ವಿಮಾನ ಪ್ರಯಾಣಿಕರಿಗೆ ನಿಷೇಧ ಹೇರಲು ಸಾಧ್ಯವಿಲ್ಲ: ಪಿ.ಜೆ. ಕುರಿಯನ್

Update: 2017-07-20 17:18 GMT

ಹೊಸದಿಲ್ಲಿ, ಜು. 20: ಸಂಸದರು ಸೇರಿದಂತೆ ಯಾರೊಬ್ಬರೂ ವಿಮಾನದಲ್ಲಿ ಪ್ರಯಾಣಿಸಲು ನಿಷೇಧ ಹೇರುವ ಅಧಿಕಾರ ಏರ್‌ಲೈನ್ಸ್‌ಗಳಿಗಿಲ್ಲ. ದೇಶದ ಕಾನೂನು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯಸಭೆಯ ಉಪಾಧ್ಯಕ್ಷ ಪಿ.ಜೆ. ಕುರಿಯನ್ ಗುರುವಾರ ಹೇಳಿದರು.

 ರಾಷ್ಟ್ರ ಸ್ವಾಮಿತ್ವದ ಏರ್ ಇಂಡಿಯಾ ಸೇರಿದಂತೆ ಪ್ರಮುಖ ದೇಶಿ ವಿಮಾನ ಸಂಸ್ಥೆಗಳು ಇತ್ತೀಚೆಗೆ ವಿಮಾನ ಪ್ರಯಾಣ ನಿಷೇಧ ಹೇರಿದ ಪ್ರಕರಣದ ಬಗ್ಗೆ ಸಮಾಜವಾದಿ ಪಕ್ಷದ ಸದಸ್ಯ ನರೇಶ್ ಅಗ್ರವಾಲ್ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ವಿಮಾನ ಸಂಸ್ಥೆಗಳು ಇಂತಹ ನಿರ್ಬಂಧಗಳನ್ನು ಹೇರಬಹುದೇ ಎಂಬುದನ್ನು ತಿಳಿಯಲು ಬಯಸಿದರು. ಅವರ ಪ್ರಕರಣಗಳಿಂದ ಸಂಸದರ ಹಕ್ಕುಚ್ಯುತಿ ಆಗುತ್ತದೆ. ಅಗ್ರವಾಲ್ ಅಭಿಪ್ರಾಯ ಒಪ್ಪಿಕೊಂಡ ಕುರಿಯನ್, ಇದು ವೌಲ್ಯಯುತ ಅಂಶ. ಕಾನೂನಿನ ವಿರುದ್ಧ ಯಾರೇ ಸಂಸದರು ಅಪರಾಧ ಎಸಗಿದರೆ, ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ದೇಶದ ಕಾನೂನು ಅವರಿಗೆ ಶಿಕ್ಷೆ ನೀಡುತ್ತದೆ ಎಂದು ಹೇಳಿದರು.

ಯಾರೊಬ್ಬರನ್ನೂ ಶಿಕ್ಷಿಸುವ ಅಧಿಕಾರ ವಿಮಾನ ಸಂಸ್ಥೆಗಳಿಗೆ ಇಲ್ಲ. ಸರಕಾರ ಇದನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂಬುದು ನನ್ನ ಭಾವನೆ. ಸಂಸದರು ಕೂಡ ನಾಗರಿಕರು. ಅವರು ತಪ್ಪು ಅಥವಾ ಅಪರಾಧ ಎಸಗಿದಲ್ಲಿ ದೇಶದ ಕಾನೂನು ಅವರನ್ನು ಶಿಕ್ಷಿಸುತ್ತದೆ. ಎಂದು ಅವರು ಹೇಳಿದರು.

ಕೆಲವು ಅಪರಾಧಗಳಿಗಾಗಿ ಸಂಸದರ ವಿರುದ್ಧ ನಿಷೇಧ ಹೇರಲಾಗಿದೆ. ಇದನ್ನು ಮಾಡಬಾರದು. ವಿಮಾನ ಸಂಸ್ಥೆಗಳಿಗೆ ಈ ಅಧಿಕಾರ ಇಲ್ಲ ಎಂದು ಅವರು ಹೇಳಿದರು.

  ಈ ಸಂದರ್ಭ ಕಾಂಗ್ರೆಸ್ ಸಂಸದ ಆನಂದ್ ಶರ್ಮಾ, ಉಪಾಧ್ಯಕ್ಷರು ಅಪರಾಧ ಎಂಬ ಪದದ ಬದಲು ಉಲ್ಲಂಘನೆ ಎಂಬ ಪದ ಬಳಸಬೇಕು ಎಂದು ವಿನಂತಿಸಿದರು. ಅದಕ್ಕೆ ಕುರಿಯನ್ ಅವರು, ಓರ್ವ ವ್ಯಕ್ತಿ ಇನ್ನೊಬ್ಬರಿಗೆ ಥಳಿಸಿದರೆ ಅದು ಅಪರಾಧ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News