ಹೊಸ ಸಿನಿಮಾ 'ಹಲೋ ಮಾಮ'

Update: 2017-07-18 17:36 GMT

'ಬಿಗ್ ಬಾಸ್' ಬಳಿಕ ಎಲ್ಲೂ ಕಾಣಿಸಿರದ ಮೋಹನ್ 'ಹಲೋ ಮಾಮ'  ಚಿತ್ರದ ನಿರ್ದೇಶನದ ಮೂಲಕ ಮರಳಿ ಬರುತ್ತಿದ್ದಾರೆ. 'ಹಲೋ ಮಾಮ' ಎಂಬ ಹೆಸರಿನ ಕೆಳಗೆ 'ಥೂ.. ಹಂಗ್ ಕರೀಬೇಡ್ರೋ' ಎಂಬ ಉಪಶೀರ್ಷಿಕೆಯೊಡನೆ ಇರುವ ಈ ಚಿತ್ರದ ಪತ್ರಿಕಾಗೋಷ್ಠಿ ಗ್ರೀನ್ ಹೌಸ್ ರಾಜ್ ಮಿಲನ್ ನಲ್ಲಿ ನೆರವೇರಿತು.

ನಿರ್ದೇಶಕ ಹಾಗೂ ನಾಯಕ ಮೋಹನ್ ಮಾತನಾಡಿ ಚಿತ್ರದ ಶೀರ್ಷಿಕೆಯ ಮಹತ್ವವನ್ನು ವಿವರಿಸಿದರು. 'ಶಾಸ್ತ್ರೋಕ್ತವಾಗಿ ಹೆಣ್ಣನ್ನು ಕೈಗೆ ನೀಡೋರು ಮಾವ ಆದರೆ ಅನಧಿಕೃತವಾಗಿ ನಮಗೆ ಹೆಣ್ಣು ಕೊಡೋರು 'ಮಾಮ' ಆಗಿರುತ್ತಾರೆ. ಚಿತ್ರದಲ್ಲಿ ನಾನು ಅನಿವಾರ್ಯ ಕಾರಣದಿಂದ ಮಾಮ ಆಗುತ್ತೇನೆ.  ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಒಂದು ಸಂದೇಶವನ್ನು ಕೂಡ ನೀಡಿರುವುದಾಗಿ  ನನ್ನನ್ನು ಮಾಮ ಮಾಡುವ ಪ್ರಧಾನ ಪಾತ್ರವನ್ನು ಅರವಿಂದ್ ರಾವ್ ನಿರ್ವಹಿಸಿದ್ದಾರೆ ಎಂದರು.

ನಾಯಕಿಯರಲ್ಲೊಬ್ಬರಾಗಿ ಸಾಂಪ್ರದಾಯಿಕ ಹುಡುಗಿಯ ಪಾತ್ರದಲ್ಲಿ ಸಾಂಪ್ರತಾ ಭಾರ್ಗವ ಕಾಣಿಸಿಕೊಂಡಿದ್ದಾರೆ. ಮತ್ತೋರ್ವ ನಾಯಕಿ ಸೌಜನ್ಯಾರದ್ದು ಈಗಿನ ಕಾಲದ ಮಾಡರ್ನ್ ಹುಡುಗಿಯ ಪಾತ್ರ. ಚಿತ್ರಕ್ಕೆ ಛಾಯಾಗ್ರಾಹಕರಾಗಿ ಪ್ರಸಾದ್ ಬಾಬು ಸರ್ ಸಿಕ್ಕಿರೋದು ನನ್ನ  ಸೌಭಾಗ್ಯ. ಸಂಗೀತ ನಿರ್ದೇಶಕ ಧರಮ್ ಡಿಸೈನರ್ ಕೂಡ ಹೌದು. ಅವರು ಈಗಾಗಲೇ ಟ್ಯೂನ್ ಮಾಡಿರುವ ಮೂರು ಹಾಡುಗಳೂ ಚೆನ್ನಾಗಿವೆ. ಗಾಯಕರಾಗಿ ಸರೆಗಮಪ ಸಂಚಿತ್ ಹೆಗ್ಡೆಗೆ ಅವಕಾಶ ನೀಡಿದ್ದೇವೆ. ಅದೇ ರೀತಿ ಒಟ್ಟು ಹದಿನೈದು ಮಂದಿ ಹೊಸಬರನ್ನು   ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ಇದೇ ವಾರ ಚಿತ್ರೀಕರಣ ಶುರುವಾಗಲಿದ್ದು, ಮೂರೇ ತಿಂಗಳಲ್ಲಿ ಪೂರ್ತಿಗೊಳಿಸುವ  ಯೋಜನೆ ಹಾಕಿದ್ದೇವೆ' ಎಂದು ಮೋಹನ್ ಹೇಳಿದರು.

ಬಳಿಕ ಅರವಿಂದ್ ಮಾತನಾಡಿ, ಇದು ಬಿಗ್ ಬಾಸ್ ಗೆ ಹೋಗುವ ಮುನ್ನವೇ ಹಾಕಿದ ಯೋಜನೆಯಾಗಿತ್ತು. ಆದರೆ ಮೋಹನ್ ನೂರು ದಿನ ಮುಗಿಸಿ ಬರುವಾಗ ನಿರ್ಮಾಪಕರು ಬೇರೆ ಸಿನಿಮಾ ಮಾಡಿದ್ದರು. ಹಾಗಾಗಿ ನನ್ನ ಪರಿಚಿತರಾದ ಬಿಕೆ ಚಂದ್ರಶೇಖರ್ ರನ್ನು ನಿರ್ಮಾಪಕರಾಗಿಸಿದ್ದು ನಾನು ಕಾರ್ಯಕಾರಿ ನಿರ್ಮಾಪಕನ‌ ಸ್ಥಾನದಲ್ಲಿದ್ದೇನೆ. ಚಿತ್ರದ ಮೂಲಕ ಪ್ರಥಮ ಬಾರಿಗೆ ಕಾಮಿಡಿ ಜಾನರ್ ಪ್ರವೇಶಿಸಿದ್ದೇನೆ. ನನ್ನಿಂದ ಕಾಮಿಡಿ ಮಾಡಿಸುವ ಧೈರ್ಯ ತೋರಿರುವ ಮೋಹನ್ ರಿಗೆ ತ್ಯಾಂಕ್ಸ್. ಸದ್ಯ ಪೊಲೀಸ್ ಪಾತ್ರಗಳಿಂದ ಮುಕ್ತಿ ದೊರಕಿದ ಖುಷಿ ನನ್ನದು ಎಂದರು.

ಅರವಿಂದ್ ಗೆ ಜೋಡಿಯಾಗಿ ನಟಿಸುತ್ತಿರುವ ಮಂಗಳೂರ ಚೆಲುವೆ ಭೂಮಿಕಾ ಮಾತನಾಡಿ,  "ನನ್ನದು ಸದಾ ಗಂಡನ ಮೇಲೆ ಸಂದೇಹ ಪಡುವ ಕ್ಯಾರೆಕ್ಟರ್" ಎಂದರು. ಚಿತ್ರತಂಡದೊಂದಿಗೆ ನಿರ್ಮಾಪಕ ಬಿ.ಕೆ ಚಂದ್ರಶೇಖರ್ ಉಪಸ್ಥಿತರಿದ್ದರು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News