ಫೆರಾರಿಯ ಉದ್ಯೋಗಿಗಳಿಗೆ ತಮ್ಮದೇ ಕಂಪನಿಯ ಕಾರಿನ ಮಾಲಿಕರಾಗುವ ಭಾಗ್ಯವಿಲ್ಲ!

Update: 2017-07-21 11:56 GMT

ಜಗತ್ಪಸಿದ್ಧ ಫೆರಾರಿ ಕಾರುಗಳ ಬಗ್ಗೆ ಕೇಳದವರಿಲ್ಲ. 2002ರಲ್ಲಿ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರಿಗೆ ಫಿಯೆಟ್ ವತಿಯಿಂದ ಆಗಿನ ಖ್ಯಾತ ಕಾರ್ ರೇಸ್ ಚಾಲಕ ಮೈಕಲ್ ಶುಮಾಕರ್ ಅವರು ಈ ಕಾರನ್ನು ಉಡುಗೊರೆಯಾಗಿ ನೀಡಿದ್ದು ಸುದ್ದಿಯಾಗಿತ್ತು. ಆದರೆ ಆಗ 75ಲ.ರೂ.ವೌಲ್ಯದ ಈ ಕಾರಿಗೆ ಪಾವತಿಸಬೇಕಾಗಿದ್ದ 1.13 ಕೋ.ರೂ.ಗಳ ಆಮದು ಸುಂಕಕ್ಕೆ ವಿನಾಯಿತಿ ನೀಡುವಂತೆ ತೆಂಡುಲ್ಕರ್ ಕೇಂದ್ರ ಸರಕಾರವನ್ನು ಕೋರಿಕೊಂಡಿದ್ದು ಅದಕ್ಕೂ ಹೆಚ್ಚಿನ ಸುದ್ದಿಯನ್ನುಂಟು ಮಾಡಿತ್ತು. ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾದಾಗ ತೆಂಡುಲ್ಕರ್ ಮನವಿಯನ್ನು ಪುರಸ್ಕರಿಸಲು ಕೇಂದ್ರವು ನಿರಾಕರಿಸಿತ್ತು. ಕೊನೆಗೆ ಉಡುಗೊರೆಯಾಗಿ ಕೊಟ್ಟ ತಪ್ಪಿಗೆ ಫಿಯೆಟ್ ಕಂಪನಿಯೇ ಆಮದು ಸುಂಕವನ್ನು ಭರಿಸಿತ್ತು. 12 ವರ್ಷಗಳ ಕಾಲ ತನ್ನ ಒಡೆತನದಲ್ಲಿದ್ದ ಕಾರನ್ನು ತೆಂಡುಲ್ಕರ್ 2014ರಲ್ಲಿ ಸೂರತ್‌ನ ಬಿಲ್ಡರ್ ಓರ್ವರಿಗೆ ಮಾರಾಟ ಮಾಡಿದ್ದರು.

ಫೆರಾರಿ ವರ್ಷಕ್ಕೆ ಕೇವಲ 8,000 ಕಾರುಗಳನ್ನು ತಯಾರಿಸುತ್ತದೆ ಮತ್ತು ಇವುಗಳನ್ನು ತಮ್ಮದಾಗಿಸಿಕೊಳ್ಳಲು ಗ್ರಾಹಕರು ವರ್ಷಗಟ್ಟಲೆ ಕಾಲ ಕಾಯುತ್ತಿರುತ್ತಾರೆ.
ಫೆರಾರಿ ಕಾರುಗಳನ್ನು ಆಯ್ದ ಕೆಲವರಿಗೆ, ಫೆರಾರಿ ಅತ್ಯಮೂಲ್ಯ ಎಂದು ಭಾವಿಸಿದವರಿಗೆ ಮಾತ್ರ ಆಹ್ವಾನದ ಮೂಲಕ ಮಾರಾಟ ಮಾಡಲಾಗುತ್ತದೆ. ಅಂದರೆ ನಿಮ್ಮ ಬಳಿ ಎಷ್ಟೇ ಹಣವಿದ್ದರೂ ಫೆರಾರಿಯ ಹಾಲಿ ಗ್ರಾಹಕರಲ್ಲದಿದ್ದರೆ ಈ ಕಾರನ್ನು ನೀವು ಖರೀದಿಸುವುದು ಅಸಾಧ್ಯ!

ಫೆರಾರಿ ಕಂಪನಿಯ ಉದ್ಯೋಗಿಗಳು ತಾವೇ ತಯಾರಿಸಿದ ಕಾರನ್ನು ಖರೀದಿಸುವು ದನ್ನು ನಿಷೇಧಿಸಲಾಗಿದೆ. ಕಂಪನಿಯ ಫಾರ್ಮುಲಾ 1 ಚಾಲಕರು ಮಾತ್ರ ಈ ಕಾರನ್ನು ಖರೀದಿಸಲು ಅವಕಾಶವಿದೆ.

ಸದ್ಯ ಕಂಪನಿಯಲ್ಲಿ ಇಂತಹ ಇಬ್ಬರು ಚಾಲಕರು ಮಾತ್ರ ಇದ್ದಾರೆ, ಸೆಬಾಸ್ಟಿಯನ್ ವೆಟ್ಟೆಲ್ ಮತ್ತು ಕಿಮಿ ರೈಕೊನೆನ್. ಆದರೆ ಅವರಿಗೂ ಕಂಪನಿಯು ಯಾವುದೇ ರಿಯಾಯಿತಿ ನೀಡಿಲ್ಲ. ಅವರು ಸಂಪೂರ್ಣ ಬೆಲೆ ತೆತ್ತೇ ಫೆರಾರಿ ಕಾರುಗಳನ್ನು ಖರೀದಿಸಿದ್ದಾರೆ.

ಸೀಮಿತ ಉತ್ಪಾದನೆ ಮತ್ತು ಅವುಗಳನ್ನು ಪಡೆಯಲು ಗ್ರಾಹಕರ ಸುದೀರ್ಘ ಕಾಯುವಿಕೆಯ ಹಿನ್ನೆಲೆಯಲ್ಲಿ ಕಾರುಗಳನ್ನು ತನ್ನದೇ ಉದ್ಯೋಗಿಗಳಿಗೆ ಮಾರಾಟ ಮಾಡುವುದು ಸರಿಯಲ್ಲ ಎನ್ನುವುದು ಫೆರಾರಿಯ ತತ್ವಜ್ಞಾನ. ಕಾರುಗಳೇನಿದ್ದರೂ ಮೊದಲು ಸೇರಬೇಕಾಗಿರುವುದು ಗ್ರಾಹಕರಿಗೇ ಎನ್ನುತ್ತಾರೆ ಫೆರಾರಿಯ ಮುಖ್ಯ ಮಾರುಕಟ್ಟೆ ಮತ್ತು ವಾಣಿಜ್ಯಿಕ ಅಧಿಕಾರಿ ಎನ್ರಿಕೊ ಗ್ಯಾಲಿಯೆರಾ.

ಕಂಪನಿಯು ತನ್ನ ಇತ್ತೀಚಿನ ಹೈಪರ್‌ಕಾರ್ ಲಾ ಫೆರಾರಿ ಅಪೆರ್ಟಾವನ್ನು ಮಾರಾಟಕ್ಕೆ ಬಿಡುಗಡೆಗೊಳಿಸಿದಾಗ 200 ಸಂಭಾವ್ಯ ಖರೀದಿದಾರರ ಪಟ್ಟಿಯನ್ನು ಸಿದ್ಧಗೊಳಿಸಿದ್ದು ಇದೇ ಗ್ಯಾಲಿಯೆರಾ. ಈ ನೂತನ ಕಾರನ್ನು ಖರೀದಿಸಲು ನಿಮಗೆ ಆಸಕ್ತಿಯಿದೆಯೇ ಎಂದು ಈ 200 ಜನರನ್ನು ಪ್ರಶ್ನಿಸಲಾಗಿತ್ತು ಮತ್ತು ಎಲ್ಲರೂ ‘ಹೌದು’ ಎಂದೇ ಉತ್ತರಿಸಿದ್ದರು. ಕಾರಿನ ಬೆಲೆ 1.2 ಮಿಲಿಯನ್ ಯುರೋ(ಸುಮಾರು 8.89 ಕೋಟಿ ರೂ.) ಆಗಿದ್ದು,ತೆರಿಗೆಗಳು ಪ್ರತ್ಯೇಕವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News