ಫ್ರೆಂಚ್ ಕಾಮಿಕ್ಸ್‌ಗಳಿಗೂ ವಸ್ತುವಾದ ಗೋರಕ್ಷಕರ ಹಿಂಸೆ, ಕೇಸರೀಕರಣ!
ಹೊಸದಿಲ್ಲಿ, ಜು.21: ಗೋರಕ್ಷಣೆಯ ಹೆಸರಿನಲ್ಲಿ ಭಾರತದ ವಿವಿಧೆಡೆ ಹಿಂಸಾಚಾರ, ನರಹತ್ಯೆಯ ಸರಣಿ ಘಟನೆಗಳು ವರದಿಯಾಗುತ್ತಿರುವ ಬೆನ್ನಲ್ಲೇ, ಸ್ವಯಂಘೋಷಿತ ಗೋರಕ್ಷಕರು ಹಾಗೂ ದೇಶದಲ್ಲಿ ಉಲ್ಬಣಿಸುತ್ತಿರುವ ಗುಂಪುಹಿಂಸೆಯ ಕುರಿತಾದ ಕಥಾವಸ್ತುವನ್ನು ಒಳಗೊಂಡ 30 ಪುಟಗಳ ಫ್ರೆಂಚ್ ಕಾಮಿಕ್ಸ್ ಪುಸ್ತಕವು ಭಾರೀ ಗಮನಸೆಳೆದಿದೆ.
ಫ್ರೆಂಚ್ ಪತ್ರಕರ್ತ ಹಾಗೂ ಬರಹಗಾರ ವಿಲಿಯಂ ದ ತಾಮಾರಿಸ್ ರಚಿಸಿರುವ ಈ ಕಾಮಿಕ್ಸ್ ಪುಸ್ತಕದಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಗೋಮಾಂಸ ನಿಷೇಧದ ಕುರಿತಾದ ಪ್ರಸ್ತಾಪವೂ ಇದೆ. ಭಾರತದಲ್ಲಿ ಬೆಳೆಯುತ್ತಿರುವ ಹಿಂದೂ ರಾಷ್ಟ್ರೀಯವಾದ ಹಾಗೂ ಕೇಸರಿ ವಿಚಾರಧಾರೆಗಳು ಹಾಗೂ ಹಿಂದೂ ರಾಷ್ಟ್ರ ಸಿದ್ಧಾಂತಗಳ ಬಗ್ಗೆ ಫ್ರೆಂಚ್ ಓದುಗರಿಗೆ ಈ ಕಾಮಿಕ್ಸ್ ಪುಸ್ತಕ ಮಾಹಿತಿ ನೀಡುತ್ತದೆ.
ಸ್ವಯಂಘೋಷಿತ ಗೋರಕ್ಷಕ ವಿಜಯಕಾಂತ್ ಚೌಹಾಣ್ ಎಂಬವರನ್ನು ಭೇಟಿ ಮಾಡಿದ ಬಳಿಕ ನನಗೆ ಈ ಕಾಮಿಕ್ ಪುಸ್ತಕವನ್ನು ರಚಿಸುವ ಸ್ಫೂರ್ತಿ ಮೂಡಿತೆಂದು ದ ತಮಾರಿಸ್ ಹೇಳುತ್ತಾರೆ. ಬೀಫ್ ಸಂಗ್ರಹಿಸಿದ್ದಾರೆಂದು ಆರೋಪಿಸಿ, 2015ರ ಸೆಪ್ಟೆಂಬರ್ ನಲ್ಲಿ ಉತ್ತರಪ್ರದೇಶದ ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್ ಎಂಬ ಅಮಾಯಕನ ಹತ್ಯೆ ನಡೆದ ಕೆಲವೇ ಸಮಯದ ಬಳಿಕ ತಮಾರಿಸ್ ಚೌಹಾಣ್‌ನನ್ನು ಭೇಟಿಯಾಗಿದ್ದರು. ಆನಂತರ ಅವರು ಕಾಮಿಕ್ಸ್ ಚಿತ್ರಬರಹಗಾರ ಜಾರ್ಜ್ ಎಚ್. ಜೊತೆಗೂಡಿ ಈ ವಿಷಯವಾಗಿ ಕಾಮಿಕ್ಸ್ ಪುಸ್ತಕವೊಂದನ್ನು ರಚಿಸಲು ತೀರ್ಮಾನಿಸಿದ್ದರು.
‘‘ಭಾರತವು ಸಹಿಷ್ಣುತೆಯ ನಾಡೆಂದೇ ನಾನು ಭಾವಿಸಿದ್ದೆ. ಆದರೆ ಗೋರಕ್ಷಕರ ದ್ವೇಷಭರಿತ ಚಿಂತನೆಗಳನ್ನು ಅರಿತು ನಾನು ಆಘಾತಗೊಂಡಿದ್ದೇನೆ’’ ದ ತಮಾರಿಸ್ ಹೇಳುತ್ತಾರೆ. ‘‘ಭಾರತವು ಗಾಂಧಿಯ ನಾಡೆಂದು ಫ್ರಾನ್ಸ್‌ನಲ್ಲಿ ಈಗಲೂ ಭಾವಿಸಲಾಗುತ್ತಿದೆ. ಆದರೆ ಅದು ಈಗ ಸತ್ಯವಾಗಿ ಉಳಿದಿಲ್ಲ’’ ಎಂದು ತಮಾರಿಸ್ ವಿಷಾದಿಸುತ್ತಾರೆ.
ಈ ಕಾಮಿಕ್ಸ್‌ನ ರಚನೆಗಾಗಿ ಈ ಇಬ್ಬರು ಫ್ರೆಂಚ್ ಬರಹಗಾರರು ಮಹಾರಾಷ್ಟ್ರ, ಹರ್ಯಾಣ, ರಾಜಸ್ಥಾನ, ಉತ್ತರಪ್ರದೇಶ ಹಾಗೂ ಕೇರಳಗಳಿಗೆ ಭೇಟಿ ನೀಡಿದ್ದರು. ಈ ಫ್ರೆಂಚ್ ಬರಹಗಾರರು ಮಹಾರಾಷ್ಟ್ರದಲ್ಲಿ ಸಾಂಪ್ರದಾಯಿಕವಾಗಿ ಮಾಂಸದ ವ್ಯಾಪಾರದಲ್ಲಿ ತೊಡಗಿರುವ ಖುರೇಷಿ ಸಮುದಾಯದ ಮುಸ್ಲಿಮರನ್ನು ಕೂಡಾ ಭೇಟಿಯಾಗಿದ್ದರು. ಬೀಫ್ ನಿಷೇಧ ಹಾಗೂ ಗೋರಕ್ಷಕರ ಹಿಂಸೆಯಿಂದ ಖುರೇಷಿ ಸಮುದಾಯದ ಜೀವನೋಪಾಯಕ್ಕೆ ತೀವ್ರವಾದ ಹೊಡೆತ ಬಿದ್ದಿರುವುದಲ್ಲದೆ, ಅವರು ನಿರಂತರವಾದ ಭೀತಿಯಲ್ಲೇ ಜೀವನಕಳೆಯುತ್ತಿರುವುದನ್ನು ಈ ಲೇಖಕರಿಗೆ ಮನವರಿಕೆಯಾಗಿದೆ.
ಈ ಕಾಮಿಕ್ಸ್ ಪುಸ್ತಕ ಬಿಡುಗಡೆಯಾದ ಬೆನ್ನಲ್ಲೇ ಫ್ರಾನ್ಸ್‌ನ ಮುಖ್ಯವಾಹಿನಿಯ ಮಾಧ್ಯಮಗಳು 2002ರಲ್ಲಿ ಗುಜರಾತ್ ಗಲಭೆಯ ವೇಳೆ ನಡೆದ ನರಮೇಧ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆಯೂ ಹಲವಾರು ಲೇಖನಗಳನ್ನು ಪ್ರಕಟಿಸಿವೆ. ಇತ್ತೀಚೆಗೆ ಫ್ರಾನ್ಸ್‌ನ ರೇಡಿಯೋ ವಾಹಿನಿಯೊಂದರಲ್ಲಿ ಪ್ರಕಟವಾದ ಚರ್ಚಾಗೋಷ್ಠಿಯಲ್ಲಿ ಕೋಮುವಾದಿ ರಾಜಕೀಯ ಹಾಗೂ ತೀವ್ರವಾದಿ ಚಿಂತನೆಗಳು ಭಾರತದಲ್ಲಿ ಅಸ್ಥಿರತೆಯುಂಟು ಮಾಡುತ್ತಿದೆಯೆಂದು ಅಭಿಪ್ರಾಯಿಸಿದೆ.
ಜೂನ್ ತಿಂಗಳಲ್ಲಿ ಫ್ರಾನ್ಸ್ ಗೆ ಮೋದಿ ಭೇಟಿ ನೀಡಿದಾಗ ಅವರನ್ನು ನೂತನ ಅಧ್ಯಕ್ಷರಿಂದ ಇಮಾನುವೆಲ್ ಮ್ಯಾಕ್ರೋನ್ ಹಾರ್ದಿಕವಾಗಿ ಸ್ವಾಗತಿಸಿದ್ದರು. ಪ್ರಧಾನಿಯಾದ ಬಳಿಕ ಮೋದಿ, ಫ್ರಾನ್ಸ್‌ಗೆ ಭೇಟಿ ನೀಡಿರುವುದು ಇದು ಮೂರನೆ ಸಲವಾಗಿದೆ.
ಭಾರತವು ಗಾಂಧಿಯ ನಾಡೆಂದು ಫ್ರಾನ್ಸ್‌ನಲ್ಲಿ ಈಗಲೂ ಭಾವಿಸಲಾಗುತ್ತಿದೆ. ಆದರೆ ಅದು ಈಗ ಸತ್ಯವಾಗಿ ಉಳಿದಿಲ್ಲ’’
ವಿಲಿಯಂ ದ ತಮಾರಿಸ್