ವಿಮಾನ ಪ್ರಯಾಣಿಕರಿಗೆ ಡಿಜಿಟಲ್ ಸಂಖ್ಯೆ: ಸರಕಾರದಿಂದ ಮಾತುಕತೆ ಆರಂಭ

Update: 2017-07-20 17:24 GMT

ಹೊಸದಿಲ್ಲಿ, ಜು. 20: ಟಿಕೆಟ್ ಕಾಯ್ದಿರಿಸುವ ಸಂದರ್ಭ ವಿಮಾನ ಪ್ರಯಾಣಿಕರಿಗೆ ಡಿಜಿಟಲ್ ಗುರುತು ಸಂಖ್ಯೆ ಒದಗಿಸಲು ಸರಕಾರ ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ಆರಂಭಿಸಿದೆ ಎಂದು ಗುರುವಾರ ಲೋಕಸಭೆಯಲ್ಲಿ ಮಾಹಿತಿ ನೀಡಲಾಯಿತು.

ನಾಗರಿಕ ವಿಮಾನ ಯಾನ ಸಚಿವ ಅಶೋಕ್ ಗಜಪತಿ ರಾಜು ಮಾತನಾಡಿ, ಪ್ರಯಾಣಿಕರಿಗೆ ಸೌಲಭ್ಯ ಒದಗಿಸಲು ತಂತ್ರಜ್ಞಾನ ಮೇಲ್ದರ್ಜೆಗೇರಿಸುವುದು ನಿರಂತರ ಪ್ರಕ್ರಿಯೆ ಎಂದರು.

ತಡೆ ರಹಿತ ವಿಮಾನ ಯಾನ ಸಾಧ್ಯವಾಗುವಂತೆ ವಿಮಾನ ಟಿಕೆಟ್ ಖರೀದಿಸುವ ಸಮಯ ವಿಮಾನದ ಪ್ರಯಾಣಿಕರಿಗೆ ಡಿಜಿಟಲ್ ಗುರುತು ಸಂಖ್ಯೆ ಒದಗಿಸುವ ಬಗ್ಗೆ ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಹಾಗೂ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು.

ಪ್ರಯಾಣಿಕರ ಅನುಕೂಲಕ್ಕೆ ತಂತ್ರಜ್ಞಾನ ಬಳಕೆ ಹಾಗೂ ವಿಮಾನ ನಿಲ್ದಾಣ, ಟ್ರಾವೆಲ್ ಏಜೆಂಟ್ ಹಾಗೂ ಇತರರೊಂದಿಗೆ ಅಂಕಿ-ಅಂಶ ಹಂಚಿಕೊಳ್ಳಲು ಸಮಾನ ಶಿಷ್ಟಾಚಾರದ ಬಗ್ಗೆ ವಿವಿಧ ಪಾಲುದಾರರೊಂದಿಗೆ ನಿರಂತರ ಚರ್ಚಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ವಿಮಾನ ಟಿಕೆಟ್ ಕಾಯ್ದಿರಿಸುವ ಸಂದರ್ಭ ಪ್ರಯಾಣಿಕರಿಗೆ ಅನನ್ಯ ಗುರುತು ಸಂಖ್ಯೆ ಒದಗಿಸುವುದನ್ನು ಕಡ್ಡಾಯಗೊಳಿಸುವ ಯೋಜನೆ ಸರಕಾರದ ಮುಂದಿದೆಯೇ ಎಂಬ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದಾದ್ಯಂತ ವಿಮಾನ ಪ್ರಯಾಣಿಕರಿಗೆ ಸೌಲಭ್ಯ ಒದಗಿಸಲು ತಂತ್ರಜ್ಞಾನ ಅನುಷ್ಠಾನಗೊಳಿಸಲು ತಾಂತ್ರಿಕ ಸಮಿತಿ ಸೇರಿದಂತೆ ಮೂರು ಸಮಿತಿಯನ್ನು ನಾಗರಿಕ ವಿಮಾನ ಯಾನ ಸಚಿವಾಲಯ ರೂಪಿಸಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News