55 ಸಂಸದರಿಂದ ತಮ್ಮ ರಾಜ್ಯಗಳಲ್ಲಿ ಮತದಾನ: ಚು.ಆಯೋಗ
ಹೊಸದಿಲ್ಲಿ,ಜು.16: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಸೇರಿದಂತೆ 55 ಸಂಸದರು ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಸಂಸತ್ ಭವನದ ಬದಲು ತಮ್ಮ ರಾಜ್ಯ ವಿಧಾನಸಭೆಗಳಲ್ಲಿ ಮತದಾನ ಮಾಡಲಿದ್ದಾರೆ ಎಂದು ಚುನಾವಣಾ ಆಯೋಗದ ದಾಖಲೆಯೊಂದು ತಿಳಿಸಿದೆ.
ಐವರು ಶಾಸಕರು ಸಂಸತ್ ಭವನದಲ್ಲಿ ಮತ್ತು ಇತರ ನಾಲ್ವರು ಶಾಸಕರು ತಾವು ಆಯ್ಕೆಯಾಗಿರದ ರಾಜ್ಯ ವಿಧಾನಸಭೆಗಳಲ್ಲಿ ಮತಗಳನ್ನು ಚಲಾಯಿಸಲಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಸಾಮಾನ್ಯವಾಗಿ ಸಂಸದರು ಸಂಸತ್ ಭವನದಲ್ಲಿ ಮತ್ತು ಶಾಸಕರು ತಮ್ಮ ರಾಜ್ಯಗಳ ವಿಧಾನಸಭೆಗಳಲ್ಲಿ ಮತಗಳನ್ನು ಚಲಾಯಿಸುತ್ತಾರೆ.
ರಾಷ್ಟ್ರಪತಿ ಚುನಾವಣೆಯ ನಿಯಮಾವಳಿಗಳಂತೆ ಸಂಸದರು ಮತ್ತು ಶಾಸಕರು ಇತರ ಸ್ಥಳಗಳಲ್ಲಿ ಮತದಾನಕ್ಕೆ ಅವಕಾಶ ನೀಡುವಂತೆ ಆಯೋಗವನ್ನು ಕೇಳಿಕೊಳ್ಳಬಹುದಾಗಿದೆ.
14 ರಾಜ್ಯಸಭಾ ಸದಸ್ಯರು ಮತ್ತು 41 ಲೋಕಸಭಾ ಸದಸ್ಯರು ತಮ್ಮ ರಾಜ್ಯ ವಿಧಾನಸಭೆಗಳಲ್ಲಿ ಮತಗಳನ್ನು ಚಲಾಯಿಸಲು ಆಯೋಗವು ಅನುಮತಿ ನೀಡಿದೆಯೆಂದು ದಾಖಲೆಯು ತಿಳಿಸಿದೆ.
ಈವರೆಗೆ ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡದ ಪಾರಿಕ್ಕರ್, ಆದಿತ್ಯನಾಥ್ ಮತ್ತು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ವೌರ್ಯ ಈ ಸಂಸದರಲ್ಲಿ ಸೇರಿದ್ದಾರೆ. ಪಾರಿಕ್ಕರ್ ರಾಜ್ಯಸಭಾ ಸದಸ್ಯರಾಗಿದ್ದರೆ, ಆದಿತ್ಯನಾಥ್ ಮತ್ತು ವೌರ್ಯ ಲೋಕಸಭಾ ಸದಸ್ಯರಾಗಿದ್ದಾರೆ.
ತಮ್ಮ ರಾಜ್ಯ ವಿಧಾನಸಭೆಗಳಲ್ಲಿ ಮತದಾನ ಮಾಡಲಿರುವ ಸಂಸದರ ಪೈಕಿ ಹೆಚ್ಚಿನವರು ತೃಣಮೂಲ ಕಾಂಗ್ರೆಸ್‌ಗೆ ಸೇರಿದವರಾಗಿದ್ದಾರೆ. ಮತದಾನಕ್ಕಾಗಿ ಸಂಸದರು ಹಸಿರು ಬಣ್ಣದ ಮತ್ತು ಶಾಸಕರು ಗುಲಾಬಿ ಬಣ್ಣದ ಮತಪತ್ರಗಳನ್ನು ಬಳಸಲಿದ್ದಾರೆ.
ಶಾಸಕರ ಮತದ ವೌಲ್ಯವು ಅವರು ಪ್ರತಿನಿಧಿಸುತ್ತಿರುವ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಆದರೆ ಸಂಸದರ ಮತದ ನಿಗದಿತ ವೌಲ್ಯ 708 ಆಗಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಮತಗಳ ಒಟ್ಟೂ ವೌಲ್ಯ 10,98,903 ಆಗಿದೆ.