರವಿ ಶಾಸ್ತ್ರಿಯನ್ನು ಆಯ್ಕೆ ಮಾಡಲಾಯಿತು.
ಇದೊಂದು ಮೊದಲೇ ನಿರ್ಧಾರವಾಗಿದ್ದ ಸಂಗತಿ ಆದ್ದರಿಂದ ರವಿ ಶಾಸ್ತ್ರಿಗಳ ಎಂಗೇಜ್‌ಮೆಂಟ್‌ಗೆ ತೊಂದರೆ ಏನೂ ಆಗಲಿಲ್ಲ.

ಅಲ್ಲಿಂದಾಚೆಗೆ ಇಂಡಿಯಾದ ಕ್ರಿಕೆಟ್ ಟೀಂ ಶ್ರೀಲಂಕಾ ಸೇರಿದಂತೆ ಹಲವು ಸರಣಿಗಳನ್ನು ಆಡಲಿದೆ. 2019ರಲ್ಲಿ ವಿಶ್ವಕಪ್ ಟೂರ್ನಿಯೂ ಬರಲಿದೆ.

ಈ ಯಾವ ಸರಣಿಯಲ್ಲೇ ಆಗಲಿ ನಮ್ಮ ತಂಡದ ಸೋಲು-ಗೆಲುವಿನಲ್ಲಿ ಈಗ ಕೋಚ್ ಆಗಿ ಶಾಸ್ತ್ರೋಕ್ತವಾಗಿ ಕಾಣಿಸಿಕೊಳ್ಳುವ ರವಿ ಶಾಸ್ತ್ರಿಗಳ ಕೊಡುಗೆ ಆಷ್ಟಿರಲಾರದು ಅಂದುಕೊಳ್ಳಬಹುದು.

ಏಕೆಂದರೆ

1981ರಿಂದ 1992ರವರೆಗೆ ಕ್ರಿಕೆಟ್ ಆಡಿದ ಶಾಸ್ತ್ರಿಗಳು ಒಮ್ಮೆ ಚಾಂಪಿಯನ್ ಆಫ್ ಚಾಂಪಿಯನ್ಸ್ ಅನಿಸಿಕೊಂಡಿದ್ದು, ಒಂದು ಓವರಿನಲ್ಲಿ ಆರು ಸಿಕ್ಸರ್ ಹೊಡೆದದ್ದು ಬಿಟ್ಟರೆ ನೆನಪಿಸಿಕೊಳ್ಳಬಹುದಾದ ಸಾಧನೆ ಅವರದ್ದಲ್ಲ. ಇನ್ನೂ ಮಜಾ ಅಂದರೆ 150 ಒನ್ ಡೆ ಮ್ಯಾಚ್‌ಗಳಲ್ಲಿ ಶಾಸ್ತ್ರಿ ಕೇವಲ 25 ಸಿಕ್ಸರ್ ಹೊಡೆದಿರುವುದು. ಅಂದರೆ 6 ಮ್ಯಾಚ್‌ಗೆ ಒಂದು ಸಿಕ್ಸರ್!

ಕೇವಲ ಒಂದೇ ಒಂದು ಟೆಸ್ಟ್ ಮ್ಯಾಚ್‌ನಲ್ಲಿ ಇಂಡಿಯಾ ಟೀಂನ ಕ್ಯಾಪ್ಟನ್ ಆಗಿದ್ದ ಶಾಸ್ತ್ರಿಯ ಬ್ಯಾಟಿಂಗ್ ಶೈಲಿ ನೆನೆದರೆ ಈಗಲೂ ಅಳು ಬರುತ್ತದೆ. ಆಗಾಗ ಪ್ಯಾಡ್‌ಗಳ ನಡುವೆ ಬ್ಯಾಟ್ ಇರಿಸಿ ಗಾಬರಿಯಿಂದ ಹೊಡೆಯುತ್ತಿದ್ದ ರವಿಶಾಸ್ತ್ರಿ ಬ್ಯಾಟಿಂಗ್ ಶೈಲಿಯನ್ನು ‘ಚಪಾತಿ ಶಾಟ್ಸ್’ ಎಂದು ತಮಾಷೆಯಾಗಿ ಹೇಳಲಾಗುತ್ತಿತ್ತು.

ಹೆಚ್ಚು ಮಾತೇಕೆ,

ರವಿ ಶಾಸ್ತ್ರಿಯ ಕ್ರಿಕೆಟ್ ಕೆರಿಯರ್‌ನ ಸಾಧನೆಗಳತ್ತ ಒಮ್ಮೆ ನೋಡೋಣ.

ಕೋಚ್ ಹುದ್ದೆಗಾಗಿ ಅರ್ಜಿ ಹಾಕಿದ್ದ ಇತರರ ಅನುಭವ, ಸಾಧನೆ ರವಿಗಿಂತಾ ಹೆಚ್ಚಿತ್ತು. ಇನ್ನಿತರ ಕ್ರಿಕೆಟ್ ದೇಶಗಳ ಕೋಚ್‌ಗಳ ಸಾಮರ್ಥ್ಯ, ಹಿನ್ನೆಲೆ ನೋಡಿದರೂ ನಮ್ಮ ಶಾಸ್ತ್ರಿಗಳು ಪಾತಾಳದಲ್ಲಿರುವಂತೆ ಭಾಸವಾಗುತ್ತದೆ. ರವಿ ಉತ್ತಮ ಬ್ಯಾಟ್ಸ್ ಮೆನ್, ಬೌಲರ್, ಫೀಲ್ಡರ್ ಇದ್ಯಾವುದೂ ಆಗಿರಲಿಲ್ಲ. ಆದರೆ ಲಾಬಿ ಮಾಡುವುದರಲ್ಲಿ ಮಾತ್ರ ಪ್ರವೀಣ.

ರವಿಶಾಸ್ತ್ರಿ ಕೋಚ್ ಆಗಿ ಆಯ್ಕೆಯಾದ ವಿಚಾರವನ್ನು ಆಯ್ಕೆ ಸಮಿತಿಯು ಅನೌನ್ಸ್ ಮಾಡುವ ಮೊದಲೇ, ಬಿಸಿಸಿಐ ಅನುಮೋದಿಸುವ ಮುನ್ನವೇ ಮೀಡಿಯಾಗಳಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು. ಅಷ್ಟು ಧಾವಂತ ಯಾರಿಗಿತ್ತು? ಯಾಕಿತ್ತು? ಏನಿದರ ಅರ್ಥ?

ಲಾಬಿ ನಡೆಸುವವರಿಗೆ ಆಟಕ್ಕಿಂತಾ ತಮ್ಮ ಹಿತಾಸಕ್ತಿಗಳೇ ಪ್ರಧಾನವಾಗಿರುತ್ತವೆ.

ರವಿಶಾಸ್ತ್ರಿ ಅದರ ಕೆಟ್ಟ ಸಂಕೇತ ಅಷ್ಟೆ.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News