ಯುವಕನನ್ನು 27 ಬಾರಿ ಕೊಚ್ಚಿ ಕೊಂದ ದುಷ್ಕರ್ಮಿಗಳು
ಮುಂಬೈ, ಜು. 20: ಮಹಾರಾಷ್ಟ್ರ ಧುಲೆ ಎಂಬಲ್ಲಿ ವ್ಯಕ್ತಿಯೊಬ್ಬನನ್ನು 11 ಮಂದಿಯ ದುಷ್ಕರ್ಮಿಗಳ ತಂಡವೊಂದು ಹಾಡುಹಗಲೇ ತಲವಾರುಗಳಿಂದ ಕೊಚ್ಚಿ ಕೊಂದ ಭೀಭತ್ಸ ಘಟನೆಯ ವೀಡಿಯೊವೊಂದು ಘಟನೆ ನಡೆದು ಎರಡು ದಿನಗಳ ನಂತರ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಆತನ ಮೇಲೆ 27 ಬಾರಿ ಇರಿದಿದ್ದಾರೆನ್ನಲಾಗಿದೆ.
ವೀಡಿಯೊದಲ್ಲಿ ಸ್ಥಳೀಯ ಕ್ರಿಮಿನಲ್ ಎಂದು ಆರೋಪಿಸಲಾದ ರಫೀಕುದ್ದೀನ್ ಎಂಬವನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಆತ ಸತ್ತು ಬಿದ್ದ ನಂತರವೂ ಆತನ ದೇಹದ ಮೇಲೆ ತಲವಾರಿನಿಂದ ಚುಚ್ಚುತ್ತಿರುವುದು ಕಂಡು ಬಂದಿದೆ. ನಂತರ ಆತನ ತಲೆಗೂ ಗುಂಡಿಕ್ಕಿದ ದೃಶ್ಯ ಕೂಡ ದಾಖಲಾಗಿದೆ.
33 ವರ್ಷದ ರಫೀಕುದ್ದೀನ್ ಸ್ಥಳೀಯ ರಸ್ತೆ ಬದಿಯ ಟೀ ಸ್ಟಾಲ್ ಒಂದರಲ್ಲಿ ಚಹಾ ಸೇವಿಸುತ್ತಿದ್ದಾಗ ಅಲ್ಲಿಗೆ ದುಷ್ಕರ್ಮಿಗಳು ತಲವಾರು ಹಾಗೂ ದೊಣ್ಣೆಗಳೊಂದಿಗೆ ಆಗಮಿಸಿದ್ದರು. ಕೊಲೆ ನಡೆಸಿ ಕೂಡಲೇ ತಮ್ಮ ಬೈಕ್ ಹಾಗೂ ಸ್ಕೂಟರುಗಳಲ್ಲಿ ಅವರು ಪರಾರಿಯಾದರು. ಕೊಲೆ ನಡೆದ ಕೂಡಲೇ ತೆಗೆಯಲಾದ ಇನ್ನೊಂದು ವೀಡಿಯೋದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಫೀಕುದ್ದೀನ್ ದೇಹ ಕಾಣಿಸುತ್ತದೆ.
ಈ ಕೊಲೆಯ ಸಂಬಂಧ ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲವಾದರೂ ಟೀ ಸ್ಟಾಲ್ ಮಾಲಕ ಹಾಗೂ ಅಲ್ಲಿನ ಸಿಬ್ಬಂದಿಯಿಂದ ದೊರೆತ ಮಾಹಿತಿಯ ಆಧಾರದಲ್ಲಿ ಎಫ್ ಐ ಆರ್ ದಾಖಲಿಸಿ ಕೆಲವೊಂದು ದಾಳಿಕೋರರನ್ನು ಗುರುತಿಸಲಾಗಿದೆ. ಕೊಲೆ ನಡೆಸಿದವರು ವಿರೋಧಿ ಗ್ಯಾಂಗಿನವರಿರಬೇಕೆಂದು ಶಂಕಿಸಲಾಗಿದೆ. ರಫೀಖುದ್ದೀನ್ ವಿರುದ್ಧ 30 ಪ್ರಕರಣಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.