ಎಟಿಪಿ ಫೈನಲ್ಸ್ ಗೆ ಫೆಡರರ್ ಅರ್ಹತೆ

Update: 2017-07-18 18:38 GMT

ಲಂಡನ್, ಜು.18: ವಿಂಬಲ್ಡನ್ ಟೂರ್ನಿಯಲ್ಲಿ 8ನೆ ಪ್ರಶಸ್ತಿಯನ್ನು ಜಯಿಸಿ ದಾಖಲೆ ನಿರ್ಮಿಸಿದ್ದ ಸ್ವಿಸ್ ಆಟಗಾರ ರೋಜರ್ ಫೆಡರರ್ ದಾಖಲೆಯ 15ನೆ ಬಾರಿ ಎಟಿಪಿ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆಂದು ಎಟಿಪಿ ಸೋಮವಾರ ದೃಢಪಡಿಸಿದೆ.

35ರ ಹರೆಯದ ಫೆಡರರ್ ಲಂಡನ್‌ನಲ್ಲಿ ವರ್ಷಾಂತ್ಯದಲ್ಲಿ ನಡೆಯುವ ಎಟಿಪಿ ಫೈನಲ್ಸ್ ನಲ್ಲಿ 2002 ರಿಂದ 2015ರ ತನಕ ಸತತ 14 ಬಾರಿ ಸ್ಪರ್ಧಿಸಿದ್ದರು. ಕಳೆದ ವರ್ಷ ಗಾಯದ ಸಮಸ್ಯೆಯಿಂದಾಗಿ ಭಾಗವಹಿಸಿರಲಿಲ್ಲ. ‘‘ನವೆಂಬರ್‌ನಲ್ಲಿ ಲಂಡನ್‌ಗೆ ವಾಪಸಾಗುವುದನ್ನು ಎದುರು ನೋಡುತ್ತಿರುವೆ. ಕಳೆದ ವರ್ಷ ಎಟಿಪಿ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ಬೇಸರವಾಗಿದೆ. ನನಗೆ ಈ ಟೂರ್ನಿಯಲ್ಲಿ ಆಡುವುದಕ್ಕೆ ತುಂಬಾ ಇಷ್ಟಪಡುವೆ. 2002ರಿಂದ ಯಾವುದೇ ಟೂರ್ನಿಯನ್ನು ತಪ್ಪಿಸಿಕೊಂಡಿಲ್ಲ’’ ಎಂದು ಫೆಡರರ್ ಹೇಳಿದ್ದಾರೆ. 19 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಈ ವರ್ಷ ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಓಪನ್ ಸಹಿತ ಒಟ್ಟು 5 ಟೂರ್ನಮೆಂಟ್‌ಗಳನ್ನು ಜಯಿಸಿದ್ದಾರೆ. ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯು ನ.12 ರಿಂದ 19ರ ತನಕ ನಡೆಯಲಿದೆ. ಈ ಟೂರ್ನಿಗೆ ಫೆಡರರ್ ಹಾಗೂ ರಫೆಲ್ ನಡಾಲ್ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಉಳಿದ 8 ಆಟಗಾರರು ಇನ್ನಷ್ಟೇ ಅರ್ಹತೆ ಪಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News