‘ಪೋರ್ಚುಗೀಸ್ ಮ್ಯಾನ್ ಆಫ್ ವಾರ್’
ಪಣಜಿ,ಜು.19: ವಿಷಪೂರಿತ ಸ್ಪರ್ಶಾಂಗಗಳನ್ನು ಹೊಂದಿರುವ ಸಮುದ್ರಜೀವಿ ‘ಪೋರ್ಚುಗೀಸ್ ಮ್ಯಾನ್ ಆಫ್ ವಾರ್’ ಉತ್ತರ ಗೋವಾದ ಕಾಂಡೋಲಿಮ್‌ನಿಂದ್ ಸಿಂಕರಿಯಮ್‌ವರೆಗಿನ ಬೀಚ್‌ಗಳಲ್ಲಿ ಪತ್ತೆಯಾಗಿದ್ದು, ಈ ಭಾಗದಲ್ಲಿ ಕಡಲಿಗಿಳಿಯುವ ದುಸ್ಸಾಹಸ ಮಾಡದಂತೆ ದೃಷ್ಟಿ ಜೀವರಕ್ಷಕ ಸಂಸ್ಥೆಯು ಸ್ಥಳೀಯರಿಗೆ ಮತ್ತು ಪ್ರವಾಸಿಗಳಿಗೆ ಎಚ್ಚರಿಕೆ ನೀಡಿದೆ.
ಜೆಲ್ಲಿಫಿಷ್ ಅಥವಾ ಲೋಳೆಮೀನನ್ನು ಹೋಲುವ, ಸಾಮಾನ್ಯವಾಗಿ ‘ಬ್ಲೂಬಾಟಲ್’ ಎಂದು ಕರೆಯಲಾಗುವ ಈ ಜೀವಿಗಳ ಗುಂಪು ಮಂಗಳವಾರ ಕಾಂಡೋಲಿಮ್- ಸಿಂಕರಿಯಮ್ ಕಡಲದಂಡೆಯಲ್ಲಿ ಪತ್ತೆಯಾಗಿದ್ದು, ಇವು ಗಾತ್ರದಲ್ಲಿ ಒಂದು ಇಂಚಿಗಿಂತ ಕಿರಿದಾಗಿವೆ ಎಂದು ಅದು ತಿಳಿಸಿದೆ.
ಈ ಸಮುದ್ರಜೀವಿಯು ತನ್ನ ಉದ್ದನೆಯ ಸ್ಪರ್ಶಾಂಗಗಳ ಮೂಲಕ ತೀವ್ರ ನೋವ ನ್ನುಂಟು ಮಾಡುವ ಮುಳ್ಳನ್ನು ಚಿಮ್ಮಿಸುತ್ತದೆ. ಅಟ್ಲಾಂಟಿಕ್, ಪ್ಯಾಸಿಫಿಕ್ ಮತ್ತು ಹಿಂದು ಮಹಾಸಾಗರಗಳಲ್ಲಿ ಇದು ಕಂಡುಬರುತ್ತದೆ.
ಜೆಲ್ಲಿಫಿಷ್‌ಗಳಲ್ಲಿ ವಿಷಪೂರಿತ ಮತ್ತು ವಿಷರಹಿತ ವರ್ಗಗಳಿವೆ. ಹೆಚ್ಚಿನ ಜೆಲ್ಲಿಫಿಷ್‌ಗಳ ಮುಳ್ಳುಗಳು ಮಾನವನಿಗೆ ಅಪಾಯಕಾರಿಯಲ್ಲ, ಅವು ಚರ್ಮದಲ್ಲಿ ಸೌಮ್ಯ ಕೆರಳುವಿಕೆ ಯನ್ನುಂಟು ಮಾತ್ರ ಮಾಡುತ್ತವೆ. ಬ್ಲೂಬಾಟಲ್‌ನಂತಹ ಕೆಲವು ಜೆಲ್ಲಿಫಿಷ್‌ಗಳು ವಿಷಪೂರಿತವಾಗಿದ್ದು, ಅವುಗಳನ್ನು ಸ್ಪರ್ಶಿಸುವುದು ಅಪಾಯಕರ ಎಂದು ದೃಷ್ಟಿ ಸಂಸ್ಥೆಯು ತಿಳಿಸಿದೆ.