ಕೇರಳದಲ್ಲಿ 20 ಬ್ರಾಂಡ್ ಔಷಧಗಳ ಕೊರತೆ!
ಮಲಪ್ಪುರಂ,ಜು. 20: ಔಷಧ ತಯಾರಕರು ಹಾಗು ಹೋಲ್‍ಸೇಲ್ ವ್ಯಾಪಾರಿಗಳ ನಡುವೆ ನಡೆಯುತ್ತಿರುವ ಶೀತಲ ಸಮರದ ಹಿನ್ನೆಲೆಯಲ್ಲಿ ಕೇರಳದಲ್ಲಿ ಅತ್ಯವಶ್ಯಕ ಔಷಧಗಳ ಕೊರತೆಯುಂಟಾಗಿದೆ. 20 ಬ್ರಾಂಡ್ ಔಷಧಗಳ ಕೊರತೆ ಸೃಷ್ಟಿಯಾಗಿದೆ ಎಂದು ಡ್ರಗ್ಸ್ ಕಂಟ್ರೋಲರ್ ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದ ಹೆಚ್ಚಿನ ಜಿಲ್ಲೆಗಳಲ್ಲಿ ಔಷಧ ಕ್ಷಾಮ ಸಂಭವಿಸಿದೆ. ಬೆಲೆಯ ನಿಯಂತ್ರಣದ ಪಟ್ಟಿಯಲ್ಲಿ ಸೇರಿದ ಔಷಧಗಳ ಕಮಿಶನ್ ಕುರಿತು ಔಷಧ ತಯಾರಿಕಾ ಕಂಪೆನಿಗಳು ಮತ್ತು ವಿತರಕರ ನಡುವಿನ ವಿವಾದ ಔಷಧ ಕೊರತೆಗೆ ಕಾರಣವಾಗಿದೆ. ಆಂಟಿಬಯಾಟಿಕ್ ಔಷಧಗಳು, ನೋವುನಿವಾರಕಗಳು, ಹೃದ್ರೋಗ, ಕ್ಯಾನ್ಸರ್‍ಗಳಿಗಿರುವ ಮದ್ದುಗಳು, ಟಿಟಿ ವ್ಯಾಕ್ಸಿನ್ ಮುಂತಾದುವುಗಳ ಕೊರತೆ ಎದುರಾಗಿದೆ. ಇವುಗಳಲ್ಲಿ ಕೆಲವು ಅತ್ಯವಶ್ಯಕ ಪಟ್ಟಿಯಲ್ಲಿರುವ ಔಷಧಗಳು ಕೂಡಾ ಇವೆ.
ಜಿಎಸ್ಟಿ ಜಾರಿಗೆ ಬರುವ ಮೊದಲು ಇದ್ದ ಸ್ಟಾಕ್‍ಗೆ ಈಗ ಇರುವ ಕಮಿಶನ್ ಸಾಲದು, ಹೆಚ್ಚು ಕೊಡಬೇಕೆಂದು ಎಂದು ವ್ಯಾಪಾರಿಗಳ ಸಂಘಟನೆಯ ನಿಲುವಾಗಿದೆ. ಔಷಧ ಬೆಲೆಯ ನಿಯಂತ್ರಣ ಪಟ್ಟಿಗೆ ಒಳಪಟ್ಟ ಔಷಧಕ್ಕೆ ಈಗಿರುವ ಶೇ. ಎಂಟರ ಬದಲಿಗೆ ಶೇ. ಹನ್ನೆರಡರಷ್ಟು ಕಮಿಶನ್ ನೀಡಬೇಕೆಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಜಿಎಸ್ಟಿ ಬಂದ ಮೇಲೆ ಆದ ನಷ್ಟವನ್ನು ಭರ್ತಿ ಮಾಡಲು ಇದು ಅಗತ್ಯವೆಂದು ಹೋಲ್ಸ್‍ಸೇಲ್ ವ್ಯಾಪಾರಿಗಳು ಹೇಳುತ್ತಿದ್ದಾರೆ.
ಕೇರಳದ ಔಷಧ ತಯಾರಿ ಕಂಪೆನಿಗಳು ಶೇ. 7.5 ಕಮಿಶನ್ ನೀಡಲು ಒಪ್ಪಿಗೆ ನೀಡಿದ್ದರೂ ಬೃಹತ್ ಔಷಧ ಕಂಪೆನಿಗಳು ಇದಕ್ಕೆ ಸಿದ್ಧವಾಗಿಲ್ಲ. ಒತ್ತಡ ತಂತ್ರವೆಂಬ ನೆಲೆಯಲ್ಲಿ ಇವರು ರಾಜ್ಯದ ಹೊರಗಿನ ಕಂಪೆನಿಗಳಿಂದ ಇವರು ಸ್ಟಾಕ್ ಪಡೆಯುವುದನ್ನು ನಿಲ್ಲಿಸಿದ್ದಾರೆ. ಔಷಧ ಚೀಟಿಗಳಲ್ಲಿ ವೈದ್ಯರು ಹೆಸರು ಬರೆಯದ್ದರಿಂದ ಜೆನರಿಕ್ ಔಷಧವನ್ನು ಜನರಿಗೆ ಕೊಡಲು ಆಗದ ಸ್ಥಿತಿ ಇದೆ ಎಂದು ಡ್ರಗ್ ಕಂಟ್ರೋಲ್ ಅಧಿಕಾರಿಗಳು ತಿಳಿಸಿದ್ದಾರೆ.