×
Ad

210 ಸರಕಾರಿ ಜಾಲತಾಣಗಳಲ್ಲಿ ಆಧಾರ್ ವಿವರಗಳು: ಸಚಿವ ಚೌಧರಿ

Update: 2017-07-19 18:37 IST

ಹೊಸದಿಲ್ಲಿ,ಜು.19: ಶಿಕ್ಷಣ ಸಂಸ್ಥೆಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಿ ಇಲಾಖೆಗಳ ಸುಮಾರು 210 ಜಾಲತಾಣಗಳು ಫಲಾನುಭವಿಗಳ ಆಧಾರ್ ಸಂಖ್ಯೆಗಳು ಮತ್ತು ವೈಯಕ್ತಿಕ ವಿವರಗಳನ್ನು ತೋರಿಸುತ್ತಿರುವುದು ಕಂಡುಬಂದಿದೆ ಎಂದು ಸಹಾಯಕ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪಿ.ಪಿ.ಚೌಧರಿ ಅವರು ಬುಧವಾರ ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.

ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ)ವು ಇದನ್ನು ಗಮನಿಸಿದೆ ಮತ್ತು ಈ ಜಾಲತಾಣಗಳಿಂದ ಆಧಾರ್ ದತ್ತಾಂಶಗಳನ್ನು ತೆಗೆಸಲು ಸ್ಥಿತಿಗತಿಯ ಮೇಲೆ ನಿಯಮಿತ ನಿಗಾ ಇರಿಸಿದೆ. ಯುಐಡಿಎಐನಿಂದ ಆಧಾರ್ ದತ್ತಾಂಶ ಸೋರಿಕೆಯಾಗಿಲ್ಲ ಎಂದರು.

ಖಾಸಗಿ ಸಂಸ್ಥೆಗಳು ಬಯೊಮೆಟ್ರಿಕ್ಸ್ ಸೇರಿದಂತೆ ಯಾವುದೇ ಆಧಾರ್ ದತ್ತಾಂಶ ಗಳನ್ನು ಯುಐಡಿಎಐನಿಂದ ಪಡೆದುಕೊಂಡಿಲ್ಲ. ಸ್ಥಾಪಿತ ವಿಧಿವಿಧಾನಗಳು ಮತ್ತು ಶಿಷ್ಟಾಚಾರಗಳನ್ನು ಅನುಸರಿಸಿದ ಬಳಿಕ ಸುರಕ್ಷಿತ ಅನ್ವಯಿಕಗಳ ಮೂಲಕ ಅಧಿಕೃತ ಏಜೆನ್ಸಿಗಳೊಂದಿಗೆ ಮಾತ್ರ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ ಎಂದು ಚೌಧರಿ ತಿಳಿಸಿದರು.

2017,ಜುಲೈ 13ಕ್ಕೆ ಇದ್ದಂತೆ ವಿವಿಧ ಕೇಂದ್ರ ಸಚಿವಾಲಯಗಳು/ಇಲಾಖೆಗಳ 123 ಯೋಜನೆಗಳನ್ನು ಆಧಾರ್ ಕಾಯ್ದೆ, 2016ರ ಕಲಂ 7 ಅಥವಾ 57ರಡಿ ಅಧಿಸೂಚಿಸ ಲಾಗಿದೆ. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸಬ್ಸಿಡಿಗಳು, ಲಾಭಗಳು ಮತ್ತು ಸೇವೆಗ ಳನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ಫಲಾನುಭವಿಗಳ ಗುರುತನ್ನು ದೃಢೀಕರಿಸಿಕೊ ಳ್ಳಲು ಆಧಾರ್ ಸಂಖ್ಯೆಯು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News