ಎರಡು ಸಮಯ ವಲಯಗಳಿರಬೇಕು ಎಂಬ ಸಲಹೆ ಸಕ್ರಿಯ ಪರಿಶೀಲನೆಯಲ್ಲಿದೆ: ಕೇಂದ್ರ
ಹೊಸದಿಲ್ಲಿ,ಜು.20: ದೇಶದಲ್ಲಿ ಎರಡು ಸಮಯ ವಲಯಗಳಿರಬೇಕು ಎಂಬ ಸಲಹೆಯು ತನ್ನ ಸಕ್ರಿಯ ಪರಿಶೀಲನೆಯಲ್ಲಿದೆ ಎಂದು ಸರಕಾರವು ತಿಳಿಸಿದೆ.
ಬುಧವಾರ ಲೋಕಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಬಿಜೆಡಿ ಸದಸ್ಯ ಬಿ.ಮಹತಾಬ್ ಅವರು, ದೇಶದ ಪೂರ್ವ ಮತ್ತು ಪಶ್ಚಿಮ ಭಾಗಗಳ ನಡುವೆ ಸೂರ್ಯೋದಯ ಸಮಯಗಳಲ್ಲಿ ಸುಮಾರು ಎರಡು ಗಂಟೆಗಳ ಅಂತರವಿದೆ ಎಂದು ಹೇಳಿದರು.
ದೇಶದ ಈಶಾನ್ಯ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ನಡುಗಡ್ಡೆಗಳು ಹಾಗೂ ಲಕ್ಷದ್ವೀಪಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯಗಳು ಮುಖ್ಯಭೂಮಿಗಿಂತ ಭಿನ್ನವಾಗಿವೆ ಎಂದು ಬೆಟ್ಟು ಮಾಡಿದ ಅವರು, ಅರುಣಾಚಲ ಪ್ರದೇಶದಲ್ಲಿ ಬೆಳಗಿನ ನಾಲ್ಕು ಗಂಟೆಗೆ ಸೂರ್ಯೋದಯವಾಗುತ್ತದೆ, ಆದರೆ ಸರಕಾರಿ ಕಚೇರಿಗಳು ಬೆಳಿಗ್ಗೆ 10 ಗಂಟೆಗೆ ತೆರೆಯುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲ ಯವು ಈ ಬಗ್ಗೆ ಹಿಂದೆ ಅಧ್ಯಯನವನ್ನೂ ನಡೆಸಿತ್ತು ಎಂದರು.
ಸಮಯ ವಲಯವನ್ನು ಅರ್ಧ ಗಂಟೆಯಷ್ಟು ಹಿಂದೂಡಿದರೆ ಸುಮಾರು 2.7 ಶತಕೋಟಿ ಯೂನಿಟ್ ವಿದ್ಯುತ್‌ನ್ನು ಉಳಿಸಬಹುದು ಎಂದ ಅವರು, ಕಚೇರಿ ಸಮಯ ಗಳನ್ನು ಬದಲಾಯಿಸುವ ಬಗ್ಗೆ ಕೇಂದ್ರ ಸರಕಾರವು ಮಾತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದರು.
ಈಗಿರುವಂತೆ ಉತ್ತರ ಪ್ರದೇಶದ ಅಲಹಾಬಾದ್ ಮೂಲಕ ಹಾದು ಹೋಗಿರುವ 82.5ಇ ರೇಖಾಂಶವು ದೇಶದ ಮಾನಕ ಸಮಯವನ್ನು ನಿರ್ಧರಿಸಿದೆ ಮತ್ತು ಈ ಮಾನಕ ಸಮಯವನ್ನು ಹಿಂದೂಡಬೇಕಾದರೆ ಅದನ್ನು ಅಸ್ಸಾಂ-ಪಶ್ಚಿಮ ಬಂಗಾಳ ಗಡಿ ಸಮೀಪದ 90ಇ ರೇಖಾಂಶವು ನಿರ್ಧರಿಸಬೇಕಾಗುತ್ತದೆ ಎಂದ ಮಹತಾಬ, ಈಶಾನ್ಯ ರಾಜ್ಯಗಳಿ ಗಾಗಿ ಪ್ರತ್ಯೇಕ ಸಮಯ ವಲಯವಿರಬೇಕೆಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಪ್ರತಿಪಾದಿಸಿದ್ದರು ಎಂದು ಹೇಳಿದರು. ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಹಾಯಕ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವೈ.ಎಸ್.ಚೌಧರಿ ಅವರು, ಅರುಣಾಚಲ ಪ್ರದೇಶ ಸರಕಾರದಿಂದ ಇಂತಹ ಯಾವುದೇ ಮನವಿಯು ಕೇಂದ್ರಕ್ಕೆ ಬಂದಿಲ್ಲ ಎಂದು ತಿಳಿಸಿದರು.
ಎರಡು ಸಮಯ ವಲಯಗಳಿಗೆ ಆಗ್ರಹಗಳ ನಡುವೆಯೇ ಚೌಧರಿ ಅವರು, ರಷ್ಯಾ 11, ಅಮೆರಿಕ 9 ಸಮಯ ವಲಯಗಳನ್ನು ಹೊಂದಿದ್ದರೆ ಭಾರತ ಮತ್ತು ಚೀನಾ ಒಂದು ಸಮಯ ವಲಯವನ್ನು ಹೊಂದಿವೆ ಎಂದು ತಿಳಿಸಿದರು.
ಹಿಂದೆ ನಡೆಸಿದ ಅಧ್ಯಯನ ವರದಿಯನ್ನು ಸಾರ್ವಜನಿಕ ಅವಗಾಹನೆಗೆ ಇರಿಸುವಂತೆ ಮತ್ತು ಅದನ್ನು ಶೀಘ್ರವೇ ಜಾರಿಗೊಳಿಸುವಂತೆೆ ಮಹತಾಬ್ ಕೇಂದ್ರವನ್ನು ಆಗ್ರಹಿಸಿದರು.
ಎರಡು ಸಮಯ ವಲಯಗಳನ್ನು ಸೃಷ್ಟಿಸಿದರೆ ದೇಶವು ಉಳಿಸಬಹುದಾದ ಶಕ್ತಿಯ ಪ್ರಮಾಣ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು 2003ರಲ್ಲಿ ವರದಿಯೊಂದನ್ನು ಸಿದ್ಧಗೊಳಿಸಿತ್ತು.
ದೇಶವು ಎರಡು ಸಮಯ ವಲಯಗಳನ್ನು ಪಾಲಿಸಿದರೆ ಶಕ್ತಿಯ ಅಂತಹ ಗಣನೀಯ ಉಳಿತಾಯವೇನೂ ಆಗುವುದಿಲ್ಲ ಎಂದು ವರದಿಯು ಹೇಳಿದೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಸಚಿವಾಲಯದ ಹಿರಿಯ ವಿಜ್ಞಾನಿಯೋರ್ವರು ತಿಳಿಸಿದರು.
ಮಹತಾಬ್‌ರ ಸಲಹೆಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್, ಅವರು ಅತ್ಯಂತ ಮುಖ್ಯ ಮತ್ತು ಸೂಕ್ಷ್ಮವಿಷಯವನ್ನೆತ್ತಿದ್ದಾರೆ. ಈ ವಿಷಯವು ಸರಕಾರದ ಸಕ್ರಿಯ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.