ಸಂಘಪರಿವಾರವನ್ನು ನಿಯಂತ್ರಿಸಿ ಎಂದು ಕೇಂದ್ರಕ್ಕೆ ಮಮತಾ ಮನವಿ

Update: 2017-07-18 06:14 GMT

ಹೊಸದಿಲ್ಲಿ, ಜು.18: ಪಶ್ಚಿಮ ಬಂಗಾಳದ ಮೇಲೆ ಎಡಪಕ್ಷಗಳ ಹಿಡಿತ ದುರ್ಬಲಗೊಳ್ಳುತ್ತಿದ್ದಂತೆಯೇ ರಾಜ್ಯದಲ್ಲಿ ಈಗ ಮಮತಾ ಬ್ಯಾನರ್ಜಿ ಸರಕಾರ ಮತ್ತು ಬಲಪಂಥೀಯ ಸಂಘಟನೆಗಳ ನಡುವಣ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಂತಾಗಿದೆ.

ರಾಜ್ಯದ ತೃಣಮೂಲ ಕಾಂಗ್ರೆಸ್ ವಿರುದ್ಧ ಆರೆಸ್ಸೆಸ್ ಹಾಗೂ ವಿಹಿಂಪ ಸಮರ ಸಾರಿದ್ದು ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಅವುಗಳು ಆರೋಪಿಸುತ್ತಿದ್ದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ರಾಜ್ಯದಲ್ಲಿ ಹೆಚ್ಚುತ್ತಿರುವ ಮತೀಯ ಹಿಂಸಾಚಾರಕ್ಕೆ ಬಲಪಂಥೀಯ ಸಂಘಟನೆಗಳನ್ನು ದೂರುತ್ತಿದ್ದಾರೆ.

ಕೊಲ್ಕತ್ತಾದ ಬಾಂಗ್ಲಾದೇಶ ಡೆಪ್ಯುಟಿ ಹೈಕಮಿಷನ್ ಕಚೇರಿಯೆದುರು ವಿಹಿಂಪ ಕಾರ್ಯಕರ್ತರು ಪ್ರತಿಭಟನೆ ನಡೆಸಿ ನೆರೆಯ ರಾಷ್ಟ್ರದಲ್ಲಿ ಹಿಂದೂಗಳು ಹಾಗೂ ಬೌದ್ಧ ಧರ್ಮೀಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿದರೆ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಕೆಡಿಸಲು ಯತ್ನಿಸುತ್ತಿರುವ ಬಲಪಂಥೀಯ ಸಂಘಟನೆಗಳನ್ನು ನಿಯಂತ್ರಿಸುವಂತೆ ಮಮತಾ ಕೇಂದ್ರವನ್ನು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಈಗಾಗಲೇ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದಾರೆಂದು ಹೇಳಲಾಗುತ್ತಿದೆಯಾದರೂ ತೃಣಮೂಲ ಕಾಂಗ್ರೆಸ್ ಈ ವಿಚಾರವನ್ನು ನಿರಾಕರಿಸಿದೆ.

ಅತ್ತ ಮಮತಾ ಬ್ಯಾನರ್ಜಿ ಅವರು ಹಿಂದೂ ವಿರೋಧಿ ಎಂದು ವಿಹಿಂಪ ಅವರನ್ನು ಜರಿದಿದೆಯಲ್ಲದೆ ವಿಹಿಂಪ ಪ್ರತಿಭಟನೆ ಆಯೋಜಿಸಿದ್ದರೆ ಮುಖ್ಯಮಂತ್ರಿ ಹಸ್ತಕ್ಷೇಪ ನಡೆಸಿ ತಾವು ಮುಸ್ಲಿಂ ಪರ ಹಾಗೂ ಹಿಂದು ವಿರೋಧಿ ಧೋರಣೆ ಹೊಂದಿರುವುದನ್ನು ತೋರ್ಪಡಿಸಿದ್ದಾರೆ ಎಂದಿದೆ.

‘‘ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ದೌರ್ಜನ್ಯವನ್ನು ನಾವು ಪ್ರತಿಭಟಿಸಿ ಅವರ ಹಕ್ಕುಗಳನ್ನು ರಕ್ಷಿಸಲು ಯತ್ನಿಸಿದರೆ ಅವರೇಕೆ ಹಸ್ತಕ್ಷೇಪ ನಡೆಸಬೇಕು ?’’ ಎಂದು ವಿಹಿಂಪ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News