ಹಿಂದೂ ಸ್ತ್ರೀಯರ ಉನ್ನತಿ ಮತ್ತ್ತು ಅವನತಿ: ಯಾರು ಹೊಣೆಗಾರರು?

Update: 2017-07-20 18:54 GMT

‘ಮಹಾಬೋಧಿ’ ನಿಯತಕಾಲಿಕೆಯ ಮೇ -ಜೂನ್ 1951ರ ಸಂಚಿಕೆಯಲ್ಲಿ ಪ್ರಕಟಗೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‌ರ ‘‘the rise and fall of the hindu women: who was responsible for it?’’ ಎಂಬ ಶೀರ್ಷಿಕೆಯ ಇಂಗ್ಲಿಷ್ ಲೇಖನದ ಅನುವಾದವಿದು.


ಭಾಗ-5

ಪ್ರೊ. ಮ್ಯಾಕ್ಸ್ ಮುಲ್ಲರ್‌ರ ಮಾತಿನಲ್ಲಿ:
 ‘‘ಬ್ರಾಹ್ಮಣರ ಮಹಿಳೆಯ ಗುಲಾಮಿ ನಿಯಮಗಳ ಹಿಂಸೆಯ ಸರಪಳಿಗಳು ಕೊಟ್ಟಕೊನೆಗೊಮ್ಮೆ ಹರಿದೊಗೆಯಲ್ಪಟ್ಟವೆಂದು ಭಾರತೀಯ ಇತಿಹಾಸವು ನಮಗೆ ಕಲಿಸುತ್ತದೆ. ಬೌದ್ಧ ತತ್ವಜ್ಞಾನವು ಮುಖ್ಯವಾಗಿ ಸಾಮಾಜಿಕ ವಿಷಮತೆಯ ಪಾಶದಿಂದ ಬಿಡುಗಡೆ ಮಾಡುವ ವೈಯಕ್ತಿಕ ಸ್ವಾತಂತ್ರದ ಹಕ್ಕು ಹಾಗೂ ತನ್ನಿಚ್ಛೆಯಂತೆ ಕಾಡಿಗೆ ತೆರಳಿ ಸ್ವತಂತ್ರವಾಗಿ ಆಧ್ಯಾತ್ಮಿಕವಾಗಿ ಜೀವನವನ್ನು ನಡೆಸುವ ಹಕ್ಕನ್ನು ಸ್ಥಾಪಿಸಿತೆಂಬುದು ಒಪ್ಪಿಕೊಳ್ಳಲು ಎಳ್ಳಷ್ಟೂ ಸಂದೇಹ ಬೇಕಿಲ್ಲ.’’

ಭಿಕ್ಕುಣಿಯರ ಸಂಘವನ್ನು ಭಿಕ್ಕುಗಳ ಸಂಘದ ಅಧಿಪತ್ಯದಲ್ಲಿ ಇರಿಸಲಾದ ಸಂಗತಿಯ ನಾಚಿಕೆಗೇಡು ತುಲನೆಯಲ್ಲಿ ಗಮನಿಸಿದರೆ ಬುದ್ಧನು ಭಾರತೀಯ ಸ್ತ್ರೀಯರಿಗೆ ನೀಡಿದ ಸ್ವಾತಂತ್ರ ಅದೆಷ್ಟೋ ಮಹತ್ವದ್ದು ಹಾಗೂ ಶ್ರೇಷ್ಠವಾದುದು. ಇದು ಕೇವಲ ಪೊಳ್ಳು ಸ್ವಾತಂತ್ರವಾಗಿರಲಿಲ್ಲ. ಭಿಕ್ಕುಣಿಯರು ಈ ಸ್ವಾತಂತ್ರವನ್ನು ಮನಸಾರೆ ಬರಮಾಡಿಕೊಂಡು ಅದನ್ನು ಕೊಂಡಾಡಿದರು. ‘‘ನಿಜವಾಗಿಯೂ ನಾನು ಸ್ವತಂತ್ರನಾಗಿದ್ದೇನೆ! ನಾನು ಮಿತಿಯಿಲ್ಲದ ಸ್ವತಂತ್ರಳು’’ ಎಂದು ಬ್ರಾಹ್ಮಣ ಕನ್ಯೆಯಾದ ಮುಕ್ತಾ ಭಿಕ್ಕುಣಿಯು ಗುಣಗಾನವನ್ನು ಮಾಡಿರುವಳು. ಇನ್ನೊಬ್ಬಳು ಬ್ರಾಹ್ಮಣ ಕನ್ಯೆಯಾದ ಮೆತ್ತಿಕಾ ಭಿಕ್ಕುಣಿಯೂ ಇದೇ ಬಗೆಯಾದ ಗುಣಗಾನವನ್ನು ಮಾಡಿದಳು. ‘‘ನಾನಿಲ್ಲಿ ಈ ಬಂಡೆ ಕಲ್ಲಿನ ಮೇಲೆ ಕುಳಿತು ಮನಸಾರೆ ಸ್ವಾತಂತ್ರವನ್ನು ಉಸಿರಾಡುತ್ತಿದ್ದೇನೆ,’’ ಎಂದಿರುವಳು.

ಮಿಸೆಸ್ ಹ್ರಿಸ್ ಡೆವಿಡ್ಸ್‌ರ ಹೇಳಿಕೆ ಮೇರೆಗೆ:
  ‘‘ಈ ಐಹಿಕ ಸ್ವಾತಂತ್ರವನ್ನು ಉಪಭೋಗಿಸಲೆಂದು ಅವರು (ಸ್ತ್ರೀಯರು) ತರುವಾಯದ ಕ್ರಿಶ್ಚಿಯನ್ ಸೋದರಿಯರಂತೆ, ತಮ್ಮೆಲ್ಲಾ ಸಾಮಾಜಿಕ ಪ್ರತಿಷ್ಠೆ, ಐಹಿಕ ವೈಭವ ಜೀವನ ಮತ್ತ್ತು ತಮ್ಮ ಮೊದಲ ಜೀವನವನ್ನು ಪೂರ್ತಿಯಾಗಿ ತ್ಯಜಿಸಿದರು. ಆದರೆ ಇದಕ್ಕೆ ಬದಲಾಗಿ ಅನುಬಂಧಿತ ಜೀವನವನ್ನು ಅದೆಷ್ಟೇ ಉದಾತ್ತೀಕರಿಸಲಾಗಿದ್ದರೂ, ಅದಕ್ಕೆ ಅದೆಷ್ಟೇ ಉತ್ತೇಜನವನ್ನು ನೀಡಲಾಗಿದ್ದರೂ ಅಥವಾ ಅದಕ್ಕೆ ಅದೆಷ್ಟೇ ದೊಡ್ಡ ಆಶ್ರಯ ದೊರೆತ್ತಿದ್ದರೂ, ಅವುಗಳೊಂದಿಗೆ ಹೋಲಿಸಿದರೆ ಅವರು ವೈಯಕ್ತಿಕ ಪ್ರತಿಷ್ಠೆಯನ್ನು ಪಡೆದಿದ್ದರು. ಈ ಭಗಿನಿಯು ಧಾರ್ಮಿಕ ಪುರುಷರಂತೆ ಬಟ್ಟೆಗಳನ್ನು ತೊಟ್ಟುಕೊಂಡು ಹಾಗೂ ಮುಂಡನ ಮಾಡಿಸಿಕೊಂಡು ಮುಕ್ತಳಾದಳು. ಅವಳು ತನಗೆ ಬೇಕಾದಲ್ಲಿ ಸಂಚರಿಸಲು ಮುಕ್ತಳಾದಳು. ಒಬ್ಬಳೇ ದಟ್ಟ ಕಾಡಿನಲ್ಲಿ ಹೋಗಬಲ್ಲವಳು ಅಥವಾ ಗಿರಿ ಶಿಖರವನ್ನು ಏರಬಲ್ಲವಳಾದಳು.’’

ಬುದ್ಧನು ಸ್ತ್ರೀಯರಿಗೆ ಭಿಕ್ಕುಣಿಯರಾಗುವ ಅಪ್ಪಣೆಯನ್ನು ನೀಡಿ, ಅವರಿಗೆ ಸ್ವಾತಂತ್ರದ ದಾರಿಯನ್ನು ತೆರೆದನೆಂದಷ್ಟೇ ಅಲ್ಲ, ಲಿಂಗಭೇದರಹಿತ ಪ್ರತಿಷ್ಠೆಯನ್ನು ಪಡೆದುಕೊಳ್ಳುವ ಸ್ವತಂತ್ರ ಮತಾಧಿಕಾರವನ್ನು ಅವರಿಗೆ ನೀಡಿದನು.

ಮಿಸೆಸ್ ಹ್ರಿಸ್ ಡೆವಿಡ್ಸ್‌ರ ಮಾತುಗಳಲ್ಲಿ:
 ‘‘ಬುದ್ಧಿ ಪ್ರಾಮಾಣ್ಯವನ್ನು ಹೊಂದಿದ ಅವಳ ‘ಅರ್ಹಂತ’ ಬಂಧುಗಳು ಅವಳಿಗೆ ಲಭಿಸಿದ ಸ್ವಾತಂತ್ರದಿಂದಾಗಿ ಅವಳೊಡನೆ ಲಿಂಗಭೇದದಿಂದ ನಡೆದುಕೊಳ್ಳದೆ, ಅವಳ ಸನ್ಯಾಸಿ ಜೀವನಕ್ಕೆ ಮನ್ನಣೆಯನ್ನು ನೀಡಿದರು. ಈ ಸ್ವಾತಂತ್ರ್ಯದಿಂದಾಗಿ ಅವಳಿಗೆ ಆಧ್ಯಾತ್ಮಿಕ ವಿಶ್ವದ ಅನುಭವಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಹೀಗಾಗಿ ಪಿಟಕಗಳಲ್ಲಿ ವರ್ಣಿಸಲಾದಂತೆ ಅವಳು ಬೌದ್ಧ ಜಗತ್ತಿನಲ್ಲಿ ತುಂಬಾ ಜಾಗೃತರೆಂದು ಸಂಭೋದಿಸಲಾದ ಕೆಲವೇ ಆಯ್ದ ಶ್ರೇಷ್ಠ ಅರಿಯೋ(ಸಂತ)ರ ಜೊತೆಗೆ ಬೌದ್ಧಿಕ ಸಂವಾದವನ್ನು ನಡೆಸಬಲ್ಲವಳಾದಳು, ಅವರಂತೆಯೇ ಎಲ್ಲಾ ಅಂಶಗಳನ್ನೂ ಸತ್ಯ ರೂಪದಲ್ಲಿ ಕಾಣುವ ಸಾಮರ್ಥ್ಯವನ್ನು ಪಡೆದುಕೊಳ್ಳಬಲ್ಲವಳಾದಳು.

ಭಿಕ್ಕುಣಿ ಸೋಮಾ ‘‘ಸ್ತ್ರೀಯ ನೈಸರ್ಗಿಕ ಜೀವನವು ನಮ್ಮ ಹಾಗೂ ಅರಿಯೋ ಇವರ ನಡುವೆ ತಡೆಯಾಗಲು ಹೇಗೆ ಸಾಧ್ಯ?’’ ಎನ್ನುತ್ತಾಳೆ.
‘‘ಅದು ಯಾರಲ್ಲಿ ಏನಿದೆ ಎನ್ನುವುದನ್ನು ಸೂಚಿಸುತ್ತದೆ
ಅಂತರ್ಜ್ಞಾನವು ಸತ್ಯದ ಪ್ರಮಾಣವನ್ನು ತಿಳಿಸುವುದೇ?

ಇದರ ಬಗೆಗೆ ಒಬ್ಬನಲ್ಲಿ, ಹೀಗಿರುವಲ್ಲಿ ನಾನು ಸ್ತ್ರೀಯೇ, ಅಥವಾ ನಾನೊಬ್ಬ ಪುರುಷನೇ? ಅಥವಾ ನಾನು ಏನೂ ಆಗಿಲ್ಲವೇ? ಎಂಬ ಪ್ರಶ್ನೆ ತಲೆದೋರಿದರೆ,
ಆಗ ‘ಮಾರ’ನೇ ಅದನ್ನು ಕುರಿತು ಹೇಳಲು ಸಮರ್ಥನು!’’

ಇದೆಂದರೇನೇ ಎಲ್ಲವೂ ಅಲ್ಲ. ಬುದ್ಧನು ಸ್ತ್ರೀಯರಿಗೆ ಭಿಕ್ಕುಣಿಯರಾಗಲು ಅಪ್ಪಣೆ ನೀಡುವ ಮೂಲಕ ಪುರುಷರ ಜೊತೆಗೆ ಸಮಾನವಾದ ದಾರಿಯನ್ನು ಅವರಿಗಾಗಿ ತೆರೆದನು.

ಮಿಸೆಸ್ ಹ್ರಿಸ್ ಡೆವಿಡ್ಸ್‌ರ ನಿಷ್ಕರ್ಷೆಯಂತೆ:
 ‘‘ತಾಂತ್ರಿಕ ದೃಷ್ಟಿಯಿಂದ, ಭಿಕ್ಕುಣಿಯರನ್ನು ಭಿಕ್ಕುಗಳಿಗಿಂತ ಖಾಯಮ್ಮಾಗಿ ಕೆಳಮಟ್ಟದಲ್ಲಿ ನೇಮಕ ಮಾಡಲಾದುದು ನಿಜ. ಥೇರಿ ಇವಳು ತನ್ನ ಬೌದ್ಧಿಕ ಹಾಗೂ ಲೌಕಿಕ ಸಾಮರ್ಥ್ಯದಿಂದ ಸಂಘದ ಸರ್ವೋಚ್ಚ ವ್ಯಕ್ತಿಗೆ ಸರಿ ಸಮಾನವಾದ ಸ್ಥಾನವನ್ನು ಪಡದುಕೊಳ್ಳಲು ಸಾಧ್ಯವಾಯಿತೆನ್ನುವುದು ಅಷ್ಟೇ ನಿಜ. ಜಿಞದ ಘಟನೆಯಂತೆ, ‘ಭದ್ದಾ’ ಇವಳು 34ನೆ ಬುದ್ಧನ ತರುವಾಯ ಸಂಘದ ಉತ್ತಾರಾಧಿಕಾರಿಯಾದ ಕಶ್ಯಪನಿಗೆ ಸಮಾನವಾದ ಆಧ್ಯಾತ್ಮಿಕ ಪಾತ್ರತೆಯನ್ನು ಪಡೆದಿದ್ದಳು. ಆಕೆ ವಿವಾಹಿತ, ಅವಿವಾಹಿತ, ಪರಿತ್ಯಕ್ತೆ ಹಾಗೂ ವಾರಂಗನೆಯರಂತಹ ಎಲ್ಲ ವರ್ಗಗಳ ಸ್ತ್ರೀಯರಿಗಾಗಿ ಅವರವರ ದಾರಿಯನ್ನು ತೆರೆದಿಟಿದ್ದಳು. ಹೀಗಾಗಿ ಅವರೆಲ್ಲರಿಗೆ ಪುರುಷನ ಸಮಾನವಾದ ಯೋಗ್ಯತೆ, ಸ್ವಾತಂತ್ರ, ಪ್ರತಿಷ್ಠೆ ಮತ್ತ್ತು ಸಮತೆಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು.
4

 ಒಂದು ಕಾಲಕ್ಕೆ ಭಾರತೀಯ ಸ್ತ್ರೀಯರಿಗೆ ಇದ್ದ ಸ್ಥಾನವು ತೀರ ಅಧಃಪತನಗೊಂಡಿತೆನ್ನುವಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಪ್ರಾಚೀನ ಕಾಲದಲ್ಲಿ ಅವರು ರಾಜಕೀಯ ವಿದ್ಯಮಾನಗಳಲ್ಲಿ ವಹಿಸಿದ ಪಾತ್ರದ ಬಗೆಗೆ ಹೆಚ್ಚೇನನ್ನೂ ಹೇಳಲಾಗದು. ಆದರೆ ದೇಶವನ್ನು ಬೌದ್ಧಿಕ ಹಾಗೂ ಸಾಮಾಜಿಕವಾಗಿ ರೂಪಿಸುವಲ್ಲಿ ಅವರು ಅತ್ಯುಚ್ಚವಾದ ಸ್ಥಾನವನ್ನು ಪಡೆದಿದದ್ದರೆನ್ನುವಲ್ಲಿ ಸಂದೇಹವೆ ಇಲ್ಲ. ಅಥರ್ವ ವೇದದನುಸಾರ, ಒಂದು ಕಾಲಕ್ಕೆ ಸ್ತ್ರೀಯು ‘ಉಪನಯನ’ ವಿಧಿಗೆ ಪಾತ್ರಳಾಗಿದ್ದಳೆನ್ನುವುದು ಸ್ಪಷ್ಟವಾಗಿದೆ. ಇದರಿಂದಾಗಿ ಮಗಳ ಬ್ರಹ್ಮಚರ್ಯೆ ಮುಗಿದ ಬಳಿಕ ಅವರು ಮದುವೆಗೆ ಯೋಗ್ಯಳಾದಳೆಂದು ಎನ್ನಲಾಗುತ್ತಿತ್ತು.

ಶ್ರೌತ ಸೂತ್ರದನ್ವಯ, ಸ್ತ್ರೀಯರು ವೇದಮಂತ್ರೋಚ್ಚಾರವನ್ನು ಮಾಡಬಲ್ಲವರಾಗಿದ್ದರು. ಅವರಿಗೆ ವೇದಗಳನ್ನು ಕಲಿಸಲಾಗುತ್ತಿತ್ತು, ಎನ್ನುವುದು ಸ್ಪಷ್ಟ. ಸ್ತ್ರೀಯರು ಗುರುಕುಲ(ವಿಶ್ವವಿದ್ಯಾನಿಲಯ)ಕ್ಕೆ ಹೋಗಿ ವೇದಗಳ ವಿವಿಧ ಶಾಖೆಗಳನ್ನು ಅಭ್ಯಸಿಸಿ ಅವುಗಳ ಮೀಮಾಂಸೆಯನ್ನು ಮಾಡುವಲ್ಲಿ ನಿಷ್ಣಾತರಾಗಿದ್ದರು. ಪಾಣಿನಿಯ ‘ಅಷ್ಟಾಧ್ಯಾಯ’ವು ಈ ಸಂಗತಿಗೆ ಸಾಕ್ಷ್ಯವನ್ನು ಒದಗಿಸುತ್ತದೆ. ಸ್ತ್ರೀಯರು ಶಿಕ್ಷಕಿಯರಾಗಿದ್ದರು. ಅವರು ವಿದ್ಯಾರ್ಥಿನಿಯರಿಗೆ ವೇದಗಳನ್ನು ಕಲಿಸುತ್ತಿದ್ದರೆಂದು ಪತಂಜಲಿಯ ಮಹಾಭಾಷ್ಯದಿಂದ ಕಂಡು ಬರುತ್ತದೆ. ಸ್ತ್ರೀಯರು ಧರ್ಮ, ತತ್ವಜ್ಞಾನ ಮತ್ತ್ತು ಮಾನಸ ಶಾಸ್ತ್ರ ಮೊದಲಾದ ಗಹನವಾದ ವಿಷಯಗಳ ಕುರಿತು ಪುರುಷರೊಡನೆ ಚರ್ಚಿಸುತ್ತಿದ್ದರು ಎನ್ನುವ ಕಥೆಗಳಿಗೆ ಕೊರತೆಯಿಲ್ಲ. ಮನುಪೂರ್ವ ಕಾಲದಲ್ಲಿ ಭಾರತೀಯ ಸ್ತ್ರೀಯರು ಜ್ಞಾನ ಮತ್ತ್ತು ವಿದ್ವತ್ತಿನ ಬಲದಿಂದ ಅತ್ಯುಚ್ಚವಾದ ಶಿಖರಗಳನ್ನು ತಲುಪುತ್ತಿದ್ದರೆನ್ನುವುದು ಜಲಕ ಹಾಗೂ ಸುಲಭಾ, ಯಾಜ್ಞವಲ್ಕ ಮತ್ತ್ತು ಗಾರ್ಗಿ, ಯಾಜ್ಞವಲ್ಕ್ಯ ಮತ್ತ್ತು ಮೈತ್ರೇಯಿ, ಅದರಂತೆಯೇ ಶಂಕರಾಚಾರ್ಯ ಮತ್ತ್ತು ವಿದ್ಯಾಧರಿಯರಲ್ಲಿ ಪ್ರಕಟವಾಗಿ ನಡೆದ ವಾದವಿವಾದಗಳ ಕಥೆಗಳಿಂದ ಕಂಡು ಬರುತ್ತದೆ.

ಒಂದು ಕಾಲಕ್ಕೆ ಸ್ತ್ರೀಯರನ್ನು ತುಂಬ ಗೌರವಿಸಲಾಗುತ್ತಿತ್ತು, ಎಂಬ ಬಗೆಗೆ ಭಿನ್ನಾಭಿಪ್ರಾಯವಿಲ್ಲ. ಪ್ರಾಚೀನ ಭಾರತದಲ್ಲಿ ರಾಜನ ಪಟ್ಟಾಭಿಷೇಕದ ಸನ್ನಿವೇಶದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದ ರತ್ನಗಳಲ್ಲಿ ರಾಣಿಯನ್ನೂ ಸಮಾವಿಷ್ಟಗೊಳಿಸಲಾಗಿತ್ತಲ್ಲದೆ ಅವನು ಉಳಿದವರಂತೆ ರಾಣಿಗೂ ಕಪ್ಪ ಕಾಣಿಕೆ ಕೊಡುತ್ತಿದ್ದನು. ಆಯ್ಕೆ ಹೊಂದಿದ ಈ ರಾಜನು ಕೇವಲ ರಾಣಿಯನ್ನಷ್ಟೇ ಸನ್ಮಾನಿಸಿದನೆಂದಲ್ಲ, ಬದಲು ಅವನು ಕನಿಷ್ಠ ಜಾತಿಯ ಇತರ ರಾಣಿಯನ್ನೂ ಸನ್ಮಾನಿಸಿದನು. ಅದೇ ರೀತಿ ಪಟ್ಟಾಭಿಷೇಕ ಸಮಾರಂಭದ ತರುವಾಯ ರಾಜನು ಪ್ರತಿಷ್ಠಿತ ಸ್ತ್ರೀಯರನ್ನು ವಂದಿಸುತ್ತಿದ್ದನು. ಇಡೀ ಜಗತ್ತಿನಲ್ಲಿಯೇ ಇದು ಸ್ತ್ರೀಯರ ಅತ್ಯುಚ್ಚವಾದ ಮಟ್ಟವಾಗಿದೆ. ಹೀಗಿದ್ದ ಮೇಲೆ ಯಾರು ಅವರ ಅವನತಿಗೆ ಹೊಣೆಗಾರರು? ಹಿಂದುಳಿದ ಕಾನೂನುಗಳನ್ನು ತಯಾರಿಸುವ ‘ಮನು’ ಅದಕ್ಕೆ ಹೊಣೆಗಾರನು. ಇದನ್ನು ಬಿಟ್ಟರೆ ಬೇರೆ ಯಾವುದೇ ಉತ್ತರವಿಲ್ಲ.

(ಕೃಪೆ: ಕನ್ನಡ ಮತ್ತ್ತು ಸಂಸ್ಕೃತಿ ಇಲಾಖೆ ಮತ್ತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News