ಕಾಶ್ಮೀರ ವಿವಾದದಲ್ಲಿ ಚೀನಾ ಹಸ್ತಕ್ಷೇಪ: ಸಂಸತ್‌ನಲ್ಲಿ ಚರ್ಚೆಗೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ,ಜು.16: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಭಾರತಕ್ಕೆ ಚೀನಾ ಜೊತೆ ಭಿನ್ನಾ ಭಿಪ್ರಾಯವುಂಟಾಗಿರುವುದು ಹೊಸ ಬೆಳವಣಿಗೆಯೆಂದು ಇಂದಿಲ್ಲಿ ಅಭಿಪ್ರಾಯಿಸಿರುವ ಕಾಂಗ್ರೆಸ್ ಪಕ್ಷವು, ಸೋಮವಾರದಿಂದ ಆರಂಭಗೊಳ್ಳಲಿರುವ ಸಂಸತ್ ಅಧಿವೇಶನದಲ್ಲಿ ಈ ಬಗ್ಗ ಚರ್ಚೆಗೆ ಆಗ್ರಹಿಸುವುದಾಗಿ ಹೇಳಿದೆ. ಪ್ರಾಂತೀಯ ಏಕತೆ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ತನ್ನ ಪಕ್ಷವು ಕೇಂದ್ರ ಸರಕಾರದ ಜೊತೆ ನಿಲ್ಲಲಿದೆಯೆಂದು ಅದು ಸ್ಪಷ್ಟಪಡಿಸಿದೆ.
ಕಾಶ್ಮೀರದಲ್ಲಿ ಮಾತುಕತೆಗಾಗಿನ ಎಲ್ಲಾ ಬಾಗಿಲುಗಳನ್ನು ಸರಕಾರವು ಮುಚ್ಚಿರುವುದರಿಂದ ಕಣಿವೆ ಪ್ರದೇಶದಲ್ಲಿ ‘ರಾಜಕೀಯವಾಗಿ ಉಸಿರುಗಟ್ಟಿದ ವಾತಾವರಣ ಸೃಷ್ಟಿಯಾಗಿದೆ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಝಾದ್ ಟೀಕಿಸಿದ್ದಾರೆ.
ಮುಂಗಾರು ಅಧಿವೇಶನ ನಾಳೆ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಇಂದು ನಡೆದ ಸರ್ವ ಪಕ್ಷ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಕಾಶ್ಮೀರದಲ್ಲಿ ಉದ್ವಿಗ್ನತೆಯನ್ನು ಬಂಧೂಕುಗಳು ಹಾಗೂ ಹತ್ಯೆ ಕಾರ್ಯಾಚರಣೆಗಳಿಂದ ಮಾತ್ರ ಹತ್ತಿಕ್ಕಲು ಸಾಧ್ಯವೆಂದು ಸರಕಾರ ಭಾವಿಸಿದಲ್ಲಿ ನಾವು ಅದರ ಜೊತೆಗಿರುವುದಿಲ್ಲ’’ ಎಂದರು.
ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನ ಹೆಸರು ಥಳಕುಹಾಕಿಕೊಳ್ಳುತ್ತದೆ. ಇದೀಗ ಚೀನಾ ಕೂಡಾ ಪ್ರಸ್ತಾಪಿಸಲ್ಪಟ್ಟಿದೆ ಎಂದವರು ಕಳವಳ ವ್ಯಕ್ತಪಡಿಸಿದರು. ಸಂಸತ್ ಅಧಿವೇಶನದಲ್ಲಿ ಆಂತರಿಕ ಹಾಗೂ ಬಾಹ್ಯಭದ್ರತೆಗೆ ಸಂಬಂಧಿಸಿದ ಕೆಲವು ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚೆಯಾಗಬೇಕಾದ ಅಗತ್ಯದ ಬಗ್ಗೆ ಕಾಂಗ್ರೆಸ್ ಪಕ್ಷವು ಸರಕಾರಕ್ಕೆ ತಿಳಿಸಿರುವುದಾಗಿ ಅಝಾದ್ ತಿಳಿಸಿದರು.