‘ಒಂದು ಮೊಟ್ಟೆಯ ಕಥೆ’ ಚಿತ್ರ ವಿದೇಶದಲ್ಲಿ ಬಿಡುಗಡೆ: ರಾಜ್ ಶೆಟ್ಟಿ

Update: 2017-07-17 12:57 GMT

ಉಡುಪಿ, ಜು.16: ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಒಂದು ಮೊಟ್ಟೆಯ ಕಥೆ’ ಚಿತ್ರವನ್ನು ಜು.23ರಂದು ಆಸ್ಟ್ರೇಲಿಯಾ, ಸಿಂಗಾಪುರ, ಜು.27ರಂದು ಅಮೆರಿಕಾ, 28ರಂದು ಇಸ್ರೇಲ್‌ನಲ್ಲಿ ಹಾಗೂ ಮುಂದಿನ ತಿಂಗಳು ದುಬೈಯಲ್ಲಿ ಬಿಡುಗಡೆಗೊಳಿಸಲು ಉದ್ದೇಶಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ರಾಜ್ ಬಿ.ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್ ವತಿಯಿಂದ ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ಚಿತ್ರ ತಂಡದ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡು ತಿದ್ದರು. ಈಗಾಗಲೇ ದೆಹಲಿ, ಮುಂಬೈ, ಚೈನ್ನೈಯಲ್ಲಿ ತೆರೆ ಕಂಡಿರುವ ಈ ಸಿನೆಮಾವನ್ನು ಸದ್ಯವೇ ಹೈದರಬಾದಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಕನ್ನಡ ಉಪನ್ಯಾಸಕನಾಗಿರುವ ಸಿನೆಮಾದ ನಾಯಕನಿಗೆ ಒಬ್ಬರು ಮಾರ್ಗ ದರ್ಶಕರು ಬೇಕಾಗಿತ್ತು. ಅದಕ್ಕಾಗಿ ರಾಜಕುಮಾರ್ ಅವರನ್ನು ಸಿನೆಮಾದಲ್ಲಿ ಬಳಸಿಕೊಳ್ಳಲಾಗಿದೆ. ಇದು ರಾಜ್ ಕುಟುಂಬಕ್ಕೆ ತುಂಬ ಸಂತೋಷ ಕೊಟ್ಟಿದೆ. ಪುನೀತ್ ರಾಜ್‌ಕುಮಾರ್ ಸಿನೆಮಾ ವೀಕ್ಷಿಸಿ ನಮ್ಮನ್ನು ಮನೆಗೆ ಕರೆಸಿ ಮಾತುಕತೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಅವರು ಹೇಳಿದರು.

ಬಜೆಟ್ ಸಮಸ್ಯೆಯಿಂದ 16 ದಿನಗಳಲ್ಲಿ ಸಿನೆಮಾ ಮುಗಿಸಲಾಗಿತ್ತು. ಸಂಕಲನ ಹಾಗೂ ಸಂಗೀತಕ್ಕೆ ಹೆಚ್ಚು ಸಮಯ ತೆಗೆದುಕೊಂಡಿತು. ಹೀಗಾಗಿ ಚಿತ್ರೀಕರಣ ಮುಗಿದು ಎರಡು ವರ್ಷಗಳ ನಂತರ ಸಿನೆಮಾ ಬಿಡುಗಡೆ ಮಾಡಲಾಯಿತು ಎಂದ ಅವರು, ವಿನಯತೆ ಕಾರಣಕ್ಕಾಗಿ ಸಿನೆಮಾದಲ್ಲಿ ಮಂಗಳೂರು ಭಾಷೆಯನ್ನು ಬಳಸಿಕೊಳ್ಳಲಾಗಿದೆ. ಇದು ಇಡೀ ಸಿನೆಮಾಕ್ಕೆ ಬಣ್ಣ ತುಂಬಿದೆ. ಭಾಷೆ ಕೂಡ ಸಿನೆಮಾದ ಒಂದು ಪಾತ್ರವಾಗಿದೆ ಎಂದರು.

ನಿರ್ಮಾಪಕ ಸುಹಾನ್ ಪ್ರಸಾದ್ ಮಾತನಾಡಿ, 30ಲಕ್ಷ ರೂ. ಬಜೆಟ್‌ನಲ್ಲಿ ಸಿನೆಮಾ ತಯಾರಿಸಲಾಗಿದೆ. ನಂತರ ನಟರ ಸಂಭಾವನೆ ಪಾವತಿಸಿದ ಬಳಿಕ ಬಜೆಟ್ 50ಲಕ್ಷ ರೂ.ಗೆ ಏರಿಕೆಯಾಯಿತು. ಮುಂದೆ ಪವನ್ ಸಿನೆಮಾಕ್ಕೆ ಹಣ ಹೂಡಿಕೆ ಮಾಡಿ ಪ್ರಚಾರ ಸೇರಿದಂತೆ ವಿವಿಧ ಖರ್ಚುಗಳು ಸೇರಿ ಒಟ್ಟು ಒಂದು ಕೋಟಿ ರೂ. ವ್ಯಯ ಮಾಡಲಾಗಿದೆ. ಸಿನೆಮಾ ಬಿಡುಗಡೆಯಾದ ಒಂದು ವಾರದಲ್ಲಿ ಒಂದು ಕೋಟಿ ರೂ. ಗಳಿಸಿದೆ ಎಂದರು.

ಸಂವಾದದಲ್ಲಿ ಚಿತ್ರದ ಛಾಯಾಗ್ರಾಹಕ ಹಾಗೂ ಸಂಕಲನಕಾರ ಪ್ರವೀಣ್ ಶ್ರೀಯಾನ್, ನಟರಾದ ಶೈಲಶ್ರೀ ಮುಲ್ಕಿ, ಅಮೃತಾ ನಾಯಕ್, ಪ್ರಾಶ್ ತುಮ್ಮಿನಾಡು ಉಪಸ್ಥಿತರಿದ್ದರು.

ಅಕಾಡೆಮಿಯಿಂದ ಪ್ರದರ್ಶನ- ಸಂವಾದ

 ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ‘ಒಂದು ಮೊಟ್ಟೆಯ ಕಥೆ’ ಚಲನಚಿತ್ರ ಪ್ರದರ್ಶನ, ಸಂವಾದ ಹಾಗೂ ತಂಡಕ್ಕೆ ಸನ್ಮಾನ ಕಾರ್ಯಕ್ರಮವನ್ನು ಜು.18ರಂದು ಸಂಜೆ 4ಗಂಟೆಗೆ ಬೆಂಗಳೂರು ಚಾಮುಂಡೇಶ್ವರಿ ಸ್ಟುಡಿಯೋ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ ಬಿ.ಶೆಟ್ಟಿ ತಿಳಿಸಿದರು.

ಇದರಲ್ಲಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶು ಕುಮಾರ್ ಮೊದಲಾದವರು ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಅಕಾ ಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ವಹಿಸಲಿರುವರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News