ಬಾಲಿವುಡ್‌ಗೆ ತಟ್ಟಿದ ಜನಾಂಗೀಯವಾದ: ನಟ ಸಿದ್ದೀಕಿ ಆರೋಪ

Update: 2017-07-18 17:36 GMT

ಮುಂಬೈ,ಜು.18: ಬಾಲಿವುಡ್ ನಟ ನವಾಝುದ್ದೀನ್ ಸಿದ್ದೀಕಿಗೆ ಜೋಡಿಯಾಗಿ ಸುಂದರವಾದ ಆಕರ್ಷಕ ತಾರೆಯರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅದು ತುಂಬಾ ಆಭಾಸವಾಗಿ ಕಾಣುತ್ತದೆ ಎಂದು ಕಾಸ್ಟಿಂಗ್ ನಿರ್ದೇಶಕರೊಬ್ಬರು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದದ ಬಿರುಗಾಳಿಯನ್ನು ಎಬ್ಬಿಸಿದೆ.

ಆಬುಮೊಶಾಯ್ ಬಂದೂಕ್‌ಬಾಝ್ ಚಿತ್ರದ ಕಾಸ್ಟಿಂಗ್ ನಿರ್ದೇಶಕರಾದ ಸಂಜಯ್ ಚೌಹಾಣ್ ಅವರು ಡೆಕ್ಕನ್ ಕ್ರಾನಿಕಲ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಇಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ನವಾಝುದ್ದೀನ್ ಸಿದ್ದೀಕಿ, ‘‘ನಾನು ಕಪ್ಪು ಹಾಗೂ ಸ್ಪುರದ್ರೂಪಿಯಲ್ಲವೆಂಬ ಕಾರಣಕ್ಕಾಗಿ ಸುಂದರ ಹಾಗೂ ಆಕರ್ಷಕ ತಾರೆಯರಿಗೆ ಜೋಡಿಯಾಗಿ ನನ್ನನ್ನು ಆಯ್ಕೆ ಮಾಡಲಾಗದು ಎಂದು ನನಗೆ ಮನವರಿಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಆದರೆ ನಾನು ಆ ಬಗ್ಗೆ ಯಾವತ್ತೂ ಗಮನಹರಿಸಿಲ್ಲ’’ ಎಂದು ಚಾಟಿ ಬೀಸಿದ್ದಾರೆ.

ನವಾಝುದ್ದೀನ್ ಬಗ್ಗೆ ಸಂಜೀವ್ ಚೌಹಾಣ್ ಅವರ ವಿವಾದಾತ್ಮಕ ಹೇಳಿಕೆಗೆ ನಿರ್ದೇಶಕ ಹಂಸಲಾಲ್ ಮೆಹ್ತಾ ಸೇರಿದಂತೆ ಬಾಲಿವುಡ್‌ನ ಗಣ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನವಾಝುದ್ದೀನ್ ಅಪಾರ ಪ್ರತಿಭೆಯ ವಿಶೇಷ ನಟನೆಂದು ಅವರು ಪ್ರಶಂಸಿಸಿದ್ದಾರೆ.

  ಈ ಮಧ್ಯೆ ಎನ್‌ಡಿಟಿವಿ ಜೊತೆ ಮಾತನಾಡಿದ ನವಾಝುದ್ದೀನ್, ಜನಾಂಗೀಯ ವಾದವು ಎಲ್ಲೆಡೆಯೂ ಅಸ್ತಿತ್ವದಲ್ಲಿದೆಯೆಂದು ಹೇಳಿದ್ದಾರೆ. ತಾನು ಸುಂದರನಲ್ಲವೆಂಬ ಕಾರಣಕ್ಕಾಗಿ ಸಿನೆಮಾದಲ್ಲಿ ನಟಿಸಬೇಕೆಂಬ ತನ್ನ ಅಕಾಂಕ್ಷೆಯನ್ನು ತನ್ನ ಹಳ್ಳಿಯ ಮಂದಿ ಲೇವಡಿ ಮಾಡಿದ್ದರೆಂದು ಸಿದ್ದೀಕಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News