×
Ad

ಅರುಣಾಚಲ ಗಡಿ ಪ್ರದೇಶದ ಬಳಿ ಚೀನಾ ಸೇನೆಯ ಕವಾಯತು

Update: 2017-07-17 19:02 IST

ಬೀಜಿಂಗ್, ಜು.17: ಸಿಕ್ಕಿಂ ಗಡಿಭಾಗದಲ್ಲಿ ಭಾರತೀಯ ಸೇನೆಯೊಂದಿಗಿನ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಚೀನಾವು ಅರುಣಾಚಲ ಪ್ರದೇಶದ ಗಡಿ ಸಮೀಪ, ಟಿಬೆಟ್‌ನಲ್ಲಿ ಸೇನಾ ಕವಾಯತು ನಡೆಸಿದೆ.

  ಟಿಬೆಟ್‌ನಲ್ಲಿ ನಡೆದ 11 ಗಂಟೆಗಳ ಸೇನಾ ಕವಾಯತ್ ಕುರಿತು ಸರಕಾರಿ ನಿಯಂತ್ರಣದ ಚೀನಾ ಸೆಂಟ್ರಲ್ ಟೆಲಿವಿಷನ್ (ಸಿಸಿಟಿವಿ) ವರದಿ ಮಾಡಿದೆ. ಆದರೆ ಈ ಕವಾಯತ್ ಯಾವಾಗ ನಡೆದಿದೆ ಎಂಬ ಬಗ್ಗೆ ತಿಳಿಸಿಲ್ಲ.

ಪೀಪಲ್ಸ್ ಲಿಬರೇಷನ್ ಆರ್ಮಿಯ ಟಿಬೆಟ್ ಮಿಲಿಟರಿ ಕಮಾಂಡ್ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ, ಯಾರ್ಲಂಗ್ ಝಾಂಗ್‌ಬೊ ನದಿಯ ಬಳಿ ಈ ಕವಾಯತ್ ನಡೆಸಿದೆ ಎಂದು ಸಿಸಿಟಿವಿ ತಿಳಿಸಿದೆ. ಭಾರತದ ಪೂರ್ವದಲ್ಲಿರುವ ರಾಜ್ಯವಾಗಿರುವ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಚೀನಾ ಹೆಸರಿಸಿರುವ ನಿಟ್ಟಿನಲ್ಲಿ , ಈ ಭಾಗದಲ್ಲಿ ನಡೆಯುತ್ತಿರುವ ಚೀನಾ ಸೇನೆಯ ಕವಾಯತ್ ಭಾರತಕ್ಕೆ ಒಂದು ಸ್ಪಷ್ಟ ಸಂದೇಶವಾಗಿ ದೆ ಎಂದು ವಿಶ್ಲೇಷಿಸಲಾಗುತ್ತಿದೆ.

   ಶತ್ರು ರಾಷ್ಟ್ರದ ಯುದ್ದವಿಮಾನ ಮತ್ತು ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ಈ ಕವಾಯತು ನಡೆಸಲಾಗಿದೆ. ಯುದ್ದ ಪ್ರದೇಶದಲ್ಲಿ ಸೇನಾ ಪಡೆಯ ವಿವಿಧ ವಿಭಾಗಗಳನ್ನು ಕ್ಷಿಪ್ರವಾಗಿ ನಿಯೋಜಿಸುವುದು, ಟ್ಯಾಂಕ್ ನಿರೋಧಕ ಗ್ರೆನೆಡ್ ಮತ್ತು ಕ್ಷಿಪಣಿಗಳ ಬಳಕೆ, ಶತ್ರುರಾಷ್ಟ್ರಗಳ ವಿಮಾನವನ್ನು ರಾಡಾರ್ ಗುರುತಿಸಿದ ಬಳಿಕ ಅವನ್ನು ಹೊಡೆದುರುಳಿಸುವುದು- ಇತ್ಯಾದಿಗಳ ವೀಡಿಯೊ ದೃಶ್ಯಾವಳಿಯನ್ನು ಟಿವಿ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಯಿತು. ಚೀನಾದಲ್ಲೇ ತಯಾರಿಸಲಾದ ಲಘು ಯುದ್ದ ಟ್ಯಾಂಕರನ್ನು ಇದಕ್ಕೂ ಮೊದಲು ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಎಂದು ಚೀನಾ ತಿಳಿಸಿದೆ.

    ಕಳೆದ ಜೂನ್ 16ರಿಂದಲೂ ಸಿಕ್ಕಿಂ ಗಡಿ ಭಾಗದ ದೋಕ್ಲಾಮ್‌ನಲ್ಲಿ ಭಾರತ-ಚೀನಾ ಸೇನೆಗಳ ಮಧ್ಯೆ ಬಿಕ್ಕಟ್ಟಿನ ನೆಲೆಸಿದೆ. ಭಾರತ-ಭೂತಾನ್-ಚೀನಾದ ಗಡಿ ಭಾಗಗಳು ಸಂಧಿಸುವ ‘ತ್ರಿರಾಷ್ಟ್ರ ಸಂಧಿ ಸ್ಥಳ’ ದಲ್ಲಿ ಚೀನಾ ರಸ್ತೆ ನಿರ್ಮಿಸಲು ಪ್ರಯತ್ನಿಸುತ್ತಿದ್ದು ಇದರಿಂದ ಭದ್ರತೆಗೆ ಅಪಾಯ ಎದುರಾಗಿದೆ ಎಂಬುದು ಭಾರತದ ನಿಲುವಾದರೆ, ತನ್ನ ಭೂವ್ಯಾಪ್ತಿಯ ಸ್ಥಳದಲ್ಲಿ ರಸ್ತೆ ನಿರ್ಮಿಸುವ ಕಾರ್ಯಕ್ಕೆ ಗಡಿ ದಾಟಿ ಬಂದಿರುವ ಭಾರತೀಯ ಪಡೆಗಳು ಅಡ್ಡಿಪಡಿಸಿವೆ. ತಕ್ಷಣ ಭಾರತ ತನ್ನ ಪಡೆಗಳನ್ನು ವಾಪಾಸು ಕರೆಸದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಚೀನಾದ ಮಾಧ್ಯಮಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಜಮ್ಮು-ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗಿನ ಸುಮಾರು 3,500 ಕಿ.ಮೀ. ವ್ಯಾಪ್ತಿಯ ಭಾರತ-ಚೀನಾ ಗಡಿಭಾಗದಲ್ಲಿ 220 ಕಿ.ಮೀ. ಪ್ರದೇಶ ಸಿಕ್ಕಿಂ ಭಾಗದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News